*ಎಸ್ ಡಿ ಎಂ 140 ಜಿನೋಮ್ ಸಿಕ್ವೆನ್ಸಿಂಗ್ ವರದಿ ಬಾಕಿ*
ಧಾರವಾಡ prajakiran.com ಡಿ.01:
ಇಲ್ಲಿನ ಎಸ್ ಡಿ ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ.
ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಿದ್ದ 113 ಪ್ರಕರಣಗಳಲ್ಲಿ ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲವೆಂಬುದು ಗೊತ್ತಾಗಿದೆ.
ಇನ್ನೂ 140 ಪ್ರಕರಣಗಳ ಜಿನೋಮ್ ಸಿಕ್ವೆನ್ಸಿಂಗ್ ವರದಿ ಬರಬೇಕಾಗಿದೆ. ಮುಂಜಾಗ್ರತೆಗಾಗಿ ನಾಳೆ ಡಿ.2 ರಂದು ಕೂಡ ಹೊರ ರೋಗಿಗಳ ವಿಭಾಗದ ಸೇವೆ (ಓಪಿಡಿ) ಹಾಗೂ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮುಂದುವರೆಸಲಾಗುವುದು.
500 ಮೀಟರ್ ಸುತ್ತಮುತ್ತಲಿನ ಪ್ರದೇಶದ ಶಾಲೆ ಕಾಲೇಜುಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಎಸ್ ಡಿ ಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವರದಿಯಾದ ಪ್ರಕರಣಗಳಿಂದ ಕೋವಿಡ್ ಸೋಂಕು ಹೊರಗೆ ಹರಡದಂತೆ ನಿಯಂತ್ರಣದಲ್ಲಿದೆ.
ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಸಂಪೂರ್ಣವಾಗಿ ದೊರೆತ ಬಳಿಕ ತಾಂತ್ರಿಕ ಸಲಹಾ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.