ಬೆಳಗಾವಿ Prajakiran.com : ಬಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವದಾದರೆ ಜಿಲ್ಲೆಯಲ್ಲಿರುವ ನಾಲ್ವರು ಮಂತ್ರಿಗಳು ಯಾಕೆ ಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆರಂಭಿಸಿರುವ ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್ ಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿರುವ ನಾಲ್ವರು ಮಂತ್ರಿಗಳು ಬಿಮ್ಸ್ ಗೆ ತೆರಳಿ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.
ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡಲು ಆಗುವುದಿಲ್ಲ. ಒಂದು ವೇಳೆ ಮುಖ್ಯಮಂತ್ರಿ ಗಳೇ ಮಾಡುವದಾದರೆ ಸಚಿವರಿದ್ದು ಏನು ಪ್ರಯೋಜನ ಎಂದರು.
ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯರೇ ಆಗಿರಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಸ್ಥಳೀಯರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತದೆ.
ಅನುಭವವೂ ಇರುತ್ತದೆ. ಹೀಗಾಗಿ, ಜಿಲ್ಲೆಯಲ್ಲಿರುವ ನಾಲ್ವರು ಸಚಿವರಲ್ಲಿ ಒಬ್ಬರು ಜಿಲ್ಲಾ ಉಸ್ತುಸಚಿವರಾಗಬೇಕಿತ್ತು ಎಂದು ಹೇಳಿದರು.