ರಾಜ್ಯ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆ ಪರಿಶೀಲಿಸಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ

ಧಾರವಾಡ prajakiran.com  : ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆ 2021 ರ ಸಿದ್ಧತೆಗಳ ಕುರಿತು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ.ಬಿ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನೆ ಸಭೆ ಜರುಗಿತು.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಜರುಗುತ್ತಿದ್ದು, ಚುನಾವಣೆಗಳು ಮುಕ್ತ ಮತ್ತು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಹಾಗೂ ಶಾಂತಿಯುತವಾಗಿ ಜರುಗಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿರುವ ಎಲ್ಲ ಹಂತದ ಅಧಿಕಾರಿಗಳು ಆಯೋಗದ ನಿರ್ದೇಶನಗಳನ್ನು ಪಾಲಿಸುವ ಮೂಲಕ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ. ಬಸವರಾಜು ಅವರು ಹೇಳಿದರು.

ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಆಯೋಗವು ಗಂಭೀರವಾಗಿ ಪರಿಗಣಿಸುತ್ತದೆ.

ಚುನಾವಣಾ ಪ್ರಕ್ರಿಯೆಯು ಒಂದು ಚೈನ್ ಸಿಸ್ಟಮ್‍ದಲ್ಲಿ ನಡೆಯುತ್ತದೆ. ಮತ್ತು ಕರ್ತವ್ಯಗಳ ವಿಕೇಂದ್ರೀಕರಣವಾಗಿದ್ದು, ಪ್ರತಿಯೊಬ್ಬ ಅಧಿಕಾರಿಯೂ ತನ್ನದೇ ಆದ ಜವಾಬ್ದಾರಿ ಹೊಂದಿರುತ್ತಾನೆ ಎಂದು ಅವರು ಹೇಳಿದರು.

 ನೇಮಕವಾಗುವ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಗಳ ಕುರಿತು ಕೈಪಿಡಿಗಳನ್ನು ಓದಿ ತಿಳಿದುಕೊಳ್ಳಬೇಕು ಮತ್ತು ಯಾವುದೇ ಪ್ರಭಾವಗಳಿಗೆ, ಒತ್ತಡಗಳಿಗೆ ಒಳಗಾಗದೇ ನಿರ್ಭಯವಾಗಿ ಚುನಾವಣಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ, ಪರಿಶೀಲನೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳಿಂದ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ.

ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯು ಹೆಚ್ಚು ಮುಂಜಾಗೃತೆ ವಹಿಸಿ ಚುನಾವಣಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು.

ಮದ್ಯಸಂಗ್ರಹ, ಮದ್ಯಸರಬರಾಜು ಮತ್ತು ಮದ್ಯಬಳಕೆಯ ಕುರಿತು ಪ್ರತಿದಿನ ಮಾಹಿತಿ ಪಡೆದು ಪರಿಶೀಲಿಸಬೇಕು.

ಅಕ್ರಮಗಳ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ದಾಳಿ ಮಾಡಿ ವಶಪಡಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಹೇಳಿದರು.

ಪ್ರಸಕ್ತ ಚುನಾವಣೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಚುನಾವಣಾ ಆಯೋಗವು ಸೂಚಿಸಿ, ಕೋವಿಡ್ ಕುರಿತ ಎಸ್‍ಓಪಿ (SOP) ಯನ್ನು ನೀಡಿದೆ. ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮತ್ತು ಅಭ್ಯರ್ಥಿಯ ಪ್ರಚಾರಕ್ಕಾಗಿ ಯಾವುದೇ ರೀತಿಯ ಗುಂಪು ಸೇರುವುದು, ಮೆರವಣಿಗೆ, ವಾಹನ ಬಳಕೆ, ರ್ಯಾಲಿ, ಸಾರ್ವಜನಿಕ ಸಭೆ ಮುಂತಾದವುಗಳ ಆಯೋಜನೆಯನ್ನು ನಿರ್ಬಂಧಿಸಲಾಗಿದೆ.

ವಿದ್ಯುನ್ಮಾನ್, ಸಾಮಾಜಿಕ ಜಾಲತಾಣ ಹಾಗೂ ಮದ್ರಣ ಮಾದ್ಯಮ ಸೇರಿದಂತೆ ಕರಪತ್ರ, ಪೋಸ್ಟರ್ ಇತ್ಯಾದಿ ಮಾದ್ಯಮ ಮತ್ತು ಪ್ರಚಾರ ಸಾಮಾಗ್ರಿಗಳ ಬಳಕೆಗೆ ಅನುಮತಿ ನೀಡಲಾಗಿದೆ.

ಅಭ್ಯರ್ಥಿಗೆ ರೂ.3,00,000/- ಗಳವರೆಗೆ ವೆಚ್ಚ ಮಾಡಲು ಅನುಮತಿಸಲಾಗಿದ್ದು, ಪ್ರತಿದಿನ ವೆಚ್ಚದ ವಿವರಗಳನ್ನು ಅಭ್ಯರ್ಥಿಗಳು ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿ ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ. ಬಿ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮತ್ತು ವಿಶೇಷ ಭೂಸ್ವಾದೀನಾಧಿಕಾರಿ ವಿದ್ಯಾಧರ ಗುಳಗುಳಿ ಅವರನ್ನು ವಿದ್ಯುನ್ಮಾನ ಮತಯಂತ್ರಗಳ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್ ಅವರನ್ನು ತರಬೇತಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 403497 ಪುರುಷ, 407954 ಮಹಿಳಾ ಮತ್ತು ಇತರೆ 86 ಸೇರಿದಂತೆ ಒಟ್ಟು 811537 ಮತದಾರರು ಮತದಾನ ಮಾಡಲಿದ್ದಾರೆ. 82 ವಾರ್ಡ್ ವ್ಯಾಪ್ತಿಯಲ್ಲಿ 5 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತ್ತು 4,210 ಜನ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *