ರಾಜ್ಯ

ಧಾರವಾಡದ ಹಾಲಿ-ಮಾಜಿ ಶಾಸಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ

ಧಾರವಾಡ ಪ್ರಜಾಕಿರಣ.ಕಾಮ್  :ನಾನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಗಿನ ನಮ್ಮ ಕೆಲ ಗೆಳೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನಾನು ಅವರಿಗೆ ಸಹಾಯ ಮಾಡಿದೆ ಎಂದು ಆರೋಪಿಸಿ ಅವರ ವಿರೋಧಿಗಳು ನನ್ನ ನೌಕರಿ ಕಳೆಯುವಲ್ಲಿ ಯಶಸ್ವಿಯಾದರು.

ಆಗ ನಾನು ನನಗೆ ಆದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಎಂದು ನಿರ್ಧರಿಸಿ ಯಾವ ವ್ಯವಸ್ಥೆಗೆ ನಾನು ಬಲಿ ಆದೆ. ಅದೇ ವ್ಯವಸ್ಥೆ ವಿರುದ್ಧ ನಾನು ಹೋರಾಟ ನಡೆಸಲು‌ ನಿರ್ಧರಿಸಿದೆ ಎಂದು ಧಾರವಾಡದ ಹಾಲಿ-ಮಾಜಿ ಶಾಸಕರ ಹೆಸರು ಪ್ರಸ್ತಾಪಿಸದೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಪರೋಕ್ಷ ವಾಗ್ದಾಳಿ ನಡೆಸಿದರು.

ಅವರು ಭಾನುವಾರ ಸಂಜೆ
ಧಾರವಾಡದ ರಾಯಲ್ ಹಾಲ್ ನಲ್ಲಿ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ನಾಗರಾಜ ಕಿರಣಗಿ ಸಾರಥ್ಯದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ತಮ್ಮ ಹೋರಾಟದ ಹಾದಿ ನೆನದು ಭಾವುಕರಾಗಿ ಮಾತನಾಡಿದರು.

ಪೊಲೀಸ್ ಇಲಾಖೆಯ ಆಂತರಿಕ ನೋವು ಅರಿತುಕೊಂಡು ಅವರ ವೇತನ, ತುಟ್ಟಿ ಭತ್ಯೆ, ವಾರದ ರಜೆ ಹೀಗೆ ಪೊಲೀಸರ ಅನೇಕ
ಹಕ್ಕುಗಳಿಗಾಗಿ ಹೋರಾಟ ನಡೆಸಲು ನಿರ್ಧರಿಸಿದೆ.

ಆಗ ಸರಕಾರ ನನ್ನ ಮೇಲೆ ರಾಜದ್ರೋಹದ ಆರೋಪ ಹೋರಿಸಿ 86 ದಿನಗಳ ಕಾಲ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದರು ಎಂದು ತಮ್ಮ ಹಳೆಯ ಹೋರಾಟದ ದಿನಗಳನ್ನು ಮೆಲಕು ಹಾಕಿದರು.

ಅಲ್ಲಿಂದ ಹೊರಬಂದ ತಕ್ಷಣ ಅಂದಿನ ಬಿಜೆಪಿ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಿಂದ ಇಂದಿನ ಜಲಮಂಡಳಿ ನೌಕರರ ಹೋರಾಟದ ವರೆಗೆ ನೂರಾರು ಹೋರಾಟ ನಡೆಸಿರುವುದು ತಮಗೆಲ್ಲಾ ಗೊತ್ತಿದೆ.
ಆದರೆ, ಯಾರು ನಮ್ಮ ಧ್ವನಿಯಾಗಬೇಕಿತ್ತೋ ಅವರು ಒಂದು ದಿನವೂ
ರೈತರ ಸಮಸ್ಯೆ ಕುರಿತು ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆ ಕಳೆದುಕೊಂಡು ಬೀದಿಗೆ ಬಿದ್ದವರ ಸಹಾಯಕ್ಕೆ ಬರಲಿಲ್ಲ.

358 ನೌಕರರು ಬೀದಿಗೆ ಬಿದ್ದು ತಿಂಗಳುಗಳಗಟ್ಟಲೇ ಹೋರಾಟ ನಡೆಸಿದರೂ ಸೌಜನ್ಯಕ್ಕೆ ಮನವಿಯೂ ಸ್ವೀಕರಿಸಲು ಬರಲಿಲ್ಲ.

ಬಡವರ ಮಕ್ಕಳ ಪರ ವಿಧಾನಸಭೆಯಲ್ಲಿ ಒಂದೇ ಒಂದು ಧ್ವನಿ ಎತ್ತಲಿಲ್ಲ. ಇಂತಹ ಜನಪ್ರತಿನಿಧಿಗಳು ನಮಗೆ ಬೇಕಾ ಎಂದು ಹಾಲಿ ಶಾಸಕರ ವಿರುದ್ದ ಹರಿಹಾಯ್ದರು.

ಅಲ್ಲದೆ, ಶ್ರೀಮಂತರನ್ನು ಆರಿಸಿ ಕಳುಹಿಸಿದರೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಬ್ರಿಟಿಷರ ಬೂಟು ನೆಕ್ಕಿದವರಿಗೆ, ತೆರಿಗೆ ಸಂಗ್ರಹಿಸಿಕೊಟ್ಟವರಿಗೆ, ಚಾಪಲೂಸಿ ಮಾಡಿದವರಿಗೆ ಆರಿಸಿ ಕಳುಹಿಸಿದರೆ ಪ್ರಜಾಪ್ರಭುತ್ವ ಉಳಿಸಲು ಹೇಗೆ ಸಾಧ್ಯ.

ಇವರಿಗೆ ನೂರಾರು ಎಕರೆ ಭೂಮಿ ಹೇಗೆ ಬಂತು. ಇವರು ತಮ್ಮ ಆಸ್ತಿ ರಕ್ಷಣೆಗೆ ಹೋರಾಡ್ತಾರಾ ಹೊರತು ಬಡವರ ಮಕ್ಕಳಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನೇ ವಿಧಾನಸಭೆಗೆ ಹೋಗಬೇಕು ಎಂಬ ಆಸೆ ನನಗೆ ಖಂಡಿತ ಇಲ್ಲ. ಬಡವರ ಮಕ್ಕಳು, ರೈತರ ಮಕ್ಕಳು, ಕೃಷಿ ಕೂಲಿ ಕಾರ್ಮಿಕರ ಮಕ್ಕಳು ವಿಧಾನ ಸಭೆಗೆ ಹೋಗಬೇಕು. ನಮ್ಮ ಸಮಸ್ಯೆಗಳ ಕುರಿತು
ಧ್ವನಿ ಎತ್ತಬೇಕು ಎಂಬುದು ನಮ್ಮ ಆಶಯವಾಗಿದೆ.

ನಾನು ಒಬ್ವ ಹೋರಾಟಗಾರ ಅದಕ್ಕೆ ಚುನಾವಣೆಗೆ ನಿಲ್ಲಬೇಕು ಎಂಬುದು ನಿಮ್ಮ ಬಯಕೆಯಾಗಿದೆ. ಆದರೆ ಈ ನಿಟ್ಟಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ಆಗಬೇಕು. ನಾನು‌ ಚುನಾವಣೆಯಲ್ಲಿ ನಿಲ್ಲತ್ತಿನಿ ನನಗೆ ಓಟ ಹಾಕರಿ ಅಂತ ಯಾರ ಅಂತಾರೆ ಅವರು ನಿಜವಾದ ಜನನಾಯಕನಲ್ಲ.

ಯಾಕೆಂದರೆ ಅವನು ಚುನಾಯಿತನಾದ ಮೇಲೆ ನಾಲಾಯಕ್ ಆಗ್ತಾನೆ ಅಲ್ಲಿಗೆ ಮತ್ತ ನಾವು ಅವರ ಮನೆ ಬಾಗಿಲಿಗೆ ಹೋಗಿ ಕೈ ಕಟ್ಟಕೊಂಡ ಅಪ್ಪಾರ, ಅಣ್ಣಾರ ಅನ್ನೂ ಪರಿಸ್ಥಿತಿ ತಂದು ಇಡ್ತಾರೆ ಎಂದು ಕಿಡಿಕಾರಿದರು.

ಅಲ್ಲದೆ, ಯಾರೋ ಕುಕ್ಕರ್ ಕೊಟ್ಟರು, ಹಣ,ಹೆಂಡ ಕೊಟ್ಟರೂ ಅಂತ ಅವರಿಗೆ ಓಟು ಹಾಕಿದರೆ ಆ ಮೇಲೆ ನಮ್ಮ ಮಕ್ಕಳಿಗೆ ನಿಕ್ಕರ್ ಕೂಡ ಇರಲ್ಲ ಎಂದು ಎಚ್ಚರಿಸಿದರು.

ಹೆಬ್ಬಳ್ಳಿ ಗ್ರಾಮದ ಈರಣ್ಣ ಹಡಪದ, ವನಹಳ್ಳಿ ಗ್ರಾಮದ ಬಂಗಾರಿ, ಲಕಮಾಪುರ ಗ್ರಾಮದ ಮಂಜುನಾಥ ಲಂಗೋಟಿ, ಅಮ್ಮಿನಬಾವಿ ಮುತ್ತಮ್ಮ ಹುಲಿ, ಕೋಟೂರು ಗ್ರಾಮದ ಮಂಜುನಾಥ ಶಿವಳ್ಳಿ, ಪ್ರವೀಣ ದೊಡ್ಡಮನಿ,ಶಿಂಗನಹಳ್ಳಿಯ ಗ್ರಾಮದ ಮಂಜುನಾಥ ‌ಪಾಟೀಲ,
ಮುಳಮುತ್ತಲ ಗ್ರಾಮದ ಚನ್ನಯ್ಯ ಹಿರೇಮಠ, ಕಲ್ಲೂರು ಗ್ರಾಮದ ಚಂದ್ರಯ್ಯ ಚಿಕ್ಕಮಠ, ವಾರ್ಡ ನಂ 1ರ ಹಿರಿಯರಾದ ಬಸವಣೆಪ್ಪ ಕಮತಿ, ಭಜಂತ್ರಿ ಸರ್, ಸಣ್ಣಕ್ಕಿ ಸರ್ , ಪಿ ಎಸ್ ಐ ಆಕಾಂಕ್ಷಿ ವಿನೋದ ಶೆಟ್ಟಿ ಮಾತನಾಡಿ, ಧಾರವಾಡ ಜಿಲ್ಲೆಯ ಪ್ರತಿಯೊಂದು ಅನ್ಯಾಯದ ವಿರುದ್ಧ ಗಟ್ಟಿಯಾದ ಧ್ವನಿ ಬಸವರಾಜ ಕೊರವರ, ಅವರ ಪ್ರತಿಯೊಂದು ಹೋರಾಟ ಸರ್ಕಾರದ ಬುಡವನ್ನು ಅಲ್ಲಾಡಿಸುತ್ತದೆ. ನಾವು ನಮಗಾಗಿ ಅಲ್ಲ. ನಮ್ಮನ್ನು ನಂಬಿದವರಿಗಾಗಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರ-71 ರ ಒಳತಿಗಾಗಿ ನೀವು ಈ ಬಾರಿ ಅಖಾಡಕ್ಕೆ ಇಳಿಯಲೇಬೇಕು ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದರು.

ಅಲ್ಲದೆ, ಇದು ಬಡವರ ಮಕ್ಕಳ ಚಳವಳಿಯ ಒಂದು ಭಾಗವಾಗಲಿದೆ. ನಾವು ತನುಮನಧನದಿಂದ ಸಹಾಯ ಸಹಕಾರ ಮಾಡಲು ಸಿದ್ದ ಎಂದು ಪ್ರಕಟಿಸಿದರು‌.

ಈ ಚಿಂತನ‌ಮಂಥನದ ಸಾರಥ್ಯ ವಹಿಸಿದ್ದ ಬಸವರಾಜ ಕೊರವರ ಗೆಳೆಯರ ಬಳಗದ ಸಂಚಾಲಕ ನಾಗರಾಜ ಕಿರಣಗಿ ಮಾತನಾಡಿ, ನಾವು ಇಂದು ಪ್ರತಿಯೊಂದಕ್ಕೂ ಹೋರಾಟದ ಹಾದಿ ಹಿಡಿಯಬೇಕಾಗಿದೆ. ನಾವು ಮಾಡಿದ ಎಷ್ಟೋ ಹೋರಾಟಗಳನ್ನು ಕೆಲವರು ತಾವು ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ‌ ಮಾಡುತ್ತಿದ್ದಾರೆ.

ಆದರೂ ನಾವು ಎಂದಿಗೂ ಇವುಗಳ ಬಗ್ಗೆ ಆಗಲಿ, ಅವರ ಬಗ್ಗೆ ಆಗಲಿ ಟೀಕೆ ಮಾಡಿಲ್ಲ. ನಾವು ಮಾಡಿದ ಹೋರಾಟ ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ. ಪ್ರಚಾರಕ್ಕಾಗಿ ಅಲ್ಲ. ನಿಸ್ವಾರ್ಥ ಸಾಮಾಜಿಕ ಕಳಕಳಿಗಾಗಿ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ಅಲ್ಲದೆ, ನಾವು ಯಾರ ಮನೆ ಬಾಗಿಲಿಗೆ ಹೋಗಿ ಗಂಟೆಗಟ್ಟಲೆ ಕಾಯುವ ಬದಲಿಗೆ ಜನರ ಮನೆ ಬಾಗಿಲಿಗೆ ನಮ್ಮನ್ನು ಹುಡುಕಿಕೊಂಡು ಬರುವವರಿಗೆ ನಾವು ನಾಯಕತ್ವ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಹು ಜನರ ಒತ್ತಾಸೆಗೆ ಮಣಿದು ಬಸವರಾಜ ಕೊರವರ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಜಾತ್ರೆ ಚುನಾವಣೆಗೆ ಸ್ಪರ್ಧಿಸಲೇಬೇಕು
ನೇತೃತ್ವ ವಹಿಸಲೇಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಅದಕ್ಕೆ ನೆರೆದಿದ್ದ ಮೂರು ಸಾವಿರಕ್ಕೂ ಅಧಿಕ ಜನ ಸಹಮತ ವ್ಯಕ್ತಪಡಿಸಿ ಸಿಳ್ಳೆ, ಚಪ್ಪಾಳೆ ಹಾಕಿ ಜೈ ಕಾರ ಮೊಳಗಿಸಿ, ಶಾಲು ಹಾರ ಹಾಕಿ ಸನ್ಮಾನಿಸಿ ಗೌರವಿಸಿ ತಮ್ಮ ಮನದಾಳದ ಮಾತನ್ನು‌ ಮುಕ್ತವಾಗಿ ಹಂಚಿಕೊಂಡರು.

ಬಸವರಾಜ ಕೊರವರ ಗೆಳೆಯರ ಬಳಗ ಹಮ್ಮಿಕೊಂಡ ಚಿಂತನ ಮಂಥನ ಸಭೆಯಲ್ಲಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲಾ ಹಳ್ಳಿಯ ಹಾಗೂ ವಿವಿಧ ವಾರ್ಡ್ ನ ಸರ್ವ ಜನಾಂಗದ ಅದರಲ್ಲೂ ವಿಶೇಷವಾಗಿ ಬಡವರ ಮಕ್ಕಳು, ರೈತರು, ಯುವ ಮಿತ್ರರು, ತಾಯಂದಿರು ಸುಮಾರು ಮೂರು ಸಾವಿರ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *