ರಾಜ್ಯ

ಪರಭಾಷಾ ಪತ್ರ, ಆದೇಶಗಳನ್ನು ಕನ್ನಡಿಕರಿಸಿ ; ನಿತ್ಯ ಕನ್ನಡ ಬಳಸಿ, ಜನಸ್ನೆಹಿ ಆಡಳಿತ ನೀಡಿ

 ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ*

ಧಾರವಾಡ prajakiran.com ಜು.30: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯಾಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಆದ್ಯತೆ ನೀಡಿ, ಕೇಂದ್ರ ಹಾಗೂ ಹೊರ ರಾಜ್ಯಗಳಿಂದ ಬರುವ ಪತ್ರ, ಸುತ್ತೋಲೆಗಳನ್ನು ಕನ್ನಡಿಕರಿಸಿ, ಆಡಳಿತ ನಿರ್ವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕನ್ನಡ ಭಾಷಾ ಅನುಷ್ಟಾನ ಕುರಿತು ಪ್ರಗತಿ ಪರುಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ಎಲ್ಲ ಇಲಾಖೆಗಳು ಕನ್ನಡ ಬಳಕೆ ಮಾಡಬೇಕು. ಸರಕಾರ ಮತ್ತು ಸಾರ್ವಜನಿಕರೊಂದಿಗೆ ಕನ್ನಡದಲ್ಲಿಯೇ ಪತ್ರ ವ್ಯವಹಾರ ಮಾಡಬೇಕು. ಕೇಂದ್ರೀಯ ವಿದ್ಯಾಲಯ, ಸಿಬಿಎಸ್ ಸಿ ಶಾಲೆಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ಸೀಗುವಂತೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಗಮನಹರಿಸಬೇಕೆಂದು ಅವರು ಹೇಳಿದರು.

ರಾಜ್ಯದಲ್ಲಿ ಕನ್ನಡ ಭಾಷಾ ಕಲಿಕಾ ಅಧಿನಿಯಮವಾಗಿ ಜಾರಿಯಾಗಿ ಐದು ವರ್ಷಗಳು ಕಳೆದಿವೆ. ಎಲ್ಲ ಇಲಾಖೆಗಳ ಎಲ್ಲ ಪತ್ರ ವ್ಯವಹಾರ ಕನ್ನಡದಲ್ಲಿಯೇ ಆಗಬೇಕು.

ನಗರದ ಪ್ರಮುಖ ರಸ್ತೆ, ವೃತ್ತಗಳಿಗೆ ಸ್ಥಳೀಯ ನಾಯಕರ, ಹೋರಾಟಗಾರರ ಮತ್ತು ಐತಿಹಾಸಿಕ ಸ್ಥಳಗಳ ಹೆಸರು ನಾಮಕರಣ ಆಗಬೇಕು. ಕನ್ನಡ ಉಳಿಸಿ, ಬೆಳೆಸುವಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾಗಿದೆ ಎಂದು ಟಿ.ಎಸ್.ನಾಗಾಭರಣ ಅವರು ಹೇಳಿದರು.

ಧಾರವಾಡ ಸಾಂಸ್ಕೃತಿಕ ರಾಜಧಾನಿ, ರಾಜ್ಯದ ಅನೇಕ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡ ಅನುಷ್ಠಾನದಲ್ಲಿ ಧಾರವಾಡ ಮಾದರಿಯಾಗಬೇಕು. ಧಾರವಾಡ ಮಾದರಿ ಎಂದೆ ಪರಿಚಿತವಾಗಬೇಕು.

ಜಾಲತಾಣಗಳು ಸಂಪೂರ್ಣ ಕನ್ನಡಮಯವಾಗಬೇಕು. ಪ್ರಾಧಿಕಾರದ ನಿರಂತರ ಪ್ರಯತ್ನದಿಂದ ಜಾಲತಾಣಗಳ ಮುಖಪುಟ ಕನ್ನಡದಲ್ಲಿ ಬರುತ್ತಿದೆ. ಅದರ ಒಳ ಹೂರಣವೂ ಕನ್ನಡಮಯವಾಗಬೇಕು ಎಂದರು.

ಕನ್ನಡ ಕಾಣಿಸಬೇಕು, ಕನ್ನಡ ಕೇಳಿಸಬೇಕು. ಅಂದಾಗ ಮಾತ್ರ ಪ್ರತಿ ಇಲಾಖೆ, ವ್ಯವಹಾರಗಳು ಕನ್ನಡಮಯವಾಗುತ್ತವೆ ಎಂದು ಆಶಿಸಿದರು.

ಹೊರ ರಾಜ್ಯ, ದೇಶಗಳಿಂದ ಬಂದು ರಾಜ್ಯದಲ್ಲಿ ವ್ಯಾಪಾರ, ವ್ಯವಹಾರ ಮಾಡಲು ಇಚ್ಚಿಸುವ ಮತ್ತು ಬಂಡವಾಳ ಹೂಡುವ ಉದ್ದಿಮೆಗಳು ರಾಜ್ಯ ಸರಕಾರದ ಭಾಷಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು.

ವಾಣಿಜ್ಯ ವ್ಯವಹಾರಕ್ಕೆ ಅನುಮತಿ ಪಡೆಯುವಾಗ ಕನ್ನಡ ಬಳಕೆಯ ಷರತ್ತುಗಳನ್ನು ಪೂರೈಸುವ ಖಾತರಿ ಮಾಡಿಕೊಳ್ಳಬೇಕು ಎಂದು ಟಿ.ಎಸ್.ನಾಗಾಭರಣ ತಿಳಿಸಿದರು.

ಸರೋಜನಿ ಮಹಿಷಿ ವರದಿ ಸೇರಿದಂತೆ ಕನ್ನಡ ಅನುಷ್ಠಾನಕ್ಕಾಗಿ ರಚನೆಗೊಂಡ ಎಲ್ಲ ಆಯೋಗದ ವರದಿಗಳಿಗೆ ಕಾಯ್ದೆ ಸ್ವರೂಪ ನೀಡಿ, ಜಾರಿಗೊಳಿಸಬೇಕು. ಶಾಲಾ ಹಂತದಲ್ಲಿ ಕನ್ನಡ ಬೆಳೆಸಲು ಪಾಲಕರು, ಪೋಷಕರು ಪ್ರೊತ್ಸಾಹ ನೀಡುವ ವಾತಾವರಣ ರೂಪಿಸಬೇಕು.

ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಸಮಗ್ರ ಕನ್ನಡ ಅಭಿವೃದ್ಧಿಗಾಗಿ ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರಕಾರ ಅಧಿವೇಶನದಲ್ಲಿ ಇದಕ್ಕೆ ಕಾಯ್ದೆ ಸ್ವರೂಪ ನೀಡಬೇಕೆಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಧಾರವಾಡವು ಕನ್ನಡದ ಅಗ್ರ ನೆಲ. ಜಿಲ್ಲೆಯ ಆಡಳಿತದಲ್ಲಿ ಕನ್ನಡ ಬಳಕೆ ಆಗುತ್ತಿದೆ. ಜಿಲ್ಲಾ ಮಟ್ಟದ ಇಲಾಖೆಗಳಲ್ಲಿ ಕನ್ನಡ ಅನುಷ್ಟಾನಗೊಳಿಸಿರುವ ಬಗ್ಗೆ ಪರಿಶೀಲನೆ, ಮಾರ್ಗದರ್ಶನ ನಿರಂತರವಾಗಿ ನಡೆಯುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡುವ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲಾ, ಕಾಲೇಜಗಳಲ್ಲಿ ಕನ್ನಡ ವಾತಾವರಣ ಸೃಷ್ಟಿಸಲು ಶಿಕ್ಷಣ ಇಲಾಖೆ ಮೂಲಕ ಕ್ರಮವಹಿಸಲಾಗಿದೆ. ಪ್ರತಿ ತಿಂಗಳು ಕನ್ನಡ ಪತ್ರ ವ್ಯವಹಾರದ ಬಗ್ಗೆ ಇಲಾಖಾವಾರು ವರದಿ ಪಡೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಮಾತನಾಡಿ, ನೋಂದಣಿ ಇಲಾಖೆಯಲ್ಲಿ ಎಲ್ಲ ಕಾಗದಪತ್ರಗಳನ್ನು ಕನ್ನಡ ಭಾಷೆಯಲ್ಲಿಯೇ ನೋಂದಾಯಿಸಲು ಕ್ರಮ ವಹಿಸಬೇಕು ಮತ್ತು ನೋಂದಣಿ ಕಚೇರಿ ಮುಖ್ಯ ದ್ವಾರದಲ್ಲಿ ಈ ಕುರಿತು ಮಾಹಿತಿ ಫಲಕಗಳನ್ನು ಹಾಕಬೇಕೆಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧಿಕಾರದ ಅಧಿಕಾರಿ ಮಹೇಶ.ಎನ್ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೆರಿ ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎಸ್.ಎಸ್.ಹಿರೇಮಠ, ಡಾ.ರಾಮು ಮೂಲಗಿ,ಎಚ್.ಎಸ್.ಕಿರಣ, ಗದಗಯ್ಯ ಹಿರೇಮಠ, ನಾರಾಯಣ ಪಾಂಡುರಂಗಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *