ರಾಜ್ಯ

ರಾಜ್ಯದಲ್ಲಿ  20 ಲಕ್ಷ ಉದ್ಯೋಗಾವಕಾಶ ಕಲ್ಪಿಸುವ ನೂತನ ಕೈಗಾರಿಕಾ ನೀತಿ ಜಾರಿ  

ಬೆಂಗಳೂರು prajakiran.com : ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.

2020-25ರಲ್ಲಿ ರಾಜ್ಯವನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿ ಮಾಡುವತ್ತ ಪ್ರಮುಖ ಹೆಜ್ಜೆ ಇರಿಸಲಾಗಿದ್ದು, ಇದಕ್ಕೆ ರಾಜ್ಯ ಸಚಿವ ಸಂಪುಟದ ಅನುಮೋದನೆ  ನೀಡಿದೆ.

ನೂತನ ಕೈಗಾರಿಕಾ ನೀತಿ 2020-25ರ ಗಮನವು ಕರ್ನಾಟಕ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು.

ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 & ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸುವುದಾಗಿದೆ.

ಈ ಪಾಲಿಸಿಯಲ್ಲಿ ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ಜೋನ್‍ಗಳನ್ನಾಗಿ ವಿಂಗಡಿಸಲಾಗಿದೆ.

ಜೋನ್-1 ಹಾಗೂ 2 ರಡಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರಿರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಜೋನ್-3 ರಲ್ಲಿ ವರ್ಗೀಕರಿಸಲಾಗಿದೆ

ಕಾರ್ಮಿಕ ಕಾನೂನುಗಳ ಸುಧಾರಣೆ:

  • ರಾತ್ರಿ ಪಾಳಿಯಲ್ಲಿ ಅಂದರೆ ರಾತ್ರಿ 7 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲು ಮುಂದೆ ಬರುವ ಮಹಿಳಾ ಕಾರ್ಮಿಕರಿಗೆ ಫ್ಯಾಕ್ಟರೀಸ್ ಕಾಯ್ದೆ 1948ರಡಿ ತಿದ್ದುಪಡಿ ತರಲಾಗಿದೆ.
  • ಒಂದು ತ್ರೈಮಾಸಿಕದಲ್ಲಿ ಒಟ್ಟು 125 ಗಂಟೆಗಳವರೆಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಫ್ಯಾಕ್ಟರೀಸ್ ಕಾಯ್ದೆ, 1948ರ ಸೆಕ್ಷನ್ 64 ಹಾಗೂ 65ರಡಿ ತಿದ್ದುಪಡಿ ಮಾಡಲು ಸರ್ಕಾರವು ಪ್ರಸ್ತಾಪಿಸಿದೆ.
  • ಫಿಕ್ಸ್ಡ್ ಟರ್ಮ್ ಎಂಪ್ಲಾಯ್‍ಮೆಂಟ್ (ಎಫ್.ಟಿ.ಇ.) / ಕಾಂಟ್ರ್ಯಾಕ್ಟ್ ಎಂಪ್ಲಾಯ್‍ಮೆಂಟ್‍ಗಳ ಬಗ್ಗೆ ಸರ್ಕಾರವು ಅವಶ್ಯ ತಿದ್ದುಪಡಿಗಳನ್ನು ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್‍ಮೆಂಟ್ (ಸ್ಟ್ಯಾಂಡಿಂಗ್ ಆರ್ಡರ್) ಆಕ್ಟ್, 1946 ರಡಿ ಈಗಾಗಲೇ ತರಲಾಗಿದೆ ಮತ್ತು ದಿನಾಂಕ: 30.06.2020ರಂದು ನಿಯಮಗಳನ್ನು ಅಧಿಸೂಚಿಸಿದೆ.
  • ಕಾಲಕ್ಕನುಗುಣವಾಗಿ ಕನಿಷ್ಠ ವೇತನ ಪರಿಷ್ಕರಣೆಯನ್ನು ಕನಿಷ್ಟ ವೇತನ ಕಾಯ್ದೆಯಡಿ ನಿಗಧಿಪಡಿಸಲಾಗುವುದು ಮತ್ತು ಹಣದುಬ್ಬರ & ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ರ ಅಂಶಗಳಿಗೂ ಸಹ ಲಿಂಕ್ ಆಗಿರುತ್ತದೆ.
  • ಸರಕು ರಫ್ತು ಉತ್ತೇಜಿಸಲು, ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್‍ಮೆಂಟ್ (ಸ್ಟ್ಯಾಂಡಿಂಗ್ ಆರ್ಡರ್) ಆಕ್ಟ್, 1946 ರಡಿ ಐಟಿ ಮತ್ತು ಐಟಿಇಎಸ್ ಎಸ್ಟ್ಯಾಬ್ಲಿಷ್‍ಮೆಂಟ್‍ಗಳಿಗೆ ಅವಕಾಶವಿರುವಂತೆ ಇದೇ ವಿನಾಯಿತಿಯನ್ನು ಮ್ಯಾನುಫ್ಯಾಕ್ಚರಿಂಗ್ ಎಸ್.ಇ.ಜೆಡ್.ಗಳಿಗೂ ವಿಸ್ತರಿಸಲು ಅಧಿಸೂಚನೆ ಸಂಖ್ಯೆ: ಎಲ್‍ಡಿ 194 ಎಲ್‍ಇಟಿ 2016, ದಿನಾಂಕ: 28.11.2019 ರಲ್ಲಿ ತಿದ್ದುಪಡಿ ತರಲಾಗಿದೆ.

ಕರ್ನಾಟಕ ಕೈಗಾರಿಕಾ (ಸೌಲಭ್ಯ) (ತಿದ್ದುಪಡಿ) ಕಾಯ್ದೆ:

  • ಎಸ್.ಹೆಚ್.ಎಲ್.ಸಿ.ಸಿ. / ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ. / ಡಿ.ಎಲ್.ಎಸ್.ಡಬ್ಲ್ಯೂ.ಸಿ.ಸಿ.ಯಿಂದ ಅನುಮೋದನೆ ಪಡೆದ ನಂತರ ಉತ್ಪಾದನಾ ಕೈಗಾರಿಕೆಗಳು / ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ, ಉದ್ಯಮಗಳಿಗೆ ಸ್ವೀಕೃತಿ ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಪ್ರಮಾಣಪತ್ರವು ವಿವಿಧ ಕೆಳಹಂತದ ಇಲಾಖೆಗಳಿಂದ ಮೂರು ವರ್ಷಗಳ ಆರಂಭಿಕ ಅವಧಿಗೆ ಅಥವಾ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾದ ದಿನಾಂಕದಿಂದ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ.
  • ಕರ್ನಾಟಕ ಉದ್ಯೋಗ ಮಿತ್ರದ ವೆಬ್ ಪೋರ್ಟಲ್‍ನಲ್ಲಿ ಕೈಗಾರಿಕೆಗಳಿಗೆ / ಉದ್ಯಮಿಗಳಿಗೆ ಸಾಮಾನ್ಯ ಅರ್ಜಿ ನಮೂನೆ, ಸ್ವಯಂ ದೃಢೀಕರಣ ಮತ್ತು ಆನ್‍ಲೈನ್ ಶುಲ್ಕವನ್ನು ಪಾವತಿಸುವುದನ್ನು ಸಕ್ರಿಯಗೊಳಿಸಲಾಗುವುದು.
  • ಸ್ವೀಕೃತಿ ಪ್ರಮಾಣಪತ್ರವು ಕೈಗಾರಿಕೆಗಳು ಸೈಟ್‍ನಲ್ಲಿ ಕೆಲಸ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
  • ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ಮೊದಲು, ಸಂಬಂಧಿತ ಉತ್ಪಾದನಾ ಉದ್ಯಮ / ಉದ್ಯಮವು ಅಗತ್ಯವಾದ ಅನುಮತಿ / ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ.
  • ಎಲ್ಲಾ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳು ಒಟ್ಟಾರೆ ಆಧಾರದ ಮೇಲೆ ಕನ್ನಡಿಗರಿಗೆ ಕನಿಷ್ಠ 70% ಮತ್ತು 100% ರಷ್ಟು ಗ್ರೂಪ್ ಡಿ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸತಕ್ಕದ್ದು.
  • ನೂತನ ಕೈಗಾರಿಕಾ ನೀತಿ 2020-25 ರಲ್ಲಿ ಈ ಕೆಳಕಂಡ ರಿಯಾಯಿತಿ ಹಾಗೂ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ:

ಕರ್ನಾಟಕವು ಭಾರತದಲ್ಲಿ ಮೊದಲ ಬಾರಿಗೆ ತೆರಿಗೆ ಆಧಾರಿತ ಪ್ರೋತ್ಸಾಹಗಳ ಬದಲಾಗಿ ಉತ್ಪಾದನಾ ಆಧಾರಿತ ಕಾರ್ಯಕ್ಷಮತೆಯನ್ನು ಉತ್ತೇಜಿಸಲು ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹಗಳನ್ನು ನೀಡಲು ಉದ್ದೇಶಿಸಿದೆ.

ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಗಳಿದ ಜಿಲ್ಲೆಗಳಲ್ಲಿ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ಒದಗಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುವುದು – ಪ್ರತಿ ವರ್ಷ 10% ವಹಿವಾಟಿನ ಮೇಲೆ ಗರಿಷ್ಟ 5 ವರ್ಷಗಳಿಗೆ ಅಥವಾ ಶೇ. 20-30ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ.

  • ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ನೋಂದಣಿ ಶುಲ್ಕದಲ್ಲಿ ರಿಯಾಯಿತಿ.
  • ಭೂ ಪರಿವರ್ತನಾ ಶುಲ್ಕ ಮರುಪಾವತಿ.
  • ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ತೆರಿಗೆ ವಿನಾಯಿತಿ.
  • ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಸಹಾಯಧನ.
  • ಕುಶಲಕರ್ಮಿಗಳಿಗೆ ಸವಲತ್ತುಗಳು.
  • ಎಂ.ಎಸ್.ಎಂ.ಇ. ಕೈಗಾರಿಕೆಗಳಿಗೆ ತಂತ್ರಜ್ಞಾನ ನವೀಕರಣ ಸಾಲದ ಮೇಲೆ ಬಡ್ಡಿ ಸಹಾಯಧನ.
  • ಮಳೆ ನೀರು ಕೊಯ್ಲು ಹಾಗೂ ತ್ಯಾಜ್ಯ ನೀರು ಮರುಬಳಕೆಗೆ ಉತ್ತೇಜನ.
  • ಇಟಿಪಿ / ಸಿಇಟಿಪಿ ಉತ್ತೇಜನ.
  • ವಿಶೇಷ ವರ್ಗದ ಉದ್ಯಮಶೀಲರಿಗೆ ಅಂದರೆ ಎಸ್.ಸಿ/ಎಸ್.ಟಿ, ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ ಹೆಚ್ಚುವರಿ ಉತ್ತೇಜನ.
  • ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ.
  • ಆಂಕರ್ ಕೈಗಾರಿಕೆಗಳಿಗೆ ಬಂಡವಾಳ ಸಹಾಯಧನ – ಯಾವುದೇ ತಾಲ್ಲೂಕಿನಲ್ಲಿ ರೂ. 100 ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯಾಗಿರುವ ಘಟಕಗಳು ಇಲ್ಲದಿದ್ದ ಪಕ್ಷದಲ್ಲಿ.
  • ಮಧ್ಯಮ, ಬೃಹತ್, ಮೆಗಾ, ಅಲ್ಟ್ರಾ ಮೆಗಾ ಹಾಗೂ ಸೂಪರ್ ಮೆಗಾ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುವುದು – ಪ್ರತಿ ವರ್ಷ ಸುಮಾರು 1.75%-2.50% ವಹಿವಾಟಿನ ಮೇಲೆ ಗರಿಷ್ಟ 5-10 ವರ್ಷಗಳಿಗೆ ಅಥವಾ ಶೇ. 35-60ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ.
  • ಖಾಸಗಿ ಕೈಗಾರಿಕಾ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲು ರಿಯಾಯಿತಿ ಹಾಗೂ ಪ್ರೋತ್ಸಾಹ.
  • ಆರ್ & ಡಿ ಹಾಗೂ ಇಂಡಸ್ಟ್ರೀ-4.0ಗೆ ಸಹಾಯಧನ.

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *