ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ೨೦೫ ಘೋರ ಕಳ್ಳಭಟ್ಟಿ ಪ್ರಕರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ೨೦೦೭-೦೮ ರಿಂದ ವಿವಿಧ ತಾಲೂಕುಗಳಲ್ಲಿ ಸುಮಾರು ೨೯ ಕಳ್ಳಭಟ್ಟಿ ಸಾರಾಯಿ ಕೇಂದ್ರಗಳಿದ್ದವು.

ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ನಿರಂತರ ದಾಳಿ ಹಾಗೂ ಗಸ್ತು, ಪರಿಶೀಲನೆಗಳಿಂದ ೨೭ ಕ್ಕೂ ಹೆಚ್ಚು ಕಳ್ಳಭಟ್ಟಿ ಕೇಂದ್ರಗಳು ಸಂಪೂರ್ಣ ನಿರ್ಮೂಲನೆಯಾಗಿವೆ.

ಅಣ್ಣಿಗೇರಿ ಮತ್ತು ತಡಸಿನಕೊಪ್ಪದಲ್ಲಿ ಮಾತ್ರ ಕಳ್ಳಭಟ್ಟಿ ಕೇಂದ್ರಗಳು ಕಂಡು ಬರುತ್ತಿದ್ದು, ಅಧಿಕಾರಿಗಳು ನಿರಂತರ ದಾಳಿ, ಗಸ್ತು, ಪರಿಶೀಲನೆ ಮೂಲಕ ನೀಗಾ ಇಟ್ಟಿದ್ದು, ನಿಯಂತ್ರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ   ಮಾತನಾಡಿ, ಜಿಲ್ಲೆಯಲ್ಲಿ ೨೦೨೦-೨೧ ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ ೨೮೪.೪೨ ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ. ಜಿಲ್ಲೆಯಲ್ಲಿ ೨೭೬ ವಿವಿಧ ಪ್ರಕಾರದ ಮದ್ಯ ಮಾರಾಟ ಸನ್ನದುಗಳಿವೆ ಎಂದು ಅವರು ತಿಳಿಸಿದರು.

ಆಗಸ್ಟ್-೨೦೧೯ ತಿಂಗಳಲ್ಲಿ ವಿಚಕ್ಷಣೆಯಲ್ಲಿದ್ದ ಧಾರವಾಡ ತಾಲೂಕಿನಲ್ಲಿ ಜೈ ಭಾರತ ಕಾಲೋನಿ, ಜೋಗೆಲ್ಲಾಪೂರ ಮತ್ತು ಕಲಘಟಗಿ ತಾಲೂಕಿನ ಶಿಗಿಗಟ್ಟಿ ತಾಂಡಾಗಳಲ್ಲಿದ್ದ ಕಳ್ಳಭಟ್ಟಿ ಕೇಂದ್ರಗಳಲ್ಲಿನ ಕಳ್ಳಭಟ್ಟಿ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದ್ದು, ಈಗ ವಿಚಕ್ಷಣ ಪಟ್ಟಿಯಿಂದ ಅವುಗಳನ್ನು ಕೈಬಿಡಲಾಗಿದೆ ಎಂದರು.

೨೦೧೮-೧೯ ರಿಂದ ೨೦೨೦-೨೧ ಆಗಸ್ಟ್ ತಿಂಗಳವರೆಗೆ ಅಬಕಾರಿ ಇಲಾಖೆಯಿಂದ ಕಳ್ಳಭಟ್ಟಿ ನಿರ್ಮೂಲನೆಗಾಗಿ ೨೦೫ ಘೋರ ಪ್ರಕರಣಗಳು, ೧೪ ಕಳ್ಳಭಟ್ಟಿ ಸಂಬಂಧಿತ ಪ್ರಕರಣಗಳನ್ನು ದಾಖಲಿಸಲಾಗಿದೆ.

ಒಟ್ಟು ೪೧.೨೦೦ ಲೀಟರ್ ಕಳ್ಳಭಟ್ಟಿ, ೨೭೧೨ ಲೀಟರ್ ಬೆಲ್ಲದ ಕೊಳೆ ಹಾಗೂ ಕೆಜಿ ಬೆಲ್ಲ ವಶ ಪಡಿಸಿಕೊಂಡು, ನಾಶ ಪಡಿಸಲಾಗಿದೆ.

ಆರು  ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಸತತ ಪ್ರಯತ್ನ, ನಿರಂತರ ದಾಳಿ ಹಾಗೂ ಗಸ್ತು ಕಾರ್ಯಗಳಿಂದಾಗಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ೨೬ ಕಳ್ಳಭಟ್ಟಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ ಸಭೆಗೆ ತಿಳಿಸಿದರು.

ಸಭೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್,  ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶವಂತ ಕ್ಷೀರಸಾಗರ, ಉಪ ಪೊಲೀಸ್ ಆಯುಕ್ತರಾದ ಜಿ.ಕೃಷ್ಣಕಾಂತ, ಆರ್.ಬಿ. ಬಸರಗಿ, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಅಬಕಾರಿ ಅಧೀಕ್ಷಕ ಮಂಜುನಾಥ, ಉಪ ಅಧೀಕ್ಷಕ ಆತ್ಮಲಿಂಗ ಮಠಪತಿ, ಅಬಕಾರಿ ಅಧೀಕ್ಷಕಿ ದೀಪಾಲಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *