ಬೆಂಗಳೂರು prajakiran.com : ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹಾಯ ಹಸ್ತ ಚಾಚಿದೆ.
ಕೋವಿಡ್ ನಿಯಂತ್ರಣಕ್ಕೆ ಕಳೆದ ವರ್ಷ 100 ಕೋಟಿ ರೂ. ನೀಡಿದ್ದ ಸಂಸ್ಥೆ ಇದೀಗ ಮತ್ತೆ 100 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಸುಧಾಮೂರ್ತಿ ಅವರು ಮಾಹಿತಿ ನೀಡಿದ್ದು, ಕೋವಿಡ್ ಸಂಕಷ್ಟದಲ್ಲಿರುವ ಕೋವಿಡ್ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಮೂಲಸೌಕರ್ಯಗಳನ್ನು ಪಡೆಯಲು 100 ಕೋಟಿ ರೂ. ದೇಣಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಲು ನೆರವು ನೀಡಲಾಗಿತ್ತು.
ಇದೀಗ ಆ ಆಸ್ಪತ್ರೆ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಈ ವರ್ಷ ಇನ್ಫೋಸಿಸ್ ಸಂಸ್ಥೆ ಇರುವ ದೆಹಲಿ, ಹೈದರಾಬಾದ್, ಮಂಗಳೂರು, ಪುಣೆ, ನಾಗ್ಪುರ ನಗರದಲ್ಲಿಯೂ ಕೊರೋನಾ ಬಿಕ್ಕಟ್ಟು ನಿರ್ವಹಣೆಗೆ ನೆರವಿನ ಹಣ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.