ಜಿಲ್ಲೆ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಒತ್ತಾಯಿಸಿ ಸಿಎಂ ಗೆ ಮನವಿ

ಬೆಂಗಳೂರು prajakiran.com :  ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಭಾಪತಿ ಡಾ.ವೀರಣ್ಣ ಮತ್ತಿಕಟ್ಟಿ ನೇತೃತ್ವದಲ್ಲಿಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಬೆಂಗಳೂರು ನಂತರ ಹುಬ್ಬಳ್ಳಿ – ಧಾರವಾಡ ಮಹಾನಗರಪಾಲಿಕೆ ಅತ್ಯಂತ ದೊಡ್ಡದು ಮತ್ತು ಜನಸಂಖ್ಯೆ ಕೂಡ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಹುಬ್ಬಳ್ಳಿ – ಧಾರವಾಡವನ್ನು ಸೇರಿಸಿ ಮಹಾನಗರಪಾಲಿಕೆ ಮಾಡಿದರು .

ಅಂದು ಧಾರವಾಡದ ನಲವಡಿಯವರನ್ನು ಮಹಾಪೌರರನ್ನಾಗಿ ಮಾಡಲಾಗಿತ್ತು . ಇಂದಿನ ಪರಿಸ್ಥಿತಿಯು ಬಹಳ ಸುಧಾರಣೆಯಾಗಿದ್ದು , ಧಾರವಾಡ – ಹುಬ್ಬಳ್ಳಿ ಮಹಾನಗರ ಬಹಳಷ್ಟು ಬೆಳೆದಿದೆ .

1976 ರ ಕರ್ನಾಟಕ ಮುನ್ಸಿಪಾಲ್ ಕಾರ್ಪೊರೇಷನ್ ಅಧಿನಿಯಮ ಪ್ರಕಾರ ಒಂದು ಮಹಾನಗರಪಾಲಿಕೆ ಆಗಬೇಕಾದರೆ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹಾಗೂ ಆರು ಕೋಟಿ ರೂಗಳಷ್ಟು ಆದಾಯದ ಇರಲೇಬೇಕು.

ಆ ಪ್ರಕಾರ ಧಾರವಾಡ ಮಹಾನಗರಪಾಲಿಕೆ ಇಂದು ನಾಲ್ಕುವರೆ ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ರೂ . 37.31 ಕೋಟಿಗಿಂತಲೂ ಆದಾಯವನ್ನು ಹೊಂದಿದೆ .

 ಎಲ್ಲಾ ರೀತಿಯಿಂದ ಪ್ರತ್ಯೇಕ ಮಹಾನಗರಪಾಲಿಕೆಯಾಗುವುದು ಹುಬ್ಬಳ್ಳಿ – ಧಾರವಾಡಕ್ಕೆ ಅತ್ಯಾವಶ್ಯವೆನಿಸಿದೆ .

ಧಾರವಾಡ ಪ್ರತ್ಯೇಕ ಪಾಲಿಕೆಯಾದಲ್ಲಿ , ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಅನುದಾನ ಲಭ್ಯವಾಗಿ ಕೆಳಕಂಡಂತೆ ಎರಡೂ ನಗರಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಧಾರವಾಡ ಮಹಾನಗರಕ್ಕೆ ತನ್ನದೇ ಆದ ಇತಿಹಾಸವಿದೆ . ಸಾಂಸ್ಕೃತಿಕ , ಸಾಹಿತ್ಯದಲ್ಲಿ ಇಡೀ ದೇಶದಲ್ಲೇ ಧಾರವಾಡ ಮುಂಚೂಣಿಯಲ್ಲಿದೆ .

ಭಾರತ ರತ್ನ ಡಾ. ಭೀಮಸೇನ ಜೋಶಿಯವರು ಅಂದಿನ ಧಾರವಾಡ ಜಿಲ್ಲೆಯ ರೋಣ ಹಾಗೂ ಗದಗಕ್ಕೆ ಸಂಬಂಧಿಸಿದಂತೆ ಕುಂದಗೋಳದಲ್ಲಿ ತಮ್ಮ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಿ ಇಂದು ವಿಶ್ವದಲ್ಲೇ ಶ್ರೇಷ್ಟ ಸಂಗೀತಕಾರರಾಗಿ ಹೆಸರು ಪಡೆದಿದ್ದಾರೆ .

ಡಾ.ಮಲ್ಲಿಕಾರ್ಜುನ ಮನ್ಸೂರ್ ಅವರು , ಶ್ರೀ ಬಸವರಾಜ ಗುರು ಮತ್ತು ಡಾ.ಗಂಗೂಬಾಯಿ ಹಾನಗಲ್ ಇವರುಗಳು ಪದ್ಮಭೂಷಣಕ್ಕೆ ಭಾಜನರಾಗಿದ್ದಾರೆ .

ಇವರಂತೆಯೇ ಶ್ರೀ ಪಂಡಿತ್‌ ಮಾಧವ ಗುಡಿ ಸೇರಿದಂತೆ ಪದ್ಮಶ್ರೀ ಪಡೆದ ನೂರಾರು ಜನ ಸಂಗೀತ ದಿಗ್ಗಜರು ಕೂಡ ಧಾರವಾಡದಲ್ಲಿ ನೆಲೆಯೂರಿ ಧಾರವಾಡ ನಗರಕ್ಕೆ ಕೀರ್ತಿ ತಂದವರಿದ್ದಾರೆ .

ಶಿಕ್ಷಣ ಕ್ಷೇತ್ರದಲ್ಲಿ ಡಾ.ಡಿ.ಸಿ. ಪಾವಟಿ , ಶ್ರೀ ವಿ.ಕೃ.ಗೋಕಾಕ್ , ಶ್ರೀ ಆಲೂರು ವೆಂಕಟರಾಯ ಶ್ರೀ ಸದಾಶಿವ ಒಡೆಯರ್ ಮತ್ತು ಡಾ. ಚೆನ್ನವೀರಕಣವಿ , ಡಾ. ಎಮ್.ಎಮ್ . ಕಲಬುರ್ಗಿ , ಡಾ. ಆರ್.ಸಿ. ಹಿರೇಮಠ , ಶ್ರೀ ಆರ್.ವೈ. ಧಾರವಾಡಕರ್‌ ಹಾಗೂ ಶ್ರೀ ಸಿ.ವಿ. ಸವದತ್ತಿ ಇವರೆಲ್ಲರೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಹುಟ್ಟೂರಾದ ಧಾರವಾಡಕ್ಕೆ ಗೌರವ ತಂದುಕೊಟ್ಟಿದ್ದಾರೆ .

ಇದಕ್ಕಿಂತಲೂ ಹೆಚ್ಚಾಗಿ ವಿಶ್ವವಿದ್ಯಾಲಯಗಳು ಧಾರವಾಡದಲ್ಲಿವೆ . ಕರ್ನಾಟಕ ವಿಶ್ವವಿದ್ಯಾನಿಲಯ , ಧಾರವಾಡ ಕೃಷಿ ವಿಶ್ವವಿದ್ಯಾನಿಲಯ , ಕಾನೂನು ವಿಶ್ವವಿದ್ಯಾನಿಲಯ , ಕನರ್ಕಾಟಕ ಹಿಂದಿ ಪ್ರಚಾರ ಸಮಿತಿಯ ಡೀಮ್ಸ್ ವಿಶ್ವವಿದ್ಯಾನಿಲಯ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಹಾಗೂ ಜೆ.ಎಸ್.ಎಸ್ . ಸಮೂಹ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ದೇಶಕ್ಕೆ ಉತ್ತಮವಾದ ಸೇವೆ ಮತ್ತು ಕೊಡುಗೆಯನ್ನು ಕೊಟ್ಟಿವೆ . ಇಂತಹ ಮಹಾನಗರಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ.

ಪ್ರತಿವಾರ ಎರಡು ಮಂಗಳವಾರ ಮತ್ತು ಶುಕ್ರವಾರ ಧಾರವಾಡದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಸೇರಿ ಜನರ ಸಮಸ್ಯೆ ಬಗ್ಗೆ ಚರ್ಚಿಸಿ , ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ

 ಆದರೆ , ಕೆಲಸದ ಒತ್ತಡದಿಂದಾಗಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರಲು ಸಾಧ್ಯವಾಗುತ್ತಿಲ್ಲ . ಒಂದುವೇಳೆ , ಧಾರವಾಡ ಪ್ರತ್ಯೇಕ ಪಾಲಿಕೆ ಆದಲ್ಲಿ ಅಧಿಕಾರ ವಿಕೇಂದ್ರಿಕರಣವಾಗಿ , ಹುಬ್ಬಳ್ಳಿ ಮತ್ತು ಧಾರವಾಡ ನಗರಕ್ಕೆ ಪ್ರತ್ಯೇಕ ಮೇಯರ , ಉಪ ಮೇಯರ್‌ , ಸ್ಥಾಯಿ ಸಮಿತಿ ಅಧ್ಯಕ್ಷರು , ಆಯುಕ್ತರು , ಇತರೆ ಸಿಬ್ಬಂದಿ ಲಭ್ಯವಾಗುವುದರಿಂದ ನಗರದ ಎಲ್ಲಾ ಸಮಸ್ಯೆಗಳಿಗೆ ಪೂರಕವಾಗಿ ಉತ್ತರ ದೊರೆಯಲಿದೆ.

ಧಾರವಾಡವನ್ನು ಪ್ರತ್ಯೇಕ ಮಹಾನಗರಪಾಲಿಕೆಯನ್ನಾಗಿ ರಚಿಸುವುದರಿಂದ ಹುಬ್ಬಳ್ಳಿ – ಧಾರವಾಡ ಅವಳಿ ಮಹಾನಗರಗಳು ಅಭಿವೃದ್ಧಿ ಹೊಂದಬೇಕು ಎನ್ನುವುದರಲ್ಲಿ ವಿಶ್ವಾಸವಿದೆ.

ಈ ದಿಸೆಯಲ್ಲಿ , ಈಗಾಗಲೇ ಪ್ರಜ್ಞಾವಂತ ಮಹಾನಗರದ ಧಾರವಾಡದ ಹಿರಿಯರು ಮತ್ತು ಯುವಕರು ಸೇರಿ ಪ್ರತ್ಯೇಕ ಪಾಲಿಕೆ ಹೋರಾಟವನ್ನು ಪ್ರಾರಂಭಿಸಿದ್ದಾರೆ .

ಇದಕ್ಕೆ ಬಹಳಷ್ಟು ಬೆಂಬಲವಿದೆ. ಈ ಕಾರಣದಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ .

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಕೊಟಗಿ ಸೇರಿದಂತೆ ಮುಂತಾದವರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *