ರಾಜ್ಯ

ಧಾರವಾಡದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣ : ಜಿಲ್ಲಾ ದಂಡಾಧಿಕಾರಿಗಳ ವರದಿ ಬಹಿರಂಗಗೊಳಿಸಲು ಆಗ್ರಹ  

ಧಾರವಾಡ prajakiran.com : ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದ ಕುರಿತು ಅಂದಿನ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ಅವರು 14-03-2020ರಂದು ಸರಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ ಅವರಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ತನಿಖಾ ವರದಿಯಲ್ಲಿ ಏನೆಲ್ಲಾ ಅಂಶಗಳು ಒಳಗೊಂಡಿವೆ ಎಂಬುದು ಈವರೆಗೆ ಯಾರಿಗೂ ತಿಳಿದಿಲ್ಲ. ರಾಜ್ಯ ಸರಕಾರ ಈ ವರದಿಯನ್ನು ಈವರೆಗೆ ಮುಚ್ಚಿಟ್ಟಿರುವುದು ಏಕೆ ಎಂದು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ ಪ್ರಶ್ನಿಸಿದರು.

ಈ ವರದಿಯಲ್ಲಿ ಕಟ್ಟಡದ ಮಾಲೀಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ರಕ್ಷಣೆ ಮಾಡುವ ಹುನ್ನಾರ ಏನಾದರೂ ನಡೆದಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ ಎಂದರು. 

ಈ ಕಟ್ಟಡದ ಮಾಲೀಕರು ಪ್ರಭಾವಿಗಳಾಗಿದ್ದು, ಮೂರು ಪಕ್ಷಗಳಲ್ಲಿ ಇರುವ ಶಾಸಕರು, ಮಾಜಿ ಶಾಸಕರ ಹತ್ತಿರದ ಸಂಬಂಧಿಗಳು ಇರುವುದರಿಂದ ಈ ಅನುಮಾನಕ್ಕೆ ಕಾರಣವಾಗಿದೆ.

ಜಿಲ್ಲಾ ದಂಡಾಧಿಕಾರಿಗಳು ನೀಡಿದ ವರದಿ ಆಂತರಿಕ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಆದರೂ ಕೂಡ ಈ ವರದಿಯನ್ನು ಇಷ್ಟೊಂದು ಮುತುವರ್ಜಿ ವಹಿಸಿ ಗೌಪ್ಯವಾಗಿ ಇಟ್ಟಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ.

ಈ ಕಟ್ಟಡ ದುರಂತದಲ್ಲಿ ಒಟ್ಟು 19 ಜನ ಸಾವನ್ನಪ್ಪಿದ್ದು, 57ಕ್ಕೂ ಹೆಚ್ಚು ಜನ ಗಂಭೀರ ಗಾಯಗಳಾಗಿದ್ದರೂ ಜಿಲ್ಲೆಯ ಒಬ್ಬರೇ ಒಬ್ಬ ಜನಪ್ರತಿನಿಧಿಗಳು ಕೂಡ 2019ರಿಂದ ಇಲ್ಲಿಯವರೆಗೆ ನಡೆದ ಯಾವುದೇ ವಿಧಾನ ಮಂಡಲದ ಅಧಿವೇಶನಗಳಲ್ಲಿ ಒಂದೇ ಒಂದು ಪ್ರಶ್ನೇ ಕೇಳದಿರುವುದು ನೋವಿನ ಸಂಗತಿಯಾಗಿದೆ ಎಂದು ಬಸವರಾಜ ಕೊರವರ ಅಸಮಾಧಾನ ವ್ಯಕ್ತಪಡಿಸಿದರು.
ತಮಗೆ ಇರುವ ಅಧಿಕಾರವನ್ನು ಕೂಡ ಸಮರ್ಥವಾಗಿ ಬಳಸಿಕೊಂಡು ರಾಜ್ಯ ಸರಕಾರದ ಗಮನ ಸೆಳೆಯದಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಕುಟುಕಿದರು.

 19 ಅಮೂಲ್ಯ ಜೀವಗಳನ್ನು ಕಳೆದುಕೊಂಡು ಅನಾಥವಾಗಿರುವ ಆ ಕುಟುಂಬಗಳ ಸದಸ್ಯರಿಗೆ ಮತ್ತು ವಿಶೇಷವಾಗಿ ಬದುಕಿಯೂ ಸತ್ತವರಂತೆ ಇರುವ ಗಾಯಾಳುಗಳಿಗೆ ಈವರೆಗೆ ಜೀವ ತುಂಬುವ ಕೆಲಸ ಮಾಡುವಲ್ಲಿ ಜಿಲ್ಲೆಯ ಶಾಸಕರು ವಿಫಲವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಕೊರವರ ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಕಟ್ಟಡ ಕುಸಿತ ನಿರ್ವಹಣೆ ಹಾಗೂ ಪರಿಹಾರ ವಿತರಣೆಗೆ ಒಂದೇ ಒಂದು ಸರಿಯಾದ ಕಾನೂನುಗಳಿಲ್ಲ.

ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಂಭೀರ ಪ್ರಯತ್ನ ಮಾಡಿರುವುದು ಮತ್ತು ಈ ಬಗ್ಗೆ ವಿಧಾನ ಮಂಡಲದಲ್ಲಿ ಉತ್ತರ ಕರ್ನಾಟಕ ಭಾಗದವರಾಗಲಿ ಮೈಸೂರು ಭಾಗದವರಾಗಲಿ ಧ್ವನಿ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕೇವಲ ಕಟ್ಟಡ ಕುಸಿತಗೊಂಡಾಗ ಬಂದು ಮಾಧ್ಯಮಗಳಲ್ಲಿ ಕಂಬನಿ ಮಿಡಿದರೆ ಸಾಲದು. ಇದಕ್ಕೆ ಒಂದು ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ ಒತ್ತಾಯಿಸಿದರು.

ಇದೇ ಕಟ್ಟಡ ಕುಸಿತ ಬೆಂಗಳೂರು, ಮೈಸೂರು ಭಾಗದಲ್ಲಿ ಆಗಿದ್ದರೆ ಇಡೀ ಶಾಸಕಾಂಗ, ಕಾರ್ಯಾಂಗ ಒಟ್ಟಾಗಿ ನಿಂತು ನೋಂದ ಕುಟುಂಬಗಳ ಪರವಾಗಿ ಹೋರಾಡುತ್ತಿದ್ದರು.

ಆ ಇಚ್ಛಾಶಕ್ತಿ ನಮ್ಮ ಉತ್ತರಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಏಕೆ ಇಲ್ಲ ಎಂದರು.

ಕಟ್ಟಡದ ಅವಶೇಷ ತೆಗೆಯಲು 2021ರ ಜನೆವರಿಯಲ್ಲಿ ಹಣ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಆದರೆ ಈವರೆಗೆ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜೆಸಿಬಿ ಮಾಲೀಕರಿಗೆ ಹಣ ಬಿಡುಗಡೆ ಮಾಡಿಲ್ಲ.

ಇದು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇರುವ ಕಾಳಜಿ ತೋರಿಸಿಕೊಡುತ್ತದೆ ಎಂದು ದೂರಿದರು.

 ಹೀಗಾಗಿ ಈ ವರದಿ ಬಹಿರಂಗಕ್ಕೆ ಆಗ್ರಹಿಸಿ ಜನಜಾಗೃತಿ ಸಂಘದ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಾದಯಾತ್ರೆ ವಿವರ :

ಧಾರವಾಡದ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಸ್ಥಳದಿಂದ 19-03-2021ರಂದು ಶುಕ್ರವಾರ ಬೆಳಗ್ಗೆ 9.30ಕ್ಕೆ ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಆಚರಿಸಲಾಗುತ್ತದೆ.

ಬಳಿಕ ಅಲ್ಲಿಂದ ಪಾದಯಾತ್ರೆ ಆರಂಭಗೊಂಡು ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದೆ ಎಂದು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಕುಮಾರ ಅಗಸಿಮನಿ, ರಾಜು, ಲಾಲ್ ಸಾಬ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *