ರಾಜ್ಯ

ತೈಲ ಬೆಲೆ ಏರಿಕೆ ಖಂಡಿಸಿ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ

ಧಾರವಾಡ prajajiran.com : ತೈಲ, ಅನಿಲ ಬೆಲೆ ಮತ್ತು ದಿನನಿತ್ಯ ಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬುಧವಾರ ಧಾರವಾಡದ ಜ್ಯೂಬಲಿ ಸರ್ಕಲ್ ನ ಬಸವೇಶ್ವರ ಮೂರ್ತಿ ಮುಂಭಾಗದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು,
“ಎಲ್ಲಿವೆ ಅಚ್ಛೆ ದಿನ?” ಅಂತಾ ನಿಮಗೆ ಅಧಿಕಾರ ನೀಡಿರುವ ಕರ್ನಾಟಕದ ಜನತೆ ಕೇಳುತ್ತಿದ್ದಾರೆ. ಭಾರತದ ಜನರು ನಿಮ್ಮ ‘ಒಳ್ಳೆಯ ದಿನಗಳ’ ಘೋಷಣೆ ನಂಬಿ, ನಿಮ್ಮನ್ನು ಬಹಳ ನಿರೀಕ್ಷೆಯೊಂದಿಗೆ ಆರಿಸಿ ಕಳುಹಿಸಿದರು.

ಆದರೆ ಅವರಿಗೆ ಸಿಕ್ಕಿದ್ದು ಮಾತ್ರ ಹಣದುಬ್ಬರ, ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ದಿನಸಿ, ತರಕಾರಿ ಬೆಲೆ ಏರಿಕೆ, ಮುಚ್ಚುತ್ತಿರುವ ಕಾರ್ಖಾನೆಗಳು ಮತ್ತು ಉದ್ಯೋಗ ನಷ್ಟ.

ಇದು ಅಷ್ಟೇ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಅನಿಲ ಮೇಲಿನ ಸಬ್ಸಿಡಿಯನ್ನು ತೆಗೆದು ಹಾಕಿದ್ದೀರಿ ಎಂದು ಆರೋಪಿಸಿದರು.

ದೇಶದಲ್ಲಿ, ಏಳು ವರ್ಷಗಳಿಂದ ತಾವು ಸರ್ಕಾರ ನಡೆಸುತ್ತಿದೀರಿ, ಆದರೆ ಈವರೆಗೆ ದೇಶದ ಆರ್ಥಿಕತೆ ನಿಮ್ಮ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ ಅತಿವೃಷ್ಟಿ, ಕರೋನಾದಿಂದ ರಾಜ್ಯದ ಬಹುಭಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ಅನಿಯಂತ್ರಿತವಾಗಿ ತೈಲ ಬೆಲೆ ಏರಿಕೆಯಾಗಿದ್ದು, ಇದರಿಂದ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ.

ತಾವು ಅಧಿಕಾರಕ್ಕೆ ಬರುವ ಮುನ್ನ 2014ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ 102 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ 71 ಹಾಗೂ ಡೀಸೆಲ್ 56 ರೂಪಾಯಿ ಇತ್ತು.

ಇದೀಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ 42 ಡಾಲರ್ ಗೆ ಇಳಿದಿದೆ. ಈಗ ದೇಶದಲ್ಲಿ ಪೆಟ್ರೋಲ್ 86 ಹಾಗೂ ಡೀಸೆಲ್ 80 ರೂಪಾಯಿ ಇದೆ. .

ಇದಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬೆನ್ನಲ್ಲೇ, ಸಬ್ಸಿಡಿಯುಕ್ತ ಅನಿಲ (ಎಲ್‌ಪಿಜಿ) ಸಿಲಿಂಡರ್ ದರದಲ್ಲೂ 100 ರೂ. ಸದ್ದಿಲ್ಲದೆ ಏರಿಕೆಯಾಗಿದೆ.

ಈ ಹಿಂದೆ ಸಬ್ಸಿಡಿ ಮೊತ್ತವನ್ನು ಗ್ರಾಹಕರು ಸಿಲಿಂಡರ್ ಖರೀದಿಸಿದ ನಂತರ ಅವರ ಬ್ಯಾಂಕ್‌ಖಾತೆಗೆ ಹಾಕಲಾಗುತ್ತಿತ್ತು. ಆದರೆ ಇದೀಗ ಎಲ್ಪಿಜಿ ಸಬ್ಸಿಡಿಯನ್ನೇ ನಿಲ್ಲಿಸಿದ್ದಿರಿ. ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಹೇಳಿದ್ದ ಅಚ್ಛೇ ದಿನ್ ?
ಎಂದು ಪ್ರಶ್ನಿಸಿದರು.

ಒಟ್ಟಾರೆ ಕೇಂದ್ರದಲ್ಲಿನ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಜನತೆಗೆ ಸಂಕಷ್ಟದಲ್ಲಿ ನೆರವಾಗುವ ಬದಲು ಜನತೆಯ ಸಂಕಷ್ಟಗಳನ್ನು ಹೆಚ್ಚಿಸುವ ಕೆಲಸದಲ್ಲಿ ನಿರತವಾಗಿವೆ.

ಸರ್ಕಾರಗಳ ಇಂತಹ ನೀತಿಗಳು ಜನತೆಯ ಬದುಕಿಗೆ ಮಾರಕ ಎಂಬುದನ್ನು ಪ್ರತಿ ಹಂತದಲ್ಲೂ ತೋರುತ್ತಾ ಬಂದಿವೆ. ಕೂಡಲೇ ಸರ್ಕಾರ ಈ ಬಗ್ಗೆ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ಅಹಾರ ವಸ್ತುಗಳ ದರಗಳನ್ನು ನಿಯಂತ್ರಿಸಿ ಜನಸಾಮಾನ್ಯರ ಬದುಕಿಗೆ ನೆರವು ಆಗುವಂತೆ, ದರಗಳಿಗೆ ಮಿತಿ ಹಾಕಬೇಕು.

ಸರ್ಕಾರ ಅತಿ ಹೆಚ್ಚು ಪ್ರಮಾಣದಲ್ಲಿ ವಿಧಿಸಿರುವ ಸೇಸ್ ನಲ್ಲಿ ಕಡಿತ ಮಾಡಿ, ಪೆಟ್ರೋಲ್, ಡಿಸೇಲ್ ದರ ಇಳಿಸಿ, ಮತ್ತು ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿ ಪುನಃ ಜಾರಿಗೊಳಿಸಿ ಜನರ ಬದುಕಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಶಿವಕಿರಣ ಅಗಡಿ, ಪ್ರತಿಭಾ ದಿವಾಕರ, ಅನಂತಕುಮಾರ ಭಾರತೀಯ, ಪ್ರೋ.ವೀರಣ್ಣ ಮಾಗನೂರ, ಪದಾಧಿಕಾರಿಗಳಾದ ಸನಾ ಕುದುರಿ, ಡೇನಿಯಲ್ ಐಕೋಸ್, ಸಚಿನ ಹೊತ್ಕರ್, ಶರೀಫ್ ಸಾಬ ಮಡಿಕೇಶ್ವರ, ಮಹಮ್ಮದ್ ಅರಾಫತ್, ಹಸನ ಅಲಿ ಶೇಖ್, ಡಾ.‌ಜಯತೀರ್ಥ ಚಿಮ್ಮಲಗಿ, ಸುರೇಶಬಾಬು ಗುಜ್ಜರ, ಮಾರ್ತಾಂಡ ಜಾದವ್ ಸೇರಿದಂತೆ ಮುಂತಾದವರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *