ರಾಜ್ಯ

ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಪ್ರಾರಂಭ

ಬೆಂಗಳೂರುprajakiran.com, ಆಗಸ್ಟ್ 15 :

ಸಂಗೊಳ್ಳಿ ರಾಯಣ್ಣ ಹೆಸರಿನ ಶಾಲೆ ಯನ್ನು ಮಿಲಟರಿ ಶಾಲೆಯಾಗಿ ಪರಿವರ್ತಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಉದ್ಘಾಟನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225ನೇ ಜಯಂತೋತ್ಸವ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಈ ಶಾಲೆಯ ಪೀಠೋಪಕರಣ ಹಾಗೂ ಇತರ ಸೌಲಭ್ಯಗಳಿಗಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅದಕ್ಕೆ ಬೇಕಾದ 180 ಕೋಟಿ ರೂ.ಗಳನ್ನು ಹಿಂದಿದ್ದ ಮತ್ತು ಈಗಿನ ಸರ್ಕಾರ ವೆಚ್ಚ ಮಾಡಿದೆ. ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ನಂದಗಢದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.

*ಕನ್ನಡಕ್ಕಾಗಿ ಹೋರಾಟ ಹಾಗೂ ರೈತ ಹೋರಾಟ ಸ್ಮರಣಾರ್ಥ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ :*

ಸ್ವಾತಂತ್ರ್ಯಾನಂತರದ ಹೋರಾಟಗಾರರನ್ನೂ ನಾವು ಮರೆಯಬಾರದು. ಕನ್ನಡ ನಾಡನ್ನು ಕಟ್ಟಲು, ಭಾಷೆ ಸಂಸ್ಕೃತಿಗಳನ್ನು ಉಳಿಸಲು ಹತ್ತು ಹಲವು ಹೋರಾಟಗಳಾಗಿವೆ.

ಕರ್ನಾಟಕ ಏಕೀಕರಣ ಹೋರಾಟ,ಕರ್ನಾಟಕವನ್ನು ಒಗ್ಗೂಡಿಸಲು ಹೋರಾಟ, ಗಡಿಭಾಗಗಳಿಗೆ ಹೋರಾಟ , ಇವೆಲ್ಲವನ್ನೂ ನಾವು ಸ್ಮರಿಸಬೇಕಿದೆ. ಕನ್ನಡಕ್ಕಾಗಿ ಕನ್ನಡಿಗರ ಹೋರಾಟ ಮತ್ತು ರೈತರ ಹೋರಾಟದ ಸ್ಮರಣೆ ಬೆಂಗಳೂರಿನ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗುವುದು.

ಇದಕ್ಕೆ ಕನ್ನಡಪರ ಹಾಗೂ ರೈತಸಂಘಗಳ ಮಾರ್ಗದರ್ಶನ ಪಡೆಯಲಾಗುವುದು. ನವದೆಹಲಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

*ಬಾಡ ದಲ್ಲಿ ಕನಕ ಅರಮನೆ :*
ಸ್ವಾತಂತ್ರ್ಯಹೋರಾಟದ ಸ್ಮಾರಕಗಳನ್ನು ಅಭಿವೃದ್ಧಿ ಮಾಡುವ ನಿರ್ಣಯವನ್ನು ಸರ್ಕಾರ ಮಾಡಿದೆ. ಕನಕದಾಸ ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿಗೆ ನಾಯಕರಾದ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ 40 ಕೋಟಿ ರೂ. ಒದಗಿಸಿದ್ದಾರೆ. ಕನಕದಾಸರು ಹುಟ್ಟಿದ ಬಾಡ ಕ್ಷೇತ್ರದಲ್ಲಿ ಸರ್ಕಾರ 25 ಕೋಟಿ ರೂ. ವೆಚ್ಚದಲ್ಲಿ ಕನಕನ ಅರಮನೆಯನ್ನು ನಿರ್ಮಿಸಿದೆ.

ಇವೆಲ್ಲವೂ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕಕ್ಕೆ ತಿಳಿಹೇಳುವ ಪ್ರಯಾಸವಾಗಿದೆ. ಕನಕದಾಸರನ್ನು ಮೋಸದಿಂದ ಘಾಸಿಗೊಳಿಸಿದ ಸಂದರ್ಭದಲ್ಲಿ ‘ಆ ಸೋಲಿನಲ್ಲಿ ಹಲವಾರು ಗೆಲವುನ್ನು ಕಂಡೆ, ನನ್ನನ್ನು ನಾನು ಗೆದ್ದುಕೊಂಡೆ’ ಎಂದು ನುಡಿದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

*ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ :*

ಸಂಗೊಳ್ಳಿ ರಾಯಣ್ಣ ಸ್ವಾಮಿನಿಷ್ಠೆ, ಶೌರ್ಯಧೈರ್ಯಗಳಿಗೆ ಹೆಸರುವಾಸಿ. ಅವರ ಚರಿತ್ರೆಯಲ್ಲಿ ಎಂದೂ ಕೂಡ ಮುಂದಿಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟರಾಗಿದ್ದ ಅವರು ಬ್ರಿಟೀಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದರು.

ಕಿತ್ತೂರು ರಾಣಿ ಚೆನ್ನಮ್ಮನನ್ನು ಬ್ರಿಟೀಷರು ಬೈಲಹೊಂಗಲದ ಜೈಲಿನಲ್ಲಿಟ್ಟ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ರಾಯಣ್ಣ ಮುಂದುವರೆಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮನಿಗೆ ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯ ಗಳಿಸಿಕೊಡುವನೆಂಬ ಅದಮ್ಯ ವಿಶ್ವಾಸವಿತ್ತು. ಹೋರಾಟದಲ್ಲಿ ಸೆರೆಸಿಕ್ಕ ರಾಯಣ್ಣನನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ನಂದಗಢದಲ್ಲಿ ತನ್ನ ತಾಯಿಗೆ ‘ಒಬ್ಬ ರಾಯಣ್ಣನನ್ನು ಗಲ್ಲಿಗೇರಿಸಿದರೆ ಚಿಂತೆಯಿಲ್ಲ.

ಕಿತ್ತೂರು ನಾಡಿನ ಮನೆಮನೆಯಲ್ಲಿಯೂ ಒಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ‘ ಎಂದು ನುಡಿದಿದ್ದರು. ಇದು ಕನ್ನಡ ನಾಡಿನ ಕೆಚ್ಚದೆಯ ಇತಿಹಾಸ. ಈಸೂರು ಸತ್ಯಾಗ್ರ, ಅಂಕೋಲಾ ಉಪ್ಪಿನ ಸತ್ಯಾಗ್ರಹ, ಶಿವಪುರ ಸತ್ಯಾಗ್ರಹಗಳೆಲ್ಲವೂ ನಮಗೆ ಪ್ರೇರಣೆಯಾಗಿವೆ ಎಂದರು.

*ಭಾರತವನ್ನು ವಿಶ್ವಭಾರತವಾಗಿಸಲು ಸಂಕಲ್ಪ :*

ನಮ್ಮ ದೇಶ ಶ್ರೇಷ್ಠ ದೇಶ ಎನ್ನುವ ಕಲ್ಪನೆ ನಮ್ಮನ್ನು ದೇಶಕ್ಕಾಗಿ ಸಮರ್ಪಣೆ ಮಾಡಬೇಕಾಗಿದೆ. ದೇಶಕ್ಕಾಗಿ ನಾವೇನು ಮಾಡಬಲ್ಲೆವು ಎಂಬುದನ್ನು ಮುಂದಿನ 25 ವರ್ಷದ ಅಮೃತಕಾಲದಲ್ಲಿ ಸಾಧಿಸಬೇಕಿದೆ.

ಯುವಜನತೆ ಜಾತಿಮತಬೇಧಗಳನ್ನು ಲೆಕ್ಕಿಸದೇ ದೇಶಕ್ಕಾಗಿ ದುಡಿಯಬೇಕಿದೆ. ಭಾರತವನ್ನು ವಿಶ್ವಭಾರತವಾಗಿಸಲು ಎಲ್ಲರೂ ಸಮರ್ಪಣಾ ಭಾವದಿಂದ ಸಂಕಲ್ಪ ತೊಡಬೇಕಿದೆ. ಭವ್ಯ ಭಾರತ ಕಟ್ಟುವ ಮೂಲಕ ಸಂಗೊಳ್ಳಿ ರಾಯಣ್ಣನಂತಹ ಮಹಾನ್ ಚೇತನಗಳಿಗೆ ಗೌರವ ಸಮರ್ಪಿಸಬೇಕೆಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *