ರಾಜ್ಯ

ಗ್ರಾಮ ಪಂಚಾಯತ ಚುನಾವಣೆ : ರಾಜ್ಯ ಚುನಾವಣಾ ಆಯೋಗದ ಸೂಚನೆಗಳು

ಧಾರವಾಡ prajakiran.com: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಗಳಿಗೆ ಆಕಾಂಕ್ಷಿಗಳಿಂದ ಅಭ್ಯರ್ಥಿ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದೆ.

ಈ ಹಂತದಲ್ಲಿ ಅಭ್ಯರ್ಥಿ ಹಾಗೂ ಮತದಾರರಿಗೆ ಹೆಚ್ಚುವರಿ ಮಾಹಿತಿ ಮತ್ತು ಜಾಗೃತಿಗಾಗಿ ರಾಜ್ಯ ಚುನಾವಣಾ ಆಯೋಗವು ಕೆಲವು ಸಾಮಾನ್ಯ ವಿಷಯಗಳ ಕುರಿತು ಸೂಚನೆಗಳನ್ನು ನೀಡಿದೆ ಎಂದು ಜಿಲ್ಲಾ ಚುನಾವಣಾದಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ.

ಅಭ್ಯರ್ಥಿಯೊಬ್ಬರು ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಬೇಕಾದರೆ ಅಭ್ಯರ್ಥಿಗೆ ನಾಮಪತ್ರ ಪರಿಶೀಲನಾ ದಿನಾಂಕದಂದು 21 ವರ್ಷ ವಯಸ್ಸಿನವರಾಗಿರಬೇಕು.

ಒಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು.
ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೂ ಹೆಚ್ಚುವರಿಯಾಗಿ ಸಲ್ಲಿಸುವ ಪ್ರತಿ ನಾಮ ಪತ್ರದೊಂದಿಗೆ ಬೇರೆ ಬೇರೆ ಅಫಿಡವಿಟ್, ಠೇವಣಿ ಹಣ, ಜಾತಿ ದೃಢೀಕರಣ ಪತ್ರ ನೀಡುವ ಅಗತ್ಯವಿಲ್ಲ.

ಅಭ್ಯರ್ಥಿಯೊಬ್ಬರು ಒಂದು ಸೆಟ್ ಅಫಿಡಮಿಟ್ ( 3 ಪ್ರತಿ ) ಠೇವಣಿ ಹಣ, ಜಾತಿ ದೃಢೀಕರಣ ಪತ್ರವೊಂದನ್ನು ನೀಡಿದರೆ ಸಾಕು.

ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು.
ಪ್ರತಿ ಕ್ಷೇತ್ರಕ್ಕೂ ಆತನು ಠೇವಣಿ ಇಡಬೇಕು
ಒಂದು ಕ್ಷೇತ್ರಕ್ಕೆ ಯಾವುದೇ ಇನಿಷಿಯಲ್ ಇಲ್ಲದೆ ಒಂದೇ ಹೆಸರಿನ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಇದ್ದಲ್ಲಿ ಅವರುಗಳೊಂದಿಗೆ ಚರ್ಚಿಸಿ ಅವರ ಹೆಸರುಗಳನ್ನು ಗುರುತಿಸಲು ಅಗತ್ಯ ಬದಲಾವಣೆಗಳನ್ನು ಸೂಚಿಸಲು ಕೋರಬಹುದು.

ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು ನಮೂದು ಮಾಡಲು ಲಿಖಿತವಾಗಿ ತಿಳಿಸಬೇಕು.
ಜಾತಿ ಪ್ರಮಾಣ ಪತ್ರವನ್ನು ನಾಮ ಪತ್ರದೊಂದಿಗೆ ಸಲ್ಲಿಸದಿದ್ದಲ್ಲಿ, ಅಭ್ಯರ್ಥಿಯು ನಾಮಪತ್ರ ಪರಿಶೀಲನೆಯ ವೇಳೆಯವರೆಗೆ ಹಾಜರು ಪಡಿಸಲು ಅವಕಾಶವಿದೆ.

ಆದರೆ ನಾಮಪತ್ರದಲ್ಲಿ ಅವರು ಇಂಥ ವರ್ಗಕ್ಕೆ ಸೇರಿದವರೆಂದು ಮೊದಲೆ ತಿಳಿಸಬೇಕಾಗಿರುತ್ತದೆ.
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಜಾತಿ ದೃಢೀಕರಣ ಪತ್ರ 5 ವರ್ಷ ಅವಧಿಯದಾಗಿರುತ್ತದೆ.

ಆದುದರಿಂದ ಚುನಾವಣೆಗೆ ತಗೆದುಕೊಳ್ಳಬಹುದು ಆದರೆ ಹಿಂದುಳಿದವ ವರ್ಗಗಳ ಜಾತಿ ಪ್ರಮಾಣಪತ್ರವನ್ನು ಪ್ರಸ್ತುತ ನಡೆಯುವ ಚುನಾವಣೆಗೆಂದು ತಹಶೀಲ್ದಾರರಿಂದ ಪಡೆದುಕೊಂಡಿರತಕ್ಕದ್ದು ಮತ್ತು ಅದರ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಉಮೇದುವಾರನ ಸಲ್ಲಿಸುವ ಅಫಿಡವಿಟ್‍ನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದಷ್ಟೆ ರಿಟರ್ನಿಂಗ್ ಅಧಿಕಾರಿಯ ಕರ್ತವ್ಯವಾಗಿದೆ. ಅಫಿಡವಿಟ್‍ನ್ನು ತೆಗೆದುಕೊಳ್ಳುವಾಗ ಅಫಿಡವಿಟ್‍ನ ಎಲ್ಲಾ ಕಾಲಮ್‍ಗಳು ಭರ್ತಿಯಾಗಿದೆಯೇ ಹಾಗೂ ಅಭ್ಯರ್ಥಿಯ ಸಹಿ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಲಾಗುತ್ತದೆ.

ಆಯೋಗವು ನೀಡಿರುವ ನಾಮನಿರ್ದೇಶನ ನಮೂನೆಗಳು ಮತ್ತು ಇತರೆ ನಮೂನೆಗಳು, ನಮೂನೆ ಪುಸ್ತಕಗಳು ಮುಂತಾದವುಗಳ ಮೇಲೆ ದರ ಮುದ್ರಣ ಆಗಿದ್ದಲ್ಲಿ ಆ ದರದಂತೆ ಶುಲ್ಕ ವಸೂಲಿ ಮಾಡಲಾಗುತ್ತದೆ.

ದರ ಮುದ್ರಣವಾಗಿಲ್ಲದ ನಮೂನೆಗಳಿಗೆ ಶುಲ್ಕ ವಸೂಲಿ ಮಾಡುವದಿಲ್ಲ.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ನಿಯಮ 18 ರ ಪ್ರಕಾರ ಅಭ್ಯರ್ಥಿ, ಅಥವಾ ಸೂಚಕ ಅಥವಾ ಅವನ ಏಜೆಂಟನ ಮುಖಾಂತರ ಮಾತ್ರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದು.

ಅಭ್ಯರ್ಥಿಯ ಹೊರತು ಸೂಚಕರು ಅಥವಾ ಚುನಾವಣಾ ಎಜೆಂಟರು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ತಂದಲ್ಲಿ ಅವರು ಬರವಣಿಗೆ ಮೂಲಕ ಅಧಿಕೃತಗೊಳಿಸಲ್ಪಟ್ಟಿದ್ದಾರೆಯೇ ಎಂಬುವುದನ್ನು ದೃಢೀಕರಿಸಿಕೊಂಡು ಹಾಗೂ ಚುನಾವಣಾಧಿಕಾರಿಗೆ ಸಮಾಧಾನಕರವಾಗಿದೆ ಎನಿಸಿದಲ್ಲಿ ಮಾತ್ರ ಅನುಮೋದಿಸಲಾಗುತ್ತದೆ.

ನಾಮಪತ್ರ ಪರಿಶೀಲನೆಗೆ ಎಲ್ಲಾ ಅಭ್ಯರ್ಥಿಗಳಿಗೆ ಒಂದೇ ಸಮಯ ನೀಡತಕ್ಕದ್ದು. ಆದರೆ ಒಂದರ ನಂತರ ಒಂದು ನಾಮಪತ್ರವನ್ನು ಪರಿಶೀಲನೆ ಮಾಡುವುದು.

ಕ್ಷೇತ್ರವೊಂದರ ಅಭ್ಯರ್ಥಿಗೆ ಆ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ನೋಡಲು ಅಥವಾ ಆಕ್ಷೇಪಣೆಗಳನ್ನು ಎತ್ತಲು ಅವಕಾಶವಿರುತ್ತದೆ.

ನೊಂದಾಯಿತ ಗುತ್ತಿಗೆದಾರರು ಈಗ ಗ್ರಾಮ ಪಂಚಾಯಿತಿಯ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಲ್ಲಿ ಅವರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ.

ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.

ಆದರೆ ಒಂದು ವೇಳೆ ಅಭ್ಯರ್ಥಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮತೆಗೆದುಕೊಳ್ಳಲಾಗುತ್ತದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ (ತಾತ್ಕಾಲಿಕ) ಬಿಲ್‍ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಯೋಜನೆಯಡಿ ನೇಮಕಗೊಂಡ ಅಡಿಗೆಯವರು ಸ್ಪರ್ಧಿಸಬಹುದು.

ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು, ಡಿಸ್‍ಮಿಸ್ ಆದವರು ಅಭ್ಯರ್ಥಿಯಾಗುವಂತಿಲ್ಲ. ಗ್ರಾಮ ಪಂಚಾಯಿತಿಗೆ ತುಂಬಬೇಕಾದ ಯಾವುದಾದರೂ ಬಾಕಿ ಉಳಿಸಿಕೊಂಡವರು ಅಭ್ಯರ್ಥಿಯಾಗುವಂತಿಲ್ಲ.

ಗಂಡ ಸರ್ಕಾರಿ ನೌಕರರಾಗಿದ್ದರೆ ಹೆಂಡತಿ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಳಾಗಿದ್ದಲ್ಲಿ ಗಂಡ ಸ್ಪರ್ಧಿಸಬಹುದು.

ಮಂಗಳಮುಖಿಯರು ಸ್ಪರ್ಧಿಸಬಹುದು. ಆದರೆ ನಾಮಪತ್ರ ನಮೂನೆಯಲ್ಲಿ ಅವರು ಮಹಿಳೆ ಎಂದು ಘೋಷಿಸಿಕೊಂಡಲ್ಲಿ ಅವರನ್ನು ಮಹಿಳೆ ಎಂದು ಇಲ್ಲವಾದಲ್ಲಿ ಅವರನ್ನು ಪುರುಷರೆಂದು ಭಾವಿಸತಕ್ಕದ್ದು.

ನಾಮಪತ್ರ ಪರಿಶೀಲನೆ ಬಗ್ಗೆ ಹಾಗೂ ಚಿಹ್ನೆ ಹಂಚಿಕೆ ಬಗ್ಗೆ ಸೂಚನೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಗ್ರಾಮಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಪ್ರಸ್ತುತದಲ್ಲಿರುವ ನಿಯಮಗಳನ್ನು ಹಾಗೂ ಕಾಲ ಕಾಲಕ್ಕೆ ರಾಜ್ಯ ಚುನಾವಣಾ ಆಯೋಗವು ನೀಡುವ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾದಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *