ರಾಜ್ಯ

ಕೋವಿಡ್-19 ಚಿಕಿತ್ಸೆ : ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದ 19 ಲಕ್ಷ ರೂ. ಮರು ಪಾವತಿಗೆ ಧಾರವಾಡ ಜಿಲ್ಲಾಧಿಕಾರಿ ಆದೇಶ

ಧಾರವಾಡ prajakiran. com ಮಾ.10: ಕೋವಿಡ್-19 ಸೋಂಕಿತರಾಗಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಹೆಚ್ಚುವರಿಯಾಗಿ ಶುಲ್ಕ ಪಡೆದ ಪ್ರಕರಣಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಅಧ್ಯಕ್ಷರಾಗಿರುವ ನಿತೇಶ ಪಾಟೀಲ ಇಂದು ವಿಚಾರಣೆ ನಡೆಸಿ, ವಿವಿಧ ಪ್ರಕರಣಗಳಲ್ಲಿ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿದ್ದ 19 ಲಕ್ಷ ರೂ.ಗಳನ್ನು ರೋಗಿಗಳಿಗೆ ಮರು ಪಾವತಿಸಲು ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು ಸಂಜೆ ಎಬಿಎಆರ್‍ಕೆ ಕ್ಲೇಮ್‍ಗಳ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್.ಎ.ಎಸ್.ಟಿ.)ನ ಸಹಾಯವಾಣಿ ಕೇಂದ್ರ ಮತ್ತು ಲಿಖಿತ ದೂರುಗಳ ಮೂಲಕ ದಾಖಲಾಗಿದ್ದ 80 ಪ್ರಕರಣಗಳನ್ನು ದೂರುದಾರರು ಹಾಗೂ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಈ ಆದೇಶ ನೀಡಿದರು.

ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ಸಂದರ್ಭದಲ್ಲಿ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ಶುಲ್ಕವಿಧಿಸಲು ಸೂಚಿಸಲಾಗಿತ್ತು.

ಎಬಿಎಆರ್‍ಕೆ ಅಡಿ ರೋಗಿ ದಾಖಲಾದರೆ ಅಂತಹ ವ್ಯಕ್ತಿಗಳಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ನಿರ್ದೇಶನ ನೀಡಲಾಗಿತ್ತು. ಕೆಲವು ಪ್ರಕರಣಗಳಲ್ಲಿ ರೋಗಿ ದಾಖಲಾದ ಪ್ರಾರಂಭದ ಕೆಲದಿನಗಳ ನಂತರ ಎಬಿಎಆರ್‍ಕೆ ಅನುಮೋದನೆ ಬಂದಿರುತ್ತದೆ.

ಅಂತಹ ಸಂದರ್ಭಗಳಲ್ಲಿ ಅನುಮೋದನೆಗೆ ಪೂರ್ವದ ಅವಧಿಯ ಚಿಕಿತ್ಸೆಗೆ ಮಾತ್ರ ಶುಲ್ಕ ಪಡೆಯಬೇಕು. ಜಿಲ್ಲೆಯ ಕೆಲವು ಆಸ್ಪತ್ರೆಗಳು ಎಬಿಎಆರ್‍ಕೆ ಹಾಗೂ ರೋಗಿ ಎರಡೂ ಕಡೆಗಳಿಂದಲೂ ಹಣ ಪಡೆದಿವೆ.

ಅಂತಹ ಪ್ರಕರಣಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಹುಬ್ಬಳ್ಳಿಯ ರೋಗಿಯೊಬ್ಬರಿಗೆ 4 ಲಕ್ಷ ರೂ., ಸವದತ್ತಿಯ ವ್ಯಕ್ತಿಯೊಬ್ಬರಿಗೆ 92,125 ರೂ. ಹಾಗೂ ಮತ್ತೊಂದು ಪ್ರಕರಣದಲ್ಲಿ 25 ಸಾವಿರ ರೂ.ಗಳನ್ನು ಮರು ಪಾವತಿಸಲು ಸೂಚಿಸಿದರು.

ಖಾಸಗಿ ಆಸ್ಪತ್ರೆಯೊಂದು ಸ್ವಯಂಪ್ರೇರಿತವಾಗಿ 43 ಪ್ರಕರಣಗಳಲ್ಲಿ 14 ಲಕ್ಷ ರೂ. ಪಾವತಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಅವರ ಕಾರ್ಯವನ್ನು ಅಭಿನಂದಿಸಿದರು.

ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಕೂಡ ಸೇವೆ ನೀಡಿವೆ.

ಕೆಲವೆಡೆ ಹೆಚ್ಚುವರಿ ಶುಲ್ಕ ವಸೂಲಿಯಾಗಿರುವ ಬಗ್ಗೆ ಬಂದಿರುವ ದೂರುಗಳನ್ನು ಪರಾಮರ್ಶನ ಮಾಡಲಾಗಿದೆ.

ಆಸ್ಪತ್ರೆಗಳು ಇನ್ನುಮುಂದೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಈಗ ಕೋವಿಡ್ ಸಾಂಕ್ರಾಮಿಕ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.

ಎಬಿಎಆರ್‍ಕೆ ಅಡಿ ಕೋವಿಡ್ ಅಲ್ಲದೇ ಬೇರೆ ಚಿಕಿತ್ಸೆಗಳಿಗೆ ದಾಖಲಾಗುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಸಾರ್ವಜನಿಕ ಆರೋಗ್ಯ ಕಾಪಾಡಿ ವೈದ್ಯಕೀಯ ವೃತ್ತಿಯ ಘನತೆ, ಜವಾಬ್ದಾರಿ ಹೆಚ್ಚಿಸಲು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಸಿ.ಕರಿಗೌಡರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ ಮಾನಕರ, ಕಿಮ್ಸ್ ಸಮುದಾಯ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಲೋಕರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಡಾ.ಮುಸ್ಸದಿಕಾ ಖಾನುಮ್, ಡಾ.ಸುಮಯ್ಯಾ ಸೇರಿದಂತೆ ಅವಳಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು, ಆಡಳಿತಾಧಿಕಾರಿಗಳು, ದೂರುದಾರ ರೋಗಿಗಳು, ವಾರಸುದಾರರು ವಿಚಾರಣೆಯಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *