ಧಾರವಾಡ prajakiran.com : ಆಯುಷ್ ವೈದ್ಯರು ತಮ್ಮ ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಸಾಮೂಹಿಕ ರಾಜೀನಾಮೆ ನೀಡಿ ಮುಷ್ಕರ ನಡೆಸುತ್ತಿರುವ ವೈದ್ಯರ ಮೇಲೆ ಕಾನೂನು ಕ್ರಮ ಜರುಗಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ವಿ. ಸಂಕನೂರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.
ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2 ಸಾವಿರ ವೈದ್ಯರು ಕೊರೋನಾದ ಸಂಕಷ್ಟದ ಸಮಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿ “ಕೋವಿಡ್ ವಾರಿಯರ್ಸ್” ಆಗಿ ಕಾರ್ಯನಿರ್ವಹಿಸುತ್ತಿರುವರು.
ಸುಮಾರು 15 ವರ್ಷಗಳಿಂದ ಇರುವ ಅವರ ಬೇಡಿಕೆಗಳನ್ನು ಸರಕಾರ ಈಡೇರಿಸದೆ ಇರುವದರಿಂದ ನಿರಾಶರಾಗಿ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಹೀಗಿರುವಾಗ ಸರಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚರ್ಚೆಗೆ ಆಹ್ವಾನಿಸಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಾಜಿ ಎಸ್.ವ್ಹಿ. ಸಂಕನೂರ ಅವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇವರಿಗೆ ರಾಜ್ಯದ ಬಿಜೆಪಿ ಸರಕಾರ ಸಕರಾತ್ಮಕವಾಗಿ ಸ್ಪಂದಿಸುತ್ತಾ ಇಲ್ಲವೇ ತಳ್ಳಿ ಹಾಕುತ್ತಾ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.