ರಾಜ್ಯ

ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಿಂದ ಇಟ್ಟಿಗಟ್ಟಿ ಕ್ರಾಸ್ ವರೆಗೆ ೧೧ ಕಿಲೋ ಮೀಟರ್ ಪಾದಯಾತ್ರೆ

ಧಾರವಾಡ prajakiran.com : ಧಾರವಾಡದ ಇಟ್ಟಿಗಟ್ಟಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ೧೨ ಜನರ ಕುಟುಂಬ ಸದಸ್ಯರೊಂದಿಗೆ ನಾವಿದ್ದೇವೆ ಎಂಬ ಸಾಂತ್ವಾನ ಹೇಳುವ ಹಾಗೂ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳ ಮತ್ತು ವಿಶೇಷವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನ ಸೆಳೆಯುವುದಕ್ಕಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಿಂದ ಇಟ್ಟಿಗಟ್ಟಿ ಕ್ರಾಸ್ ವರೆಗೆ ೧೧ ಕಿಲೋ ಮೀಟರ್ ಪಾದಯಾತ್ರೆ ನಡೆಸಲಾಯಿತು.

ಶನಿವಾರ ಬೆಳಗ್ಗೆ ೮.೪೫ರಿಂದ ೧೦.೪೫ರ ವರೆಗೆ ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಅವರ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸುಮಾರು ೧೧ ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಮತ್ತು ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ದ ಅದರ ಗುತ್ತಿಗೆದಾರ ಅಶೋಕ ಖೇಣಿ ವಿರುದ್ದ ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ, ಬಸವರಾಜ ಕೋತ್, ಶೀತಲ್ ಪತ್ರಾವಳಿ, ಕುಂಬಾರ, ತೇಜಸ್ವಿನಿ ನೀರಲಕೇರಿ, ಅಜಯ್ ಸಾಥ್ ನೀಡಿದರು.

ಮಾರ್ಗ ಮಧ್ಯೆ ನುಗ್ಗಿಕೇರಿ ಸಮೀಪ ವೀರಪ್ಪಜ್ಜನ ಮಠದ ಧರ್ಮಾಧಿಕಾರಿ ರುದ್ರಪ್ಪಜ್ಜ ಪಾದಯಾತ್ರೆಗೆ ಸ್ವಾಗತಿಸಿ, ಮಡಿದ ಕುಟುಂಬ ಸದಸ್ಯರ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ. ಪಾದಯಾತ್ರೆಗೆ ನಮ್ಮ ಬೆಂಬಲವಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಇತ್ತ ಗಮನ ಹರಿಸಿ ಆದಷ್ಟು ಬೇಗ ರಸ್ತೆ ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ,
ಧಾರವಾಡದ ಇಟ್ಟಿಗಟ್ಟಿ ಕ್ರಾಸ್ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಡಿದ ದಾವಣಗೆರೆ ಜಿಲ್ಲೆಯ ೧೦ ಮಹಿಳೆಯರ ಕುಟುಂಬದ ಸದಸ್ಯರೊಂದಿಗೆ ನಾವಿದ್ದೇವೆ ಎಂಬ ಸ್ಥೈರ್ಯ ತುಂಬುವುದಕ್ಕಾಗಿ ೧೧ ಕಿಲೋ ಮೀಟರ್ ಪಾದಯಾತ್ರೆ ನಡೆಸಲಾಗಿದೆ. ಜೊತೆಗೆ ನಿರ್ಲಕ್ಷ್ಯ ತೋರಿದ ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ವಿಶೇಷವಾಗಿ ಜಿಲ್ಲೆಯ ಸಂಸದರ, ಶಾಸಕರ ದಿವ್ಯ ಮೌನ ಹಾಗೂ ಹೊಣಗೇಡಿತನವನ್ನು ತೀವ್ರವಾಗಿ ಖಂಡಿಸಿದರು.

ಗುತ್ತಿಗೆದಾರ ಅಶೋಕ ಖೇಣಿ ಸಮರ್ಪಕ ನಿರ್ವಹಣೆ ಮಾಡದೆ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ದ ಧ್ವನಿ ಎತ್ತಬೇಕಾದವರೆ ಶರಣು ಹೋಗಿರುವುದು ನೋವಿನ ಸಂಗತಿ ಎಂದು ಕಿಡಿಕಾರಿದರು. ಬರುವ ದಿನಗಳಲ್ಲಿ ಸುಪ್ರೀಂಕೋರ್ಟ್ ಗೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನೀಡುವ ಮಾಹಿತಿ ಆಧರಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ ಮಾತನಾಡಿ, ಹತ್ತು ಹಲವು ವರ್ಷಗಳಲ್ಲಿ ೧೨೦೦ ಜನ ಪ್ರಾಣ ಕಳೆದುಕೊಂಡರೆ ೧೨೦೦೦ ಜಾನುವಾರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿವೆ. ಅವರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ. ಹೀಗಾಗಿ ಅವರ ಕುಟುಂಬಕ್ಕೆ ಸಮರ್ಪಕ ನಿರ್ವಹಣೆ ಮಾಡದ ಗುತ್ತಿಗೆದಾರ ಅಶೋಕ ಖೇಣಿಯನ್ನೇ ಹೊಣೆಗಾರರನ್ನಾಗಿಸಿ ಅವರ ಬಳಿ ಹಣ ವಸೂಲಿ ಮಾಡಿ ಸರಕಾರ ಅವರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳನ್ನು ತಡೆಯುವ ಕೆಲಸವಾಗಬೇಕಾದರೆ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯನ್ನು ಅಷ್ಟ ಪಥವನ್ನಾಗಿ ಮೇಲ್ದರ್ಜೆಗೇರಿಸಬೇಕು. ಅಕ್ಕ ಪಕ್ಕದ ಹಳ್ಳಿಗಳಿಗೆ ಸುಗಮ ಸಂಚಾರಕ್ಕೆ ಬೈ ಪಾಸ್ ಅಗಲೀಕರಣ ಮಾಡುವುದು, ಸರ್ವೀಸ್ ರಸ್ತೆ ನಿರ್ಮಿಸುವುದು, ಸ್ಥಳೀಯ ರೈತರ ಜಾನುವಾರುಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುತ್ತಿಗೆದಾರ ಅಶೋಕ ಖೇಣಿ ಅವರು ತಕ್ಷಣವೇ ವಿಶ್ರಾಂತಿ ಗೃಹ, ಕ್ರೇನ್, ಅಂಬುಲೆನ್ಸ್ ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಅನಿವಾರ್ಯವಾಗಲಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಅವರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲಗೌಡ ಕಮತರ, ನಿಂಗಪ್ಪ ಕುಡುವಕ್ಕಲಗಿ, ಉಳವೆಪ್ಪ ವಡೆಯರ್, ಕರಿಯಪ್ಪ ಚಿಕ್ಕಣ್ಣವರ, ವಿರೂಪಾಕ್ಷಪ್ಪ ಹೊಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *