ಅಂತಾರಾಷ್ಟ್ರೀಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಸಿಎಂ ಗರಂ

ಬೆಂಗಳೂರು ಪ್ರಜಾಕಿರಣ.ಕಾಮ್ : 

ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರೇ ಹಣ ಹೊಂದಿಸಿಕೊಳ್ಳಬೇಕು, ಕೇಂದ್ರ ಸರ್ಕಾರವನ್ನು ಕೇಳಬಾರದು ಎನ್ನುವ ನಿರ್ಮಲಾ ಸೀತಾರಾಮನ್ ಅವರ ಯಜಮಾನಿಕೆಯ ಧೋರಣೆ ಅತ್ಯಂತ ಖಂಡನೀಯ,

ಈ ಹೇಳಿಕೆ ಆರುವರೆ ಕೋಟಿ ಕನ್ನಡಿಗರಿಗೆ ತೋರಿರುವ ಅಗೌರವ ಮತ್ತು ಮಾಡಿರುವ ಅವಮಾನ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಕೆಂಡ ಕಾರಿದ್ದಾರೆ.

ಶತಾಯಗತಾಯ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿ ಬಡವರಿಗೆ ನೀಡಲಾಗಿರುವ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವಂತೆ ಮಾಡಬೇಕೆಂಬ ದುರಾಲೋಚನೆ ಕೇಂದ್ರ ಸರ್ಕಾರಕ್ಕೆ ಇದೆ ಎನ್ನುವುದು ಕನ್ನಡಿಗರಿಗೆ ಈಗ ಅರ್ಥವಾಗಿದೆ ಎಂದು ಕಯಟುಕಿದ್ದಾರೆ.

ಇದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೇ, ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ವಿಶೇಷವಾದ ಅನುದಾನ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳುತ್ತಿಲ್ಲ,

ಈ ಯೋಜನೆಗಳಿಗೆ ಬೇಕಿರುವ ಅನುದಾನವನ್ನು ಬಜೆಟ್ ನಲ್ಲೇ ಮೀಸಲಿಟ್ಟಿದ್ದೇವೆ.ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಕನ್ನಡಿಗರ ಕೂಗಿಗೆ ರಾಜ್ಯ ಸರ್ಕಾರ ದನಿಯಾಗಿದೆ,

ಇದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವೂ ಹೌದು. ಅನ್ಯಾಯ ನಡೆದಿರುವ ಕಾರಣಕ್ಕಾಗಿಯೇ 2020-21ರಲ್ಲಿ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಕರ್ನಾಟಕವೂ ಸೇರಿದಂತೆ 3 ರಾಜ್ಯಗಳಿಗೆ ವಿಶೇಷ ಅನುದಾನ ₹ 6,764 ಕೋಟಿ (ರಾಜ್ಯಕ್ಕೆ ₹5,495 ಕೋಟಿ, ತೆಲಂಗಾಣಕ್ಕೆ ₹723 ಕೋಟಿ ಹಾಗೂ ಮಿಜೋರಾಂಗೆ ₹546 ಕೋಟಿ) ಶಿಫಾರಸು ಮಾಡಿತ್ತು ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕಕ್ಕೆ ಮಾತ್ರವಲ್ಲ ತೆಲಂಗಾಣ ಮತ್ತು ಮಿಜೋರಾಂಗಳಿಗೂ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿತ್ತು.

15ನೇ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಕೂಡ ಕರ್ನಾಟಕಕ್ಕೆ ₹6,000 ಕೋಟಿ ಇದರಲ್ಲಿ ರೂ.3,000 ಕೋಟಿ ಜಲಮೂಲಗಳ ಸಂರಕ್ಷಣೆ ಹಾಗೂ ₹3,000 ಕೋಟಿ ಬೆಂಗಳೂರಿನ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ನೀಡುವಂತೆ ಶಿಫಾರಸು ಮಾಡಿತ್ತು.

ಇದು ಕೇಂದ್ರ ಸರ್ಕಾರ ವಿಶೇಷ ಪ್ರೀತಿ ಇಲ್ಲವೇ ಔದಾರ್ಯದಿಂದ ಮಾಡಿರುವ ಶಿಫಾರಸುಗಳಲ್ಲ. ಇವೆಲ್ಲವೂ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯಕ್ಕೆ ನೀಡಿರುವ ಪರಿಹಾರ ಅಷ್ಟೆ.

ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದೆ ಎನ್ನುವ ಏಕೈಕ ಕಾರಣಕ್ಕೆ ಈ ಎರಡೂ ಶಿಫಾರಸುಗಳನ್ನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿರಸ್ಕರಿಸಿದ್ದಾರೆ.

ಈ ಮೂಲಕ ಕರ್ನಾಟಕಕ್ಕೆ ನ್ಯಾಯಯುತ ಪಾಲಿನ ಹಕ್ಕಿನಿಂದ ವಂಚಿತರನ್ನಾಗಿಸಿದರು. ಇದು ರಾಜ್ಯದ ಆರುವರೆ ಕೋಟಿ ಕನ್ನಡಿಗರಿಗೆ ಬಗೆದಿರುವ ದ್ರೋಹವಾಗಿದೆ ಎಂದು ಗುಡುಗಿದ್ದಾರೆ.

ಕಣ್ಣೆದುರೇ ದಾಖಲೆಗಳಿದ್ದರೂ ಸ್ವಲ್ಪವೂ ಅಂಜಿಕೆಯಿಲ್ಲದೆ ಕೇಂದ್ರ ವಿತ್ತ ಸಚಿವರು ಹಸಿ ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ.

ಕನ್ನಡಿಗರ ಎದುರು ಕೇಂದ್ರ ಸರ್ಕಾರದ ಸುಳ್ಳಿನ ಪರದೆ ಕಳಚಿ ಬಿದ್ದು ನಿಜ ಬಣ್ಣ ಬಯಲಾಗಿ ಬಹಳ ಕಾಲ ಆಗಿದೆ. ಇನ್ನಾದರೂ ಸತ್ಯ ಒಪ್ಪಿಕೊಂಡು ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನ ಮಾಡಿ ಎಂದು ಸಲಹೆ ಮಾಡಿದರು

ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದ ಬಗ್ಗೆ ಈ ರೀತಿಯ ಅಜ್ಞಾನ ಹೊಂದಿರುವುದು ವಿಷಾದನೀಯ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *