ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ರಾತ್ರಿ ೯ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೆ ಕರ್ಫ್ಯೂ

ಧಾರವಾಡ prajakiran.com : ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ, ೨೦೦೫ ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ  ಅನ್‌ಲಾಕ್-೨ ರ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಿಸಿದ್ದಾರೆ. 

ಈ ಮಾರ್ಗಸೂಚಿಗಳು ಜುಲೈ ೨೨ ರ ಬೆಳಿಗ್ಗೆ ೫ ಗಂಟೆಯಿಂದ ಜುಲೈ ೩೧ರ ವರೆಗೆ ಜಾರಿಯಲ್ಲಿರುತ್ತವೆ. ಕೋವಿಡ್ ಹರಡುವಿಕೆಯನ್ನ ನಿಯಂತ್ರಿಸಲು, ಸೊಂಕು ಪತ್ತೆ ಹಚ್ಚುವಿಕೆ, ಪರೀಕ್ಷೆ, ಟ್ರ್ಯಾಕಿಂಗ್, ತಾಂತ್ರಿಕತೆ ಉಪಯೋಗಿಸಿ ಚಿಕಿತ್ಸೆ ನೀಡುವುದು

ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ಮಾನವ ಸಂಪನ್ಮೂಲವನ್ನು ನಿಯೋಜಿಸುವ ಮೂಲಕ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಆರೋಗ್ಯ ಸೇವಾ ಸೌಲಭ್ಯವನ್ನು ಹೆಚ್ಚಿಸಲಾಗಿದೆ.

ರಾತ್ರಿ ಕರ್ಫ್ಯೂ : ಜಿಲ್ಲೆಯಾದ್ಯಂತ ರಾತ್ರಿ ೯ ಗಂಟೆಯಿಂದ ಬೆಳಗ್ಗೆ ೫  ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.ಭಾನುವಾರದ ಲಾಕ್‌ಡೌನ್ ಮುಂದುವರಿಕೆ: ಪ್ರಸ್ತುತ ಚಾಲ್ತಿಯಲ್ಲಿರುವ ಪ್ರತಿ ಭಾನುವಾರ ಲಾಕ್‌ಡೌನ್ ಮುಂದುವರೆಯಲಿದೆ.

ಜನ ಸಂದಣಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎ.ಪಿ.ಎಂ.ಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸುವುದು, ಉದ್ಯಾನವನಗಳಲ್ಲಿ ಜಿಮ್, ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್‌ಗಳ ಬಳಸುವಿಕೆ ನಿಷೇಧ 

ಜಿಲ್ಲೆಯಾದ್ಯಂತ ಯಾವುದೇ ದೇವಸ್ಥಾನ, ಚರ್ಚ್, ಮಸೀದಿ, ಧಾರ್ಮಿಕ ಮಂದಿರಗಳು, ಪ್ರಾರ್ಥನಾ ಮಂದಿರಗಳು  ಹಾಗೂ ಉತ್ಸವ, ಉರುಸು, ಮೆರವಣಿಗೆ, ಧಾರ್ಮಿಕ ಆಚರಣೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಕಂಟೈನ್‌ಮೆಂಟ್ ವಲಯಗಳಲ್ಲಿ ಈ ಹಿಂದೆ ಹೊರಡಿಸಿದ ನಿರ್ಬಂಧಗಳು ಮುಂದುವರೆಯುವದು. ಅಂಗಡಿಗಳಲ್ಲಿ ೫ ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ.

ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಬೇಕು. ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ, ಕೋಚಿಂಗ್ ಸ್ಟಡಿಸೆಂಟರ್ ಮುಂತಾದ ಸಂಸ್ಥೆಗಳು ಮುಚ್ಚಿರಬೇಕು. ಆನ್‌ಲೈನ್ ಅಥವಾ ದೂರ ಶಿಕ್ಷಣ ಕಲಿಕೆಗೆ ಅವಕಾಶವನ್ನು ಮುಂದುವರೆಸಿದೆ.

ಎಲ್ಲಾ ಸಿನಿಮಾ ಮಂದಿರಗಳು, ಜಿಮ್ನಾಷಿಯಮ್‌ಗಳು, ಈಜುಕೊಳಗಳು, ರಂಗ ಮಂದಿರಗಳ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಎಲ್ಲಾ ಸಾಮಾಜಿಕ, ರಾಜಕೀಯ ಕ್ರೀಡಾ ಮನರಂಜನಾ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಇತರೆ ಸಭೆಗಳು ಹಾಗೂ ಬೃಹತ್ ಜನಸ್ತೋಮಗಳು ಸಂಪೂರ್ಣ ನಿಷೇಧಿಸಲಾಗಿದೆ.

ಜಿಲ್ಲೆಯಲ್ಲಿನ ಮದುವೆ ಹಾಗೂ ಶವ ಸಂಸ್ಕಾರ ಕಾರ್ಯದಲ್ಲಿ ಕೇವಲ ೨೦ ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *