ಅಂತಾರಾಷ್ಟ್ರೀಯ

ಸಿಮ್ಲಾ ಸೇಬು ಬೆಳೆದು ಮಾದರಿಯಾದ ಬೀದರ ಜಿಲ್ಲೆಯ ರೈತ ಅಪ್ಪಾರಾವ ಭೋಸಲೆ

ಬೀದರ prajakiran. com : ಸಿಮ್ಲಾ ಸೇಬನ್ನು ಬೀದರ ಜಿಲ್ಲೆಯಲ್ಲಿಯೂ ಬೆಳೆಯಬಹುದೆಂದು ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಅಪ್ಪಾರಾವ ದಿಗಂಬರರಾವ ಭೋಸಲೆ ಅವರು ತೋರಿಸಿಕೊಟ್ಟು ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ ೫೧ ವರ್ಷದ ಅಪ್ಪಾರಾವ ಶಿಕ್ಷಣವನ್ನು ಏಳನೇ ತರಗತಿಗೆ ಮೊಟಕುಗೊಳಿಸಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು.

ಕೃಷಿಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನ ಕಂಡುಕೊಳ್ಳುವ ಉದ್ದೇಶದಿಂದ ೧೯೯೨ರಲ್ಲಿ ವಿವಿಧ ರಾಜ್ಯ ಮತ್ತು ನಗರಗಳ ಪ್ರವಾಸಗೈದು ಸೇಬು ಬೆಳೆಯುವ ಮಾಹಿತಿ ಸಂಗ್ರಹಿಸಿದರು.

ನಂತರ ತಮ್ಮ ಒಂದು ಎಕರೆ ಕೆಂಪು ಮತ್ತು ಬರಡು ಭೂಮಿಯಲ್ಲಿ ಹಿಮಾಚಲ ಪ್ರದೇಶ ಸಿಮ್ಲಾದ ಹೆಚ್‌ ಆರ್‌ ಎಂ ಎನ್-೯೯ (ಹರಿಮನ್) ತಳಿಯ ಸೇಬನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 

ಸೇಬಿನ ಸಸಿಗಳ ನಾಟಿಗಾಗಿ ೪x೫ ಅಡಿ ಆಳದ ನಾಲೆ ತೆಗೆದು ೮ ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ, ೧೦೦ ಚೀಲ ಕೋಕೋವಿಟ್ ಗೊಬ್ಬರ ಮತ್ತು ಕೋನಿಕಾ ಔಷಧ ಸಿಂಪಡಿಸಿ ಭೂಮಿ ಹದಗೊಳಿಸಿದರು.

ಬಳಿಕ ಹಿಮಾಚಲ ಪ್ರದೇಶದ ರೂಪೇಶ ಸುನವಾನೆಯವರಿಂದ ಪ್ರತಿ ಸೇಬಿನ ಸಸಿಗೆ ೨೧೦ರೂ.ದಂತೆ ೨೨೨ ಸಸಿಗಳನ್ನು ಖರೀದಿಸಿ, ೨೦೨೧ರ ನವೆಂಬರಿನಲ್ಲಿ ಗಿಡದಿಂದ ಗಿಡಕ್ಕೆ ೧೪x೧೪ ಅಡಿ ಮತ್ತು ಸಾಲಿನಿಂದ ಸಾಲಿಗೆ ೧೪x೧೪ ಅಡಿ ಅಂತರದಲ್ಲಿ ನಾಟಿ ಮಾಡಿದರು.

ಹೂವಿನ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಧನದಿಂದ ಎರಡು ತೆರೆದ ಬಾವಿಗಳಿಗೆ ಅಳವಡಿಸಿಕೊಂಡಿರುವ ಹನಿ ನೀರಾವರಿಯಿಂದ ಪ್ರತಿದಿನ ಒಂದು ಗಂಟೆ ಮತ್ತು ಇಪ್ಪತ್ತು ದಿನಕ್ಕೊಮ್ಮೆ ಕಾಲುವೆಯ ಮೂಲಕ ಸೇಬಿನ ಸಸಿಗಳಿಗೆ ನೀರುಣಸುವರು.

ಇವುಗಳಿಗೆ ತಂಪು ವಾತಾವರಣ ಕಲ್ಪಿಸಲು ಮಿಶ್ರಬೆಳೆಯಾಗಿ ಗಂಗಾ ತಳಿಯ ತೆಂಗನ್ನೂ ಬೆಳೆದಿದ್ದಾರಲ್ಲದೆ, ರೋಗಗಳ ಬಾಧೆ ತಡೆಗಟ್ಟಲು ಐದು ಹೈನು ದನಗಳ ತ್ಯಾಜ್ಯದಿಂದ ತಯಾರಿಸಿದ ಜೀವಾಮೃತವನ್ನು ೨೦ ದಿನಕ್ಕೊಮ್ಮೆ ಸಿಂಪಡಿಸುವರು.

ನಾಟಿ ಮಾಡಿದ ೧೧ ತಿಂಗಳಿಗೇ ಸಸಿಗಳ ಟ್ರಿಮ್ ಮಾಡಿದ್ದು, ಡಿಸೆಂಬರಿನಲ್ಲಿ ಹೂಬಿಟ್ಟು ಈಗ ಪ್ರತಿ ಗಿಡದಲ್ಲಿ ೨೦-೨೫ ಹಣ್ಣುಗಳು ಬಿಟ್ಟು ಪಕ್ವವಾಗುತ್ತಿವೆ.

ಇಲ್ಲಿನ ಹವಾಗುಣಕ್ಕನುಗುಣವಾಗಿ ಸೇಬಿನ ಗಿಡಗಳು ಸಮೃದ್ಧವಾಗಿ ಏಳೆಂಟು ಅಡಿ ಎತ್ತರ ಬೆಳೆದಿವೆ. ಸೇಬಿನ ಬೇಸಾಯಕ್ಕಾಗಿ ಒಟ್ಟು ೫.೫೦ ಲಕ್ಷ ರೂ. ವೆಚ್ಚವಾಗಿದ್ದು, ೭-೮ ಲಕ್ಷ ರೂ. ಆದಾಯ ನಿರೀಕ್ಷಿಸಿದ್ದಾರೆ.

ಅಪ್ಪಾರಾವ ಸಪೋಟಾ, ತೆಂಗು, ಮಾವು, ಕಿತ್ತಳೆ, ಅಂಜೂರ, ನೇರಳೆ, ಲಿಂಬೆ, ಗೋಡಂಬಿ ಗಿಡಗಳನ್ನು ಸಹ ಬೆಳೆದು ವಾರ್ಷಿಕ ೧೨-೧೫ ಲಕ್ಷ ರೂ. ಲಾಭ ಪಡೆಯುತ್ತಿದ್ದಾರೆ.

ಇವರಿಗಿರುವ ಏಳು ಎಕರೆ ಭೂಮಿಯಲ್ಲಿ ಮೊದಲು ಹೀರೇಕಾಯಿ, ಕುಂಬಳಕಾಯಿ, ಜೋಳ, ತೊಗರಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.

“ನಾವು ಬೆಳೆದ ಸೇಬು ಇಲ್ಲಿನ ವಾತಾವರಣದಲ್ಲಿ ವರ್ಷಕ್ಕೆರಡು ಸಲ ಇಳುವರಿ ಕೊಡುತ್ತವೆ. ಸೇಬು ಗಿಡಗಳ ಜೀವಿತಾವಧಿ ಸುಮಾರು ೨೫ ವರ್ಷವಿರುತ್ತದೆಯಾದರೂ ಹಿತಮಿತ ನೀರು, ಸಾವಯವ ಗೊಬ್ಬರ, ಜೀವಾಮೃತದಿಂದ ಸರಿಯಾಗಿ ನಿರ್ವಹಣೆ ಮಾಡಬೇಕಾಗುತ್ತದೆ.

ನಮ್ಮ ಸೇಬು ಹೆಚ್ಚು ರುಚಿಕಟ್ಟಾಗಿದ್ದು, ಬಣ್ಣ ಅತ್ಯಾಕರ್ಷಕವಾಗಿದೆ. ಮುಂದಿನ ಬೆಳೆ ಬಂದಾಗ ಹಣ್ಣು ಮಾರಾಟದ ಯೋಚನೆಯಿದೆ ಸೇಬಿನ ಬೆಳೆಯನ್ನು ಗಾಳಿಮಳೆಯಿಂದ ಮತ್ತು ಜಾನುವಾರುಗಳಿಂದ ಸಂರಕ್ಷಿಸುವುದಕ್ಕಾಗಿ ಪಾಲಿಹೌಸ್ ನಿರ್ಮಿಸಲು ಮತ್ತು ಹೊಲದ ಸುತ್ತ ತಂತಿಬೇಲಿ ಅಳವಡಿಸಲು ಯೋಜಿಸಲಾಗಿದೆ” ಎನ್ನುತ್ತಾರೆ ಅಪ್ಪಾರಾವ ಭೋಸಲೆ.

“ಸಾಂಪ್ರದಾಯಿಕವಾಗಿ ಸೇಬು ಬೆಳೆಯಲು ಬೇಸಿಗೆಯಲ್ಲಿ ೨೧ ರಿಂದ ೨೪ ಡಿಗ್ರಿ ಸೆಲ್ಸಿಯಸ್ ತಾಪಮಾನವಿರಬೇಕು. ಬೀದರ ಜಿಲ್ಲೆಯಲ್ಲಿ ಬೇಸಿಗೆ ತಾಪಮಾನ ೩೫-೪೦ ಡಿಗ್ರಿ ಸೆಲ್ಸಿಯಸ್‌ವರೆಗೆ ಇರುವುದರಿಂದ ಸೇಬು ಬೆಳೆಯಲು ಜಿಲ್ಲೆಯ ಹವಾಗುಣ ಸೂಕ್ತವಲ್ಲ. ಆದರೂ ಸೇಬು ಕೃಷಿಯ ವಿಧಿವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡ ಅಪ್ಪಾರಾವ ಭೋಸಲೆ ಸೇಬನ್ನು ಯಶಸ್ವಿಯಾಗಿ ಬೆಳೆದಿದ್ದಾರೆ” ಎಂಬುದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಝಿಳ್ಳೆ ಮತ್ತು ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಅವರ ಅಭಿಪ್ರಾಯ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *