ರಾಜ್ಯ

ಧಾರವಾಡದಲ್ಲಿ ೩೭ ಮನೆ ಭಾಗಶ: ಹಾನಿ

ಅತಿವೃಷ್ಟಿ ನಿರ್ವಹಣೆ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಸೂಚನೆ

ಧಾರವಾಡ prajakiran.com : ಕಂದಾಯ, ಕೃಷಿ, ಪಶುಸಂಗೋಪನೆ, ಪಂಚಾಯತ್‌ರಾಜ್, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು, ಎನ್‌ಡಿಆರ್‌ಎಫ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ, ಅತಿವೃಷ್ಠಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

 ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಠಿ ಪರಿಹಾರ ಕಾರ್ಯಗಳ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತು ಸಭೆ ಜರುಗಿಸಿ, ಮಾತನಾಡಿದರು.

 ಕಳೆದ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗಿ ಜನ, ಜಾನುವಾರು, ಮನೆ, ಬೆಳೆ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೂಲಸೌಕರ್ಯಗಳು ಹಾನಿಯಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ.

ಎಲ್ಲ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಪರಿಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

 ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳ, ದೊಡ್ಡಹಳ್ಳ, ಹುಲಿಕೇರಿ, ಮುಗದಕೆರೆ, ಉಣಕಲ್ಲ ಕೆರೆ, ಕೆಲಗೇರಿ ಕೆರೆ ಸೇರಿದಂತೆ ವಿವಿಧ ಜಲಮೂಲಗಳ ಹತ್ತಿರವಿರುವ ಸುಮಾರು ೮೩ ಗ್ರಾಮ ಹಾಗೂ ೪೩ ಸ್ಥಳಗಳಲ್ಲಿ ಅತಿಯಾದ ಮಳೆಯಾದರೆ ತೊಂದರೆ ಆಗುವ ಸಾಧ್ಯತೆ ಇದೆ.

 ಈಗಾಗಲೇ ಎರಡು ದಿನಗಳ ನಿರಂತರ ಮಳೆಯಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ೩೭ ಮನೆಗಳು, ಭಾಗಶ: ಹಾನಿಯಾಗಿದ್ದು, ನವಲಗುಂದ ತಾಲೂಕಿನ ಅನೇಕ ಕಡೆ ಬೆಳೆ ಹಾನಿಯಾಗಿದೆ.

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ಮಾಡಿ ಹಾನಿಯ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅತಿ ಮಳೆಯಿಂದ ಹಾನಿಗೆ ಒಳಗಾಗಬಹುದಾದ ೮೩ ಹಳ್ಳಿಗಳಲ್ಲಿ ಗ್ರಾಮಸ್ಥರೊಂದಿಗೆ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಸಭೆ ಜರುಗಿಸಿ ಚಿಕಿತ್ಸೆ ಸೇರಿದಂತೆ ಜಿಲ್ಲಾಡಳಿತ ಸಿದ್ಧಗೊಳಿಸಿರುವ ಸೌಲಭ್ಯ ಕುರಿತು ಮಾಹಿತಿ ನೀಡಬೇಕು.

ಪ್ರತಿ ಗ್ರಾಮದಲ್ಲಿ ಈಜು, ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮತ್ತು ಉತ್ತಮ ರೀತಿಯಲ್ಲಿ ಸ್ಪಂಧಿಸುವ ೧೦ ಜನ ಯುವ ಸ್ವಯಂ ಸೇವಕರ ತಂಡ ರಚಿಸಬೇಕು.

ಆಯಾ ತಾಲೂಕಿನ ತಹಶೀಲ್ದಾರ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈ ತಂಡಗಳ ಮೇಲುಸ್ತುವಾರಿ ಮಾಡಬೇಕೆಂದು ಅವರು ಸೂಚಿಸಿದರು.

ಪ್ರತಿ ತಾಲೂಕಿಗೆ ಜಿಲ್ಲಾಮಟ್ಟದ ಓರ್ವ ಅಧಿಕಾರಿಯನ್ನು ಅತಿವೃಷ್ಟಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿ  ಆದೇಶಿಸಲಾಗಿದೆ.

ಅಗತ್ಯವಿದ್ದಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಕಟ್ಟಡಗಳನ್ನು ಗುರುತಿಸಿ ಅಲ್ಲಿ ಕುಡಿಯುವ ನೀರು, ಶೌಚಾಲಯ, ಊಟ, ವಸತಿ ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯ ೮೩ ಗ್ರಾಮಗಳು ಪ್ರವಾಹಕ್ಕೆ ಒಳಗಾಗಬಹುದು ಎಂದು ಹಿಂದಿನ ವರ್ಷಗಳ ಅನುಭವಗಳ ಆಧಾರದಲ್ಲಿ ಅಂದಾಜಿಸಲಾಗಿದೆ. ಎಲ್ಲಾ ಹಳ್ಳಿಗಳಲ್ಲಿ ಡಂಗೂರ ಸಾರಿ ಜನರನ್ನು ಎಚ್ಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ,  ಅವಳಿ ನಗರದಲ್ಲಿ ೧೪ ಕೆರೆಗಳನ್ನು ಪರಿಶೀಲಿಸಲಾಗಿದೆ.

ಸುಮಾರು ೪೩ ಸ್ಥಳಗಳು ತೊಂದರೆಗೀಡಾಗುವ ಸಂಭವ ಇದೆ. ಅದರಲ್ಲಿ ೧೮ ಪ್ರದೇಶಗಳಲ್ಲಿ ಹೆಚ್ಚು ಬಾಧಿತವಾಗುವ ಸಾಧ್ಯತೆ ಇದೆ.

ತಗ್ಗು ಪ್ರದೇಶದ ಜನರ ಸ್ಥಳಾಂತರಕ್ಕೆ ೧೭ ಕಲ್ಯಾಣ ಮಂಟಪಗಳನ್ನು ಗುರುತಿಸಿ ಅವುಗಳ ಕೀಲಿಗಳು ಈಗಾಗಲೇ ಪಾಲಿಕೆಯ ಸಿಬ್ಬಂದಿ ಬಳಿ ಇವೆ ಎಂದು ಹೇಳಿದರು.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ೧೩, ಧಾರವಾಡ ತಾಲ್ಲೂಕಿನಲ್ಲಿ ೦೮, ನವಲಗುಂದ ತಾಲ್ಲೂಕಿನ ೨೬ ಹಳ್ಳಿಗಳು ಪ್ರವಾಹಕ್ಕೀಡಾಗಬಹುದು ಎಂದು ಅಂದಾಜಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *