ಧಾರವಾಡ prajakiran.com : ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡ ಡಿಮ್ಹಾನ್ಸ್ ನಲ್ಲಿರುವ ಕೋವಿಡ್ ಪ್ರಯೋಗಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಮ್ಹಾನ್ಸ್ ಪ್ರಯೋಗಾಲಯಕ್ಕೆ ಅಗತ್ಯವಿರುವ ಇನ್ನಷ್ಟು ಉಪಕರಣಗಳನ್ನು ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ತಪಾಸಣೆಯ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಡಿಮ್ಹಾನ್ಸ್ ಪ್ರಯೋಗಾಲಯಕ್ಕೆ ಅಗತ್ಯವಿರುವ ಬಯೋಸೇಫ್ಟಿ ಕ್ಯಾಬಿನೆಟ್ ಖರೀದಿಗೆ ಅನುಮೋದನೆ ನೀಡಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಡಿಮ್ಹಾನ್ಸ್ ಪ್ರಯೋಗಾಲಯಕ್ಕೆ ಪ್ರಯೋಗಾಲಯ ತಂತ್ರಜ್ಞರನ್ನೂ ಕೂಡ ಒದಗಿಸಲಾಗುವುದು ಎಂದರು.
ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಂಡು ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಜನರನ್ನು ಸಂಪರ್ಕಿಸಿ ಅಗತ್ಯವಿದ್ದರೆ ತಪಾಸಣೆಗೊಳಪಡಿಸುವ ಕಾರ್ಯ ನಿರ್ವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕೋವಿಡ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕಂಟೈನಮೆಂಟ್, ಕ್ವಾರಂಟೈನ್, ಸೇವಾಸಿಂಧು, ಹೆಲ್ತ್ವಾಚ್ ಮತ್ತಿತರ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ನಿರಂತರವಾಗಿ ಪರಿಷ್ಕರಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಕಿಮ್ಸ್ ತಜ್ಞವೈದ್ಯ ಡಾ.ಲಕ್ಷ್ಮೀಕಾಂತ, ಡಿಮ್ಹಾನ್ಸ್ ಪ್ರೊ.ರಾಘವೇಂದ್ರ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಮತ್ತಿತರರು ಇದ್ದರು.