ರಾಜ್ಯ

ಧಾರವಾಡ ಬಂದ್ : ಎತ್ತು, ಚಕ್ಕಡಿ ಪ್ರತಿಭಟನೆ

ಧಾರವಾಡ prajakiran.com : ಕೇಂದ್ರ ಹಾಗೂ ರಾಜ್ಯದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಜನವಿರೋಧಿ ನೀತಿ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆಯಿಂದಲೇ ಹೋರಾಟದ ಕಾವು ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಕೆಲವಡೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಸಣ್ಣ ಪುಟ್ಟಅಂಗಡಿಗಳು ಮಧ್ಯಾಹ್ನದ ನಂತರ ಎಂದಿನಂತೆ ಕಾರ್ಯನಿರ್ವಹಿಸಿದವು.

 ಧಾರವಾಡದ ಆಲೂರು ವೆಂಕಟರಾಯರ ವೃತ್ತದಲ್ಲಿ ನೂರಾರು ರೈತರು ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದರು.

ಅದೇ ರೀತಿಯಾಗಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕೂಡ ಹಲವು ರೈತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

 ಬಂದ್ ಹಿನ್ನೆಲೆ: ಸ್ತಬ್ಧವಾದ ಧಾರವಾಡ

 ಕರ್ನಾಟಕ ಬಂದ್ ಗೆ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅನೇಕ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದವು. ನಗರದ ಎಲ್ಲ ಅಂಗಡಿಕಾರರು ಹಾಗೂ ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದರು.

 ದಾಟಿ ಹೋಗ್ತೀಯಾ ಈಗ ದಾಟಿ ಹೋಗು ನೋಡೋಣ..!

 ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ವೇಳೆ ಲಾರಿ ಚಾಲಕನೊಬ್ಬ ಬಂದ್ ಇದ್ದರೂ ಸರ್ಕಲ್ ಮೂಲಕ ಹಾದು ಹೋಗುತ್ತಿದ್ದ.

ಇದನ್ನು ನೋಡಿದ ರೈತ ಮುಖಂಡನೊಬ್ಬ ಬಂದ್ ಇದ್ದರೂ ಎಲ್ಲಿ ಹೋಗುತ್ತಿದ್ದೀಯಾ? ದಾಟಿ ಹೋಗ್ತೀಯಾ? ಈಗ ದಾಟಿ ಹೋಗು ನೋಡೋಣ ಎಂದು ಲಾರಿಗೆ ಅಡ್ಡಲಾಗಿ ಮಲಗಿದ. ನಂತರ ಪೊಲೀಸರು ರೈತ ಮುಖಂಡನನ್ನು ಬದಿಗೆ ಸರಿಸಿ ಲಾರಿ ದಾಟಿ ಹೋಗಲು ಅನುವು ಮಾಡಿಕೊಟ್ಟರು.

 ರಾಜಕೀಯ ನಾಯಕರು ಹೋರಾಟಕ್ಕೆ ಬೇಡ

ಧಾರವಾಡದಲ್ಲಿ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ  ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಧಾರವಾಡದಲ್ಲೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ.

ಹೋರಾಟದಲ್ಲಿ ಪಾಲ್ಗೊಳ್ಳಲು ಬಂದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಗೆ ಹೋರಾಟಗಾರರು ತಾವು ಹೋರಾಟದಲ್ಲಿ ಪಾಲ್ಗೊಳ್ಳುವುದು ಬೇಡ  ಎಂದು ನಯವಾಗಿ  ಬೆಂಬಲವನ್ನು ತಿರಸ್ಕರಿಸಿದರು.

ನಾವು ರಾಜಕೀಯ ಪಕ್ಷಗಳ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ವ್ಯಕ್ತಿಗಳು ಬಂದ್ ನಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ರಾಜ್ಯಮಟ್ಟದಲ್ಲೇ ತೀರ್ಮಾನವಾಗಿದೆ. ಹೀಗಾಗಿ ತಾವು ಬೆಂಬಲ ನೀಡುವುದು ಬೇಡ ಎಂದರು

 ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋನರಡ್ಡಿ, ನಿಮ್ಮ ಹೋರಾಟಕ್ಕೆ ಜಯವಾಗಲಿ. ನೀವು ಏನು ಮಾಡುತ್ತೀರೋ ಮಾಡಿ ಒಟ್ಟಿನಲ್ಲಿ ರೈತರಿಗೆ ಒಳ್ಳೆಯದಾದರೆ ಸಾಕು ಎಂದರು.

ಕೆಲ ಸಂಘಟನೆಯವರು ನೀವೂ ಬನ್ನಿ ಎಂದು ಕರೆದಿದ್ದರು. ಹೀಗಾಗಿ ನಾನು ಬಂದಿದ್ದೆ. ಈಗ ಬೇಡ ಎನ್ನುತ್ತಿದ್ದಾರೆ. ಅವರ ತೀರ್ಮಾನಕ್ಕೆ ತಲೆ ಬಾಗಲೇಬೇಕು ಎಂದರು.

 ಎತ್ತು, ಚಕ್ಕಡಿ  ಪ್ರತಿಭಟನೆ

ಧಾರವಾಡದ ಆಲೂರ ವೆಂಕಟರಾವ್ ವೃತ್ತದಲ್ಲಿ ರೈತರು ಎತ್ತು ಚಕ್ಕಡಿಗಳ ಸಮೇತ ಬಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 ನಗರದ ಜ್ಯುಬಿಲಿ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಜಮಾಯಿಸಿ ಟೈರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೆಲ ರೈತ ಸಂಘಟನೆ ಮುಖಂಡರು ವೃತ್ತದಲ್ಲಿ ಚಕ್ಕಡಿ ಹೊತ್ತು ತಿರುಗಿದರು. ಜೊತೆಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಪ್ರಮುಖ ವೃತ್ತದಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದರು

ಕೆಲಗೇರಿ ಬಳಿಯ ಬೈಪಾಸ್ ರಸ್ತೆಯನ್ನು ಕೆಲ ಪ್ರತಿಭಟನಾಕಾರರು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇನ್ನು ನಗರದ ಅನೇಕ ಕಡೆಗಳಲ್ಲಿ ಪ್ರತಿಭಟನಾಕಾರರು ಬೈಕ್ ಮೆರವಣಿಗೆ ನಡೆಸಿದರು

ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡದಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *