ರಾಜ್ಯ

ಧಾರವಾಡದ ಕಟ್ಟಡ ಕುಸಿತ ಪ್ರಕರಣ : ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೌನ

ಧಾರವಾಡ prajakiran.com : ಕುಮಾರೇಶ್ವರ ನಗರ ಕಟ್ಟಡದ ಕುಸಿತ ಪ್ರಕರಣದಲ್ಲಿ ಕೈ ಕಾಲು ಕಳೆದುಕೊಂಡ ಅನೇಕರಿಗೆ ಈವರೆಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಆರೋಪಿಸಿದರು.

ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಕುಸಿತದಲ್ಲಿ ಒಟ್ಟು 19 ಜನರು ಸಾವನ್ನಪ್ಪಿದ್ದು, 57 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಇದರಲ್ಲಿ 15 ಜನರಿಗೆ ಮಾತ್ರವೇ 7 ಲಕ್ಷ ಪರಿಹಾರ ಕೇಂದ್ರ, ರಾಜ್ಯ ಹಾಗೂ ಮಹಾನಗರ ಪಾಲಿಕೆ ಯಿಂದ ದೊರೆತಿದೆ. ಇನ್ನುಳಿದ ನಾಲ್ಕು ಜನರಿಗೆ 9 ಲಕ್ಷ ಅದು ಕಾರ್ಮಿಕ ಕಾರ್ಡ್ ಇದ್ದ ಕಾರಣ ಎರಡು ಲಕ್ಷ ಹೆಚ್ಚುವರಿ ಪರಿಹಾರ ನೀಡಲಾಗಿದೆ. ಇದರಲ್ಲಿ ಒಂದು ಕುಟುಂಬ ಪರಿಹಾರ ಪಡೆದಿಲ್ಲ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕೇವಲ ಎಂಟು ಜನ ಗಂಭೀರ ಗಾಯಾಳುಗಳಿಗೆ ತಲಾ ಒಂದು ಲಕ್ಷ, ಕೇಂದ್ರದ ಮೂಲಕ ಗಾಯಗಳ ಸ್ವರೂಪದ ಆಧಾರದ ಅನ್ವಯ ೧೫ ಜನರಿಗೆ ಐವತ್ತು ಸಾವಿರ ಪರಿಹಾರ ಸಿಕ್ಕಿತು.

ರಾಜ್ಯ ಸರ್ಕಾರ ಗಾಯಾಳುಗಳಿಗೆ ಈವರೆಗೆ ನಯಾ ಪೈಸೆ ಪರಿಹಾರ ನೀಡಿಲ್ಲ.  ಇನ್ನುಳಿದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮಾ. 14ರಂದು  ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ದಂಡಾಧಿಕಾರಿ ತನಿಖಾ ವರದಿಯನ್ನು ರಾಜ್ಯದ   ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳಿಗೆ

ಸಲ್ಲಿಸಿದ್ದಾರೆ. ಆದರೆ ಆ ವರದಿಯಲ್ಲಿ ಏನಿದೆ. ಏನೆಲ್ಲ ಶಿಫಾರಸು ಮಾಡಿದ್ದಾರೆ.  ಸಂತ್ರಸ್ತ್ರರಿಗೆ ಯಾವ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂಬುದು ಈವರೆಗೆ ಬಹಿರಂಗಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಈವರೆಗೆ ಚಕಾರ ಎತ್ತಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹ ಮೌನವಹಿಸಿರುವುದು ನೋವಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಅಂದು ಸಮ್ಮೀಶ್ರ ಸರಕಾರದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯವರು ದಂಡಾಧಿಕಾರಿ ತನಿಖೆ ಬದಲು ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಒತ್ತಾಯಿಸಿದ್ದರು.

ಆದರೆ ಇವತ್ತು ಅಧಿಕಾರದಲ್ಲಿರುವ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಈವರೆಗೆ ಸಂತ್ರಸ್ತರ ಒಂದು ಸಭೆ ಕೂಡ ನಡೆಸದೆ, ಅವರ ಅಹವಾಲು ಆಲಿಸದೆ ಇರುವುದು ರ್ದುದೈವದ ಸಂಗತಿ ಎಂದರು.

ಈ ಪ್ರಕರಣ ಸಂಬಂಧ ಕೇವಲ ನಾಲ್ವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನುಳಿದವರು ಯಾವುದೇ ರೀತಿಯ ಕಾನೂನು ಹೋರಾಟ ಕೂಡ ನಡೆಸಲು ಮುಂದಾಗಿಲ್ಲ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲು ರಾಜ್ಯದ ಘನ ಸರಕಾರ ಮುಂದಾಗಬೇಕಿದೆ.

ಅಂಗಡಿ ಮಾಲೀಕರು ಕೂಡ ಆ ಕಟ್ಟಡದಲ್ಲಿ ಇಟ್ಟಿದ್ದ  ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತ ಕೆಲವು ಗಾಯಾಳುಗಳ ಚಿಕಿತ್ಸೆ ವೆಚ್ಚ ಕೂಡ ಭರಿಸಿಲ್ಲ. ಮಕ್ಕಳ ಶಾಲೆ ಶುಲ್ಕ ಪಾವತಿ ಮಾಡಲು ಪರದಾಡುವಂತಾಗಿದೆ.

ಇನ್ನೂ ಕೆಲವರು ಜೀವನ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರಂತೂ ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಹೀಗಾಗಿ ರಾಜ್ಯದ ಬಿಜೆಪಿ ಸರಕಾರ ಈಗಲಾದರೂ ಅವರ ನೋವಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿ ಎಂದು ಬಸವರಾಜ ಕೊರವರ ಆಗ್ರಹಿಸಿದರು.

ರಾಜ್ಯದಲ್ಲಿ ಕಟ್ಟಡದ ಕುಸಿತ ನಿರ್ವಹಣೆ ಮಾಡಲು ಹಾಗೂ ಸಂತ್ರಸ್ತರಿಗೆ ಪರಿಹಾರದ ಮಾನದಂಡ ರೂಪಿಸಲು ಈವರೆಗೆ  ಸೂಕ್ತ ಕಾಯ್ದೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಶಾಸನ ರೂಪಿಸಬೇಕು ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಒತ್ತಾಯಿಸಿದರು.

ಈ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಬರುವ ದಿನಗಳಲ್ಲಿ ಗಾಯಾಳುಗಳ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲು ನಿರ್ಧರಿಸಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಕಟ್ಟಡದಲ್ಲಿ ಸಿಲುಕಿ ನಾಲ್ಕು ದಿನಗಳ ನಂತರ ಬದುಕಿದರೂ ಕಾಲು ಕಳೆದುಕೊಂಡ ಉತ್ತರ ಪ್ರದೇಶ ಮೂಲದ ಮಹ್ಮದ ಇಮ್ರಾನ್ ಲೋಹಿನ್ ಗೆ ಕೇವಲ ಒಂದೂವರೆ ಲಕ್ಷ ರೂಪಾಯಿ ಪರಿಹಾರ ಮಾತ್ರ ನೀಡಲಾಗಿದೆ. ಹೀಗಾಗಿ ಜೀವನ ನಿರ್ವಹಣೆ ಮಾಡಲು ಆತ ಪರದಾಟ ನಡೆಸುತ್ತಿರುವ ಸಂಕಷ್ಟ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜನ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಆನಂದ ಹಡಪದ, ಈರಣ್ಣ ಬಂಡಾರಿಮಠ, ಸಚಿನ್ ಕಡವಾಡವಾಡಕರ್, ಲಾಲ್ ಸಾಬ ಉಪಸ್ಥಿತರಿದ್ದರು‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *