ಅಂತಾರಾಷ್ಟ್ರೀಯ

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಇನ್ನು ನೆನಪು ಮಾತ್ರ

ಬೆಳಗಾವಿ prajakiran. com : ಕೇಂದ್ರದ ಮಾಜಿ ಸಚಿವರು, ಹಿರಿಯ ರೈತ ಹೋರಾಟಗಾರರು ಆದ ಬಾಬಾಗೌಡ ಪಾಟೀಲ (76) ಶುಕ್ರವಾರ ಬೆಳಗ್ಗೆ ವಿಧಿವಶರಾದರು.

ಕಳೆದ ಕೆಲ ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು , ಅಪಾರ ಬಳಗ ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.

ನಾಡಿನ ರೈತ ಚಳುವಳಿಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ ಇನ್ನಿತರರ ಜೊತೆ ಪ್ರಮುಖ ಪಾತ್ರವಹಿಸಿದ್ದರು.

ನಾಡಿನಾದ್ಯಂತ ವಿವಿಧ ಬೆಳೆಗಳನ್ನು ಬೆಳೆಯುವ ಎಲ್ಲ ರೈತರ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಅರಿತು ಪ್ರತಿಕ್ರಿಯಿಸುತ್ತಿದ್ದ ಪರಿ ಅವರ ಜ್ಞಾನ ಮತ್ತು ಆಸಕ್ತಿಗೆ ಸಾಕ್ಷಿಯಾಗಿದ್ದವು.

ಸ್ವತಃ ರೈತರಾಗಿದ್ದರಿಂದ ರೈತ ಸಮುದಾಯದ ಸಮಸ್ತ ಸಂಕಟಗಳನ್ನು ಅರಿತಿದ್ದರು.

ಎಲ್ಲಿಯೇ ಇರಲಿ ರೈತ ಹೋರಾಟದಲ್ಲಿ ನಿಸ್ವಾರ್ಥದಿಂದ ಪಾಲ್ಗೊಂಡು ಸರಕಾರದ ಕಿವಿ ಹಿಂಡದೇ ಬಿಡುತ್ತಿರಲಿಲ್ಲ.

ಆಡಳಿತ ಮತ್ತು ವಿರೋಧ ಪಕ್ಷವಿರಲಿ ಯಾವುದೇ ರಾಜಕೀಯ ನಾಯಕರನ್ನು ಟೀಕಿಸಲು ಗೌಡರು ಹಿಂಜರಿಯುತ್ತಿರಲಿಲ್ಲ.

ಆದರೆ, ಗೌಡರ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರದಲ್ಲಿದ್ದವರೇ ಎರಡು ಬಾರಿ ಯೋಚನೆ ಮಾಡುತ್ತಿದ್ದರು ಎಂಬಯದಕ್ಕೆ ಗೌಡರ ಪ್ರಾಮಾಣಿಕತೆ ನಿದರ್ಶನ. 

ರೈತ ಹೋರಾಟದ ಮೂಲಕ ವಿಧಾನಸಭೆ ಪ್ರವೇಶಿಸಿದ್ದ ಗೌಡರು, ನಂತರ ಬಿಜೆಪಿಯಿಂದ ಬೆಳಗಾವಿ ಸಂಸದರಾಗಿದ್ದು ಅಲ್ಲದೇ ಅಟಲಬಿಹಾರಿ ವಾಜಪೇಯಿ ಸಂಪುಟದ ಸದಸ್ಯರಾಗಿದ್ದರು.

ಸಜ್ಜನಿಕೆಯ ಪ್ರತಿರೂಪದಂತಿದ್ದ ಅವರು, ನೇರ ನಡೆ-ನುಡಿಯ ವ್ಯಕ್ತಿತ್ವದವರು.
ಶುದ್ಧ ಹಸ್ತದ ನೇತಾರರಾಗಿದ್ದ ಗೌಡರನ್ನು ಕಂಡರೆ ಭ್ರಷ್ಟರು, ಅಧಿಕಾರಸ್ಥರು ಹತ್ತಿರ ಸುಳಿಯಲು ಭಯಪಡುತ್ತಿದ್ದರು.

ರೈತ ಚಳುವಳಿಯಿಂದ ನಾಡಿನ ಬಹುಸಂಖ್ಯಾತ ರೈತ ಸಮುದಾಯದ ಮುಂಚೂಣಿ ನಾಯಕರಾದವರು.

ಬಳಿಕ ಅವರು ತೆಗೆದುಕೊಂಡ ರಾಜಕೀಯ ನಿಲುವುಗಳ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನವಿ‌ತ್ತು.

ಆದರೆ, ವೈಯಕ್ತಿಕವಾಗಿ ಗೌಡರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಮ್ಮೆ ಮತ್ತು ಗೌರವವಿತ್ತು.

ಅಧ್ಯಯನಶೀಲ ಹವ್ಯಾಸ ರೂಢಿಸಿಕೊಂಡಿದ್ದ ಅವರು, ಇತ್ತೀಚೆಗೆ ಆಧ್ಯಾತ್ಮದತ್ತ ಒಲವು ಹೊಂದಿದ್ದರು.

ಪಕ್ಕದ ಬೆಳಗಾವಿ ಜಿಲ್ಲೆಯವರಾಗಿದ್ದರೂ ಧಾರವಾಡ ಜಿಲ್ಲೆಯ ಜನತೆಯ ಪ್ರೀತ್ಯಾದಾರ ಗಳಿಸಿದ್ದರು.

ಸದಾ ಲವಲವಿಕೆಯಿಂದ ಇರುತ್ತಿದ್ದ ಗೌಡರು, ತಮ್ಮ ಬಳಿ ಬಂದ ಪ್ರತಿಯೊಬ್ಬರನ್ನು ಗೌರವಿಸುತ್ತಿದ್ದರು.
ತಮ್ಮ ಎರಡೂ ಕೈಗಳನ್ನು ಜೋಡಿಸಿ ಎದುರಿನವರಿಗೆ ನಮಸ್ಕಾರ ಹೇಳುವ ಸಂಸ್ಕಾರ ರೂಢಿಸಿಕೊಂಡಿದ್ದ ಅವರು ಶರಣ ಸಂಪ್ರದಾಯದ ಕಟ್ಟಾ ಅನುಯಾಯಿ ಆಗಿದ್ದರು.

ಚಿಕ್ಕಬಾಗೇವಾಡಿಯಂತಹ ಸಣ್ಣ ಗ್ರಾಮದ ಹೆಸರನ್ನು ಬೆಳೆಸಿದವರು ದೊಡ್ಡ ಗೌಡರು.

 ನನ್ನ ರಾಜಕೀಯ ಬದುಕು ಏನೇ ಇರಲಿ, ಆದರೆ, ಹುಟ್ಟಿದೂರಿಗೆ ಕಳಂಕ ತರುವ ತಪ್ಪು ಮಾಡಲಾರೆ” ಎಂದು ಆಗಾಗ್ಗೆ ತಮ್ಮೂರಿನ ಮೇಲಿನ ಪ್ರೀತಿಯನ್ನು ಹೊರ ಹಾಕುತ್ತಿದ್ದರು.

ನುಡಿದಂತೆ ನಡೆದ ಬಾಬಾಗೌಡರ ಅಗಲಿಕೆಯಿಂದ‌ ರೈತ ಹೋರಾಟ ಇದೀಗ ತನ್ನ ಕಸುವು ಕಳೆದುಕೊಂಡಂತಾಗಿದೆ.

ಅವರ ನೆರಳಲ್ಲಿ ಬೆಳೆದ ಅನೇಕರಿಗೆ ಗೌಡರು ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಇದು ಬಾಬಾಗೌಡರ ಬದುಕಿಗೆ ಹಿಡಿದ ಕನ್ನಡಿ.

*ಗಣ್ಯರ ಸಂತಾಪ* : ಬಾಬಾಗೌಡ ಪಾಟೀಲರ ಅಗಲಿಕೆಗೆ ಅಗಲಿಕೆಗೆ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಮುಖಂಡರಾದ
ಪಿ.ಎಚ್. ನೀರಲಕೇರಿ,
ಈಶ್ವರಚಂದ್ರ ಹೊಸಮನಿ, ಗುರುರಾಜ ಹುಣಸಿಮರದ, ಗಂಗಾಧರ ಪಾಟೀಲ ಕುಲಕರ್ಣಿ, ಸಿದ್ದಣ್ಣ ಕಂಬಾರ, ಶಿವಾನಂದ ಹೊಳೆಹಡಗಲಿ, ಈರೇಶ ಅಂಚಟಗೇರಿ, ಚನಬಸಪ್ಪ ಮಸೂತಿ, ಸುರೇಶಬಾಬು ತಳವಾರ, ಶ್ರೀಶೈಲಗೌಡ ಕಮತರ, ಮಲ್ಲಿಕಾರ್ಜುನ ಹಡಪದ,ಬಸವರಾಜ ಭಜಂತ್ರಿ, ಮಲ್ಲನಗೌಡ ಪಾಟೀಲ, ಭೀಮಪ್ಪ ಕಾಸಾಯಿ, ಉಳವಪ್ಪ ಒಡೆಯರ,ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *