ರಾಜ್ಯ

ತುಪ್ಪರಿಹಳ್ಳ ಯೋಜನೆಗೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಡದಿದ್ದರೆ ಬೃಹತ್ ಪಾದಯಾತ್ರೆ : ಬಸವರಾಜ ಕೊರವರ ಎಚ್ಚರಿಕೆ

ಧಾರವಾಡ prajakiran..com : ತುಪ್ಪರಿಹಳ್ಳವು ಧಾರವಾಡ ಜಿಲ್ಲೆಯ ಜೀವನಾಡಿಯಾಗಿದೆ. ಈ ಹಳ್ಳದ ನೀರು ಸದುಪಯೋಗದ ಕುರಿತು ಇದುವವರೆಗೆ ಕೇವಲ ದೊಡ್ಡ ದೊಡ್ಡ ಭಾಷಣಗಳಾಗಿವೆ ಹೊರತು ಈವರೆಗೆ ಅದರ ಸದುಪಯೋಗ ಕುರಿತು ವೈಜ್ಞಾನಿಕ ಸರ್ವೇ ನಡೆಸದಿರುವುದು ತುಂಬಾ ವಿಷಾದನೀಯ ಸಂಗತಿ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಪರಿ ಹಳ್ಳ ಉಳಿಸಿಕೊಂಡು ಮುಂದಿನ ಪಿಳಿಗೆಗೆ ಅದನ್ನು ಸದುಪಯೋಗವಾಗುವ ರೀತಿಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.

ಧಾರವಾಡ ತಾಲೂಕಿನ ಮೇಲಗಡೆಯಿಂದ ಬಂದು ನವಲಗುಂದ ತಾಲೂಕಿನ ಕೆಳಗಡೆ  ವರೆಗೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಲ್ಲಿ ಸುಮಾರು ೧೨.೨೪ ಟಿಎಂಸಿ ನೀರನ್ನು ತಡೆಗಟ್ಟಿ ಪ್ರವಾಹದಿಂದ ಆಗುವ ಅನಾಹುತಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ತುಪರಿಹಳ್ಳದ ಸುಮಾರು ೫೬ ಉಪಹಳ್ಳಗಳ ಪೈಕಿ ೪೦ ಉಪಹಳ್ಳಗಳು ಧಾರವಾಡ ತಾಲೂಕಿನಲ್ಲಿ ಬರುತ್ತವೆ.
ಈ ಯೋಜನೆಯಿಂದ ಅವುಗಳನ್ನೂ ಕೂಡ ಅಭಿವೃದ್ದಿ ಪಡಿಸಬಹುದಾಗಿದೆ.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸರ್ವೇ ಇಲಾಖೆಗೆ ಪತ್ರ ಬರೆದು ಸರ್ವೇ ಮಾಡಿ ವರದಿ ಸಲ್ಲಿಸಲು ಕೇಳಿಕೊಂಡಿರುತ್ತಾರೆ.

ಆದರೆ ಸರ್ವೇ ಇಲಾಖೆಯವರು  ಸಿಬ್ಬಂದಿ ಹಾಗೂ ಅನುದಾನದ ಕೊರತೆ ಇರುವದಾಗಿ ಹೇಳಿದ್ದಾರೆ. ಅನುದಾನವನ್ನು ನೀಡಿದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಿಂದ ಸರ್ವೆ ಮಾಡಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ

ಹೀಗಾಗಿ ರಾಜ್ಯ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಧಾರವಾಡದಲ್ಲಿ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ, ಪಕ್ಕದ ಜಿಲ್ಲೆಯಾದ ಗದಗನಲ್ಲಿ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರದ ಪ್ರತಿಷ್ಠಿತ ಐಐಟಿ ಹಾಗೂ ಐಐಐಟಿ ಗಳಿವೆ. ಅವುಗಳ ಸದುಪಯೋಗ ಪಡೆದುಕೊಂಡು ವೈಜ್ಞಾನಿಕವಾಗಿ ಸರ್ವೆ ಕಾರ್ಯವನ್ನು ಕೈಕೊಂಡು ಪ್ರಸಕ್ತ ಬಜೆಟ್ ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು.

ಒಂದು ವೇಳೆ ರಾಜ್ಯ ಸರಕಾರಕ್ಕೆ ಹಣಕಾಸಿನ ಅಡಚಣೆ ಇದ್ದರೆ ಧಾರವಾಡ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಬರುವ ಕಾರ್ಪೊರೇಟ್ ಕಂಪನಿಗಳಿಂದ ಸಿ ಎಸ್ ಆರ್ ಫಂಡಿನ ಸಹಾಯ ಪಡೆದು ಯೋಜನೆ ಜಾರಿಗೆ  ಪ್ರಯತ್ನಿಸಬೇಕು.

ಇಲ್ಲದಿದ್ದರೆ ತುಪರಿಹಳ್ಳದ ವ್ಯಾಪ್ತಿ ಹಳ್ಳಿಗಳಲ್ಲಿ ಆ ಭಾಗದ ರೈತರು, ಯುವ ಸಮೂಹವನ್ನು ತೆಗೆದುಕೊಂಡು ತುಪರಿ ಹಳ್ಳದಗುಂಟ ಬೃಹತ್ ಪಾದಯಾತ್ರೆ ನಡೆಸುವುದು, ಧರಣಿ ಸತ್ಯಾಗ್ರಹ ಆರಂಭಿಸುವುದು  ಅನಿವಾರ್ಯವಾಗಲಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.

೨೦೦೦ ಸಾಲಿನಲ್ಲಿಯೇ ನೀರಾವರಿ ತಜ್ಞ ಡಾ. ಜಿ.ಎಂ. ಪರಮಶಿವಯ್ಯ ಅವರ ವರದಿಯಲ್ಲಿ ತುಪರಿಹಳ್ಳ ಹಾಗೂ ಬೆಣ್ಣೆ ಹಳ್ಳದಿಂದ ಹರಿದು ಬರುವ ನೀರು, ಅದನ್ನು ಸದುಪಯೋಗ ಪಡಿಸಿಕೊಳ್ಳಲು ಯಾವ ರೀತಿ ಯೋಜನೆ ರೂಪಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ.

ಆದರೆ ಈವರೆಗೆ ಅದರ ಬಗ್ಗೆ ಜಿಲ್ಲೆಯ ಯಾವೊಬ್ಬ ಪ್ರತಿನಿಧಿಗಳು ಕಿಂಚಿತ್ತೂ ಗಮನಹರಿಸದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ೨೦೧೯ರಲ್ಲಿಯೇ ಜನಜಾಗೃತಿ ಸಂಘ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ೨೦೨೧ ರ ಆಗಸ್ಟ್ ೧೫ರಂದು ಆಗಿನ ಜಿಲ್ಲೆಯ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಂದಿಸಿ ವರದಿ ಡಿಪಿಆರ್ ದಿಂದ ಅನುಮೋದನೆ ಪಡೆದಿದೆ.

ಹಣಕಾಸು ಇಲಾಖೆಯ ಪರವಾನಿಗೆಗೆ ಹೋಗಿದೆ ಎಂದು ಹೇಳಿದ್ದರು. ಆದರೆ ಈವರೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳಿದ್ದರು.

ನೀರಾವರಿ ನಿಗಮದ ಪ್ರಾಥಮಿಕ ಸರ್ವೆ ಪ್ರಕಾರ ಕ್ಯಾಚಮೆಂಟ್ ಪ್ರದೇಶ ತೆಗೆದುಕೊಂಡಲ್ಲಿ ಹನುಮನಾಳ, ಕಲ್ಲೆ, ಕಬ್ಬೂರ ಭಾಗದಲ್ಲಿ ಸುಮಾರು ೧೨೦೭ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಅವಕಾಶ ದೊರೆಯುತ್ತದೆ.

 ಈ ಯೋಜನೆಯನ್ನು ಸಂಪೂರ್ಣ  ಅನುಷ್ಠಾನಗೊಳಿಸಿದಲ್ಲಿ ಧಾರವಾಡ ತಾಲೂಕಿನ ಮೇಲಿನ ಹಂತದಿಂದ ಧಾರವಾಡ ತಾಲೂಕಿನ ಅಂತ್ಯದ ವರೆಗೆ ಕೆಳ ಹಂತದವರೆಗೆ ಸುಮಾರು ಧಾರವಾಡ ತಾಲೂಕಿನ ೧೩ ಹಳ್ಳಿಯ ರೈತರಿಗೆ ಅನುಕೂಲಾಗಲಿದೆ.

ಈ ಹಳ್ಳಿಗಳಲ್ಲಿ ತುಪರಿ ಹಳ್ಳ ಅಂದಾಜು ೩೦ ಮೀಟರ್ ಅಗಲ ಹಾಗೂ ಸುಮಾರು ೩೨ ಕಿ.ಮೀ ತುಪ್ಪರಿಹಳ್ಳವನ್ನು ತಾಂತ್ರಿಕವಾಗಿ ಅಭಿವೃದ್ದಿ ಪಡಿಸಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ನೀರನ್ನು ಸಂರಕ್ಷಣೆ ಮಾಡಿದ್ದಲ್ಲಿ ಸುಮಾರು ೧೦೩೮೩ ಹೆಕ್ಟೇರ್ ಸುಮಾರು ೨೫೦೦೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ ಎಂದು ವಿವರಿಸಿದರು.

ಇದರಿಂದಾಗಿ ಧಾರವಾಡ ತಾಲೂಕಿನ ಸರಾಸರಿ ಕೊಳವೆ ಬಾವಿ ಕೊರೆತ ಕನಿಷ್ಠ ೪೦೦ ಅಡಿಯಿಂದ ಗರಿಷ್ಟ ೯೦೦ ಅಡಿಯವರೆಗೆ ಸದ್ಯ ನೀರಿನ ಲಭ್ಯತೆ ಇರುತ್ತದೆ.

ಈ ಯೋಜನೆಯನ್ನು ಅನುಷ್ಠಾನಗೊಳಿಸಿದಲ್ಲಿ ಸರಾಸರಿ ಪ್ರಮಾಣವನ್ನು ಕನಿಷ್ಠ  ೧೨೦ ಅಡಿಯಿಂದ ಗರಿಷ್ಟ ೫೦೦ ಅಡಿಯವರೆಗೆ  ಇಳಿಯುತ್ತದೆ ಎಂದರು.

ತುಪರಿ ಹಳ್ಳದ ವಿವರ :
ಈ ತುಪರಿ ಹಳ್ಳ ಕಿತ್ತೂರ ತಾಲೂಕಿನ ಅವರಾದಿಯಿಂದ ಧಾರವಾಡ ತಾಲೂಕು ಪ್ರವೇಶಿಸಿ ತೇಗೂರ, ಹಳೆತೇಗೂರ ಹಂಗರಕಿ, ಲೋಕೂರ, ಪುಡಕಲಕಟ್ಟಿ, ಉಪ್ಪಿನಬೆಟಗೇರಿ, ಹಾರೋಬೆಳವಡಿ  ಮಾರ್ಗವಾಗಿ ನವಲಗುಂದ ತಾಲೂಕಿನ ಮೂಲಕ ಬೆಣ್ಣಿಹಳ್ಳಕ್ಕೆ ಸೇರಿ ನಂತರ ಮಲಪ್ರಭೆಗೆ ಸೇರುತ್ತದೆ.

೦ ದಿಂದ ೨೦ ಮೀಟರ ಎತ್ತರದಿಂದ ಹರಿದು ಬರುವ ನೀರು ಮೇಲಿನ ಹಂತದಿಂದ ಹಳೇ ತೇಗೂರ ದಿಂದ ಉಪ್ಪಿನಬೆಟಗೇರಿವರೆಗೆ ಹರಿದು ಅಲ್ಲಿಂದ ಕಲ್ಲೆ, ಕಬ್ಬೇನೂರು, ಹನುಮನಾಳವರೆಗೆ ಬರುವ ನೀರು ಶೇ.೯೫ ರಷ್ಟು ನೀರನ್ನು ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಉಪಯೋಗಿಸಲು ಯೋಗ್ಯವಾಗಿರುತ್ತದೆ.

ಮುಂದೆ ಹಾರೋಬೆಳವಡಿ ಹದ್ದಿನ ವರೆಗೆ ಹರಿದು ಬರುವ ನೀರು ಶೇ.೮೫ ರಷ್ಟು ಕುಡಿಯಲು ಹಾಗೂ ವ್ಯವಸಾಯಕ್ಕೆ ಉಪಯೋಗಿಸಲು ಯೋಗ್ಯವಾಗಿರುತ್ತದೆ.

ಪ್ರತಿಶತ ಶೇಕಡಾ ಮಳೆ ಪ್ರಮಾಣಕ್ಕೆ ಹೋಲಿಸಿದಾಗ ಮಳೆ ಪ್ರಮಾಣವು ಶೇ.೬೦ ರಿಂದ ೭೦ ಆದಲ್ಲಿ ಜುಲೈ ಹಾಗೂ ಅಗಷ್ಟ ತಿಂಗಳ ಮಳೆಯ ಪ್ರಮಾಣವನ್ನು ಪರಿಗಣಿಸಿ ನೀರನ್ನು ಸಂರಕ್ಷಿಸಿದಲ್ಲಿ ಸುಮಾರು ೩.೪ ಟಿಎಂಸಿ ನೀರನ್ನು ಸಮುದ್ರಕ್ಕೆ ಸೇರುವುದನ್ನು ತಡೆಗಟ್ಟಬಹದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಕೊಟಬಾಗಿ ರೈತ ಮುಖಂಡರಾದ ಸಂತೋಷ ಕುರಕುರಿ, ಆನಂದ ಪಾಟೀಲ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *