ಆಧ್ಯಾತ್ಮ

ಹಿರಿಯರ ಆಶೀರ್ವಾದ ಕಿರಿಯರಿಗೆ ರಕ್ಷಾ ಕವಚ

 

ಕೌರವ ಪಾಂಡವ ಸೇನೆಗಳು ಮಹಾಭಾರತದ ಮಹಾಯುದ್ಧಕ್ಕೆ ಸನ್ನದ್ಧವಾಗಿ ಕುರುಕ್ಷೇತ್ರದಲ್ಲಿ ಬಂದು ನಿಂತವು. ಯುದ್ಧ ಯಾವ ಕ್ಷಣದಲ್ಲಾದರೂ ಆರಂಭವಾಗಬಹುದು ಎಂಬ ಲಕ್ಷಣಗಳು ಎದ್ದು ಕಾಣುತ್ತಿದ್ದವು.

ಇಚ್ಛಾಮರಣಿಯಾದ, ಅಜೇಯ ಭೀಷ್ಮ ಪಿತಾಮಹನನ್ನು ಯುದ್ಧದಲ್ಲಿ ಗೆಲ್ಲವುದು ಅಸಾಧ್ಯದ ಮಾತು. ಇಂತಹ ಸಂದಿಗ್ದ ಸಮಯದಲ್ಲಿ ಶ್ರೀ ಕೃಷ್ಣನು ತನ್ನೊಂದಿಗೆ ದ್ರೌಪದಿಯನ್ನು ಭೀಷ್ಮ ಪಿತಾಮಹನ ಶಿಬಿರಕ್ಕೆ ಕರೆ ತರುತ್ತಾನೆ.

ದ್ರೌಪದಿಗೆ ಶಿಬಿರದ ಒಳಗೆ ಹೋಗಿ ಭೀಷ್ಮ ಪಿತಾಮಹರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರಲು ಸೂಚಿಸುತ್ತಾನೆ. ಮತ್ತು ತಾನು ಮಾತ್ರ ಶಿಬಿರದ ಹೊರಗೆ ನಿಲ್ಲುತ್ತಾನೆ.

ದ್ರೌಪದಿಯು ಶಿರಬಾಗಿ ಪಿತಾಮಹನಿಗೆ ನಮಸ್ಕರಿಸಿದಾಗ ಭೀಷ್ಮ ಪಿತಾಮಹನು ಅಖಂಡ ಸೌಭಾಗ್ಯವತಿ ಭವ ಎಂದು ಆಶೀರ್ವದಿಸುತ್ತಾರೆ. ಮತ್ತು ಮಗಳೆ, ಸರಿ ರಾತ್ರಿಯಲ್ಲಿ ನಿನ್ನನ್ನು ಇಲ್ಲಿಗೆ ಕರೆತಂದವರು ಯಾರು? ಶ್ರೀಕೃಷ್ಣ ನಿನ್ನ ಜೊತೆಗೆ ಇದ್ದಾನೆಯೇ? ಎಂದು ವಿಚಾರಿಸುತ್ತಾನೆ.



ದ್ರೌಪದಿ ಹೌದೆಂದು ತಲೆ ಆಡಿಸುತ್ತ ಶ್ರೀಕೃಷ್ಣ ಹೊರಗಡೆ ಇದ್ದಾರೆ ಎಂದು ತಿಳಿಸುತ್ತಾಳೆ. ದ್ರೌಪದಿಗೆ ನೀಡುವ ನನ್ನ ಆರ್ಶಿವಾದ ಪಾಂಡವರ ರಕ್ಷಾಕವಚ ಆಗುತ್ತದೆ ಎಂದು ಶ್ರೀಕೃಷ್ಣ ಮಾತ್ರ ಬಲ್ಲ ಎಂದು ಹೇಳುತ್ತಾ ಹೊರಗೆ ಬಂದು ಶ್ರೀಕೃಷ್ಣನಿಗೆ ನಮಸ್ಕರಿಸುತ್ತಾನೆ.

ದಾರಿಯಲ್ಲಿ ಶ್ರೀಕೃಷ್ಣ ಆಶೀರ್ವಾದದ ಮಹತ್ವ ತಿಳಿಸುತ್ತ ನೀನು ಭೀಷ್ಮ ಪಿತಾಮಹನಿಗೆ ನಮಸ್ಕರಿಸಿ ಪಡೆದ ಆಶೀರ್ವಾದದಿಂದಾಗಿ ನಿನ್ನ ಗಂಡಂದಿರ ಪ್ರಾಣ ಉಳಿಯಿತು.

ನೀನು ಅಜ್ಜನಿಗೆ ಸಲ್ಲಿಸಿದ ಗೌರವ ದಿಂದಾಗಿ ನಿನ್ನ ಪತಿಯಂದರ ಪ್ರಾಣ ಉಳಿಯಿತು. ಅವರಿಗೆ ಜೀವನ ದಾನ ಸಿಕ್ಕಂತಾಯ್ತು ಎಂದನು.

ಒಂದು ವೇಳೆ ನೀನು ಮಾಡಿದಂತೆ ದುರ್ಯೋಧನ, ದುಷ್ಯಾಸನರ ಪತ್ನಿಯರು ಸಕಾಲದಲ್ಲಿ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಲ್ಲಿ ಬಹುಶ: ಮಹಾಭಾರತ ಯುದ್ಧ ಆಗುತ್ತಿರಲಿಲ್ಲವೇನೋ ಎಂದನು.



ಪ್ರಸ್ತುತ ದೃಷ್ಟಾಂತವು ನಮ್ಮ ಇಂದಿನ ಆಧುನಿಕ ಮನೆಗಳಲ್ಲಿನ ಒಣ ಸಮಸ್ಯೆಗಳಿಗೆ ಉತ್ತರ ಅಥವಾ ಪರಿಹಾರ ಆಗಬಹುದು. ಅಹಂನ ಪ್ರಭಾವಕ್ಕೊಳಾದ ಯುವ ಪಿಳೀಗೆಯವರು ಮನೆಯಲ್ಲಿ ಇರುವ, ಸಮಾಜದಲ್ಲಿನ ಸಜ್ಜನರನ್ನು, ವಯಸ್ಸು,, ಜ್ಞಾನ ಮತ್ತು ಅನುಭವದಲ್ಲಿ ಹಿರಿಯರಾದವರನ್ನು ಕಡೆಗಣಿಸುತ್ತಿದ್ದಾರೆ.

ಅವರ ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ತಮ್ಮ ತಂದೆ ತಾಯಿಂದಿರಿಗೆ, ಸೊಸೆ ಮತ್ತು ಅಳಿಯ ತಮ್ಮ ಅತ್ತೆ ಮಾವಂದಿರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಪರಿಪಾಠ ರೂಢಿಸಿಕೊಂಡಲ್ಲಿ ಅನೇಕ ಪಾರಿವಾರಿಕ ಸಮಸ್ಯೆಗಳು ನೀರ ಮೇಲಿನ ಗುಳ್ಳೆಗಳಂತೆ ತಾವಾಗಿ ಒಡೆದು ಹೋಗುತ್ತವೆ.

ಹಿರಿಯರ ಆಶೀರ್ವಾದ ಕಿರಿಯರಿಗೆ ರಕ್ಷಾ ಕವಚವಾಗಿ ರಕ್ಷಿಸುತ್ತದೆ. ಅದನ್ನು ಯಾವುದೇ ಆಯುಧ ಬೇಧಿಸುವುದು ಅಸಾಧ್ಯ. ಆಶೀರ್ವಾದಕ್ಕಾಗಿ ನಾವು ಮಾಡಿದ ನಮಸ್ಕಾರ ನಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತದೆ.



ವಿನಯವಂತಿಕೆ, ಪ್ರೀತಿ, ಗೌರವಗಳನ್ನು ಸೂಚಿಸುತ್ತದೆ. ಅಹಂ, ಅಹಂಕಾರಗಳನ್ನು ಅಳಿಸುತ್ತದೆ. ಶಿಸ್ತು ಕಲಿಸುತ್ತದೆ. ಕಂಟಕಗಳನ್ನು ನಿವಾರಣೆ ಮಾಡುತ್ತದೆ.

ಭವಿಷ್ಯದ ದಾರಿಯನ್ನು ಸ್ಪಷ್ಟವಾಗಿಸುತ್ತದೆ. ನಮಸ್ಕಾರ ಮಾಡುವುದು ಭಾರತದ ವೈಶಿಷ್ಟ್ಯಮಯ ಮತ್ತು ಹೆಮ್ಮೆಯ ಆಚರಣೆ ಆಗಿದೆ.

ಹಿರಿಯರಿಗೆ, ದೇವರಿಗೆ, ಜ್ಞಾನಿಗಳಿಗೆ, ಸಾಧು-ಸಂತ-ಋಷಿಗಳಿಗೆ ಶಿರಬಾಗಿ ನಮಸ್ಕರಿಸೋಣ. ಆಶೀರ್ವಾದ ಪಡೆದು ಸೌಭಾಗ್ಯವಂತರಾಗೋಣ.

ಮಹಾದೇವಯ್ಯ ಕರದಳ್ಳಿ, ಕಲಬುರ್ಗಿ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *