minister shetter
ರಾಜ್ಯ

ಧಾರವಾಡ ಜಿಲ್ಲೆಯ ೨೧೫೨ ಜನ ಗುಣಮುಖ

ಒಟ್ಟು ೪,೬೪೪ ಜನರಲ್ಲಿ ಸೋಂಕು

ಕೊರೊನಾ ಸೋಂಕಿತರ ಉತ್ತಮ ಚಿಕಿತ್ಸೆ :

ಗುಣಮುಖವಾದವರ ಸಂಖ್ಯೆ ಹೆಚ್ಚಳ

ಧಾರವಾಡ prajakiran.com : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು ೪೦,೩೯೩ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೆ ಒಟ್ಟು ೪,೬೪೪ ಜನರಲ್ಲಿ ಸೋಂಕು ಪತ್ತೆಯಾಗಿದೆ.

೨೩೩೭ ಜನರಿಗೆ ಚಿಕಿತ್ಸೆ ನಡೆಯುತ್ತಿದ್ದು, ಸುಮಾರು ೨೧೫೨ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಹೋಮ್ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಲಹೆ ಸೂಚನೆ ನೀಡುವ ಕೆಲಸ ಇನ್ನಷ್ಟು ಚುರುಕಾಗಬೇಕು ಎಂದು ಬೃಹತ್, ಮಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಕೊವಿಡ್ ಚಿಕಿತ್ಸೆ ನಿಯಂತ್ರಣ ಮತ್ತು ಜನಜಾಗೃತಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಸುಮಾರು ೫೫೪ ಜನ ಸೋಂಕಿತರು ಹೋಮ್ ಐಸೊಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಕಾಲಕಾಲಕ್ಕೆ ಆರೋಗ್ಯ ತಂಡ ಭೇಟಿ ನೀಡಿ ಅಗತ್ಯ ಔಷಧಿ, ಆರೋಗ್ಯ ಸಲಹೆ ನೀಡುವಲ್ಲಿ ಹೋಮ್ ಐಸೋಲೇಷನ್ ತಂಡ ಇನ್ನಷ್ಟು ಕ್ರಿಯಾಶೀಲವಾಗಿರಬೇಕು.

ಸೋಂಕಿತರು ಪತ್ತೆ ಆಗುವ ಪ್ರದೇಶಗಳ ಸೀಲ್‌ಡೌನ್ ಕಠಿಣಗೊಳಿಸಿ, ಅವಧಿ ಮುಗಿದ ನಂತರ ತಕ್ಷಣ ಸೀಲ್‌ಡೌನ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು.

ದಿನದಿಂದ ದಿನಕ್ಕೆ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಹೆಚ್ಚು ಹೆಚ್ಚು ಜನರನ್ನು ಕೊವಿಡ್ ಪರೀಕ್ಷೆ ಒಳಪಡಿಸುತ್ತಿರುವುದು ಕಾರಣವಾಗಿದ್ದು, ಜನರು ಆತಂಕ, ಭಯ ಪಡದೆ ಸರ್ಕಾರ ಸೂಚಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಕೋವಿಡ್ ಚಿಕಿತ್ಸೆ ನೀಡುವ ವೈದ್ಯರಿಗೆ, ಸುಶ್ರೂಷಕರಿಗೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್, ಮುಖಗವಸು, ಕೈಗವಸು ನೀಡಬೇಕು.

ಯಾವುದೇ ಕಂಪನಿ ಕಳಪೆ ಮಟ್ಟದ ಆರೋಗ್ಯ ಪರಿಕರಗಳನ್ನು ಸರಬರಾಜು ಮಾಡಿದರೆ ತಕ್ಷಣ ಅವುಗಳನ್ನು ತಿರಸ್ಕರಿಸಿ ಸರಬರಾಜುದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಚಿವರು ತಿಳಿಸಿದರು.

 ಪೌರಕಾರ್ಮಿಕರಿಗೆ ಆರೋಗ್ಯ ರಕ್ಷಾ ಕವಚಗಳನ್ನು ನೀಡಿ ಅವರು ಸ್ವಚ್ಛತಾ ಕಾರ್ಯ ಮಾಡುವಾಗ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿ ಅಧಿಕಾರಿಗಳು ಪರಿಶೀಲಿಸಬೇಕೆಂದು ಸಚಿವರು ಹೇಳಿದರು.

 ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ದಂಡವಿಧಿಸುವ ಕೆಲಸ ನಗರ ಪ್ರದೇಶದಲ್ಲಿ ಉತ್ತಮವಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ದಂಡ ವಿಧಿಸುವ ಕಾರ್ಯ ಹೆಚ್ಚಿಸಬೇಕು.

ಗ್ರಾಮೀಣ ಪೊಲೀಸರು ಹೆಚ್ಚು ಕಾಳಜಿಪೂರ್ವಕ ಈ ಕೆಲಸ ಮಾಡಬೇಕು. ಎಸ್‌ಪಿ ಹಾಗೂ ಡಿವೈಎಸ್‌ಪಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಚಿವರು ನಿರ್ದೇಶಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *