ರಾಜ್ಯ

ಬಿಜೆಪಿಯವರು ಮಹಾತ್ಮಗಾಂಧಿ ಕೊಂದವರ ವಂಶಸ್ಥರು : ಸಿಎಂ

*ರಾಮನಗರ ಜಿಲ್ಲೆಯ ಈ ದುಸ್ಥಿತಿಗೆ ಯಾರು ಕಾರಣ ಎನ್ನುವುದು ಜನತೆಗೆ ಅರ್ಥವಾಗಿದೆ*

*ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವನ್ನೇ ಆರಂಭಿಸುತ್ತೇವೆ. ಜನವರಿ ವೇಳೆಗೆ ವಿಶೇಷ ಅನುದಾನ*

*ಬಿಜೆಪಿಯವರು ಮಹಾತ್ಮಗಾಂಧಿಯನ್ನು ಕೊಂದವರ ವಂಶಸ್ಥರು: ಮುಖ್ಯಮಂತ್ರಿ ಸಿದ್ದರಾಮಯ್ಯ*

ರಾಮನಗರ ಸೆ 7: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತೂ ಭಾಗವಹಿಸದ ಬಿಜೆಪಿ ಪರಿವಾರ ಸ್ವಾತಂತ್ರ್ಯ ಸೇನಾನಿ ಮಹಾತ್ಮಗಾಂಧಿಯನ್ನು ಹತ್ಯೆಗೈದವರ ವಂಶಸ್ಥರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಭಾರತದ ಸೌಹಾರ್ದ ಮತ್ತು ಮಾನವೀಯ ಪರಂಪರೆಯನ್ನು ಮರು ಜೋಡಣೆ ಮಾಡುವ ಸಲುವಾಗಿ ನಡೆದ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ರಾಮನಗರದಲ್ಲಿ ಹಮ್ಮಿಕೊಂಡಿದ್ದ 5 km ಪಾದಯಾತ್ರೆಯಲ್ಲಿ ಸಹಸ್ರಾರು ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ ಪುಣ್ಯಾತ್ಮ ಮಹಾತ್ಮಗಾಂಧಿಯನ್ನು ಗುಂಡಿಟ್ಟು ಕೊಲ್ಲುವಂಥಾದ್ದು ಏನಾಗಿತ್ತು ?

ಗಾಂಧಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದೇ ತಪ್ಪಾಯ್ತಾ ? ಗಾಂಧಿ ಬ್ರಿಟಿಷರನ್ನು ವಿರೋಧಿಸಿದರು ಎನ್ನುವ ಕಾರಣಕ್ಕೆ ಗಾಂಧಿಯನ್ನು ಕೊಂದಿದ್ದಾ ? ಎಂದು ಬಿಜೆಪಿ ಪರಿವಾರವನ್ನು ಪ್ರಶ್ನಿಸಿದರು.

ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತೀಯರ ಭಾವನೆಗಳನ್ನು ಕೆರಳಿಸಿ, ಭಾರತೀಯ ಸಮಾಜವನ್ನು ವಿಭಜಿಸಿ, ಭಾರತೀಯರ ಹೃದಯಗಳನ್ನು ಒಡೆಯುವ ಮೂಲಕ ಎಷ್ಟಾಗುತ್ತೋ ಅಷ್ಟು ಮತ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಭಾರತೀಯರನ್ನು ವಿಭಜಿಸಿ, ಹಿಂಸಿಸಿ ಮತ ಗಳಿಸುವ ದುರ್ಗತಿ ಬಿಜೆಪಿ ಗೆ ಬಂದಿದೆ ಎಂದು ಟೀಕಿಸಿದರು.

ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ದುಡಿಯುವ ವರ್ಗಗಳು, ಶ್ರಮಿಕರು ಆತಂಕ ಅಭದ್ರತೆಯಲ್ಲಿ ಬದುಕುವಂಥಾ ಹೀನಾಯ ಸ್ಥಿತಿಗೆ ದೇಶವನ್ನು ದೂಡಿದ್ದರು. ಭಾರತವನ್ನು ಕಟ್ಟಿದ ಸಮುದಾಯಗಳನ್ನು ಛಿದ್ರಗೊಳಿಸುವುದನ್ನು ವಿರೋಧಿಸಿ ಬೆವರಿನ ಸಂಸ್ಕೃತಿಯ ಎಲ್ಲರನ್ನೂ ಒಟ್ಟುಗೂಡಿಸುವ ಸಲುವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಿತು ಎಂದರು.

*ರಾಮನಗರಕ್ಕೆ ವಿಶೇಷ ಅನುದಾನ*

ರಾಮನಗರ ಜಿಲ್ಲೆಯ ಇವತ್ತಿನ ದುಸ್ಥಿತಿಗೆ ಯಾರು ಕಾರಣ ? ಇಷ್ಟು ವರ್ಷ ರಾಮನಗರ ಜಿಲ್ಲೆ ಯಾರ ಹಿಡಿತದಲ್ಲಿತ್ತು ಎಂದು ಸಾರ್ವಜನಿಕರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಸಾರ್ವಜನಿಕರು ಜೆಡಿಎಸ್ ಎಂದು ಕೂಗಿದರು.

ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ. ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ಜಿಲ್ಲೆಯ ಜನ ಸಾಕ್ಷಿಯಾಗುತ್ತಾರೆ. ಸಂಸದ ಡಿ.ಕೆ.ಸುರೇಶ್ ಅವರು ಬಹಳ ಕೆಲಸ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾದರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ. ರಾಮನಗರದ ಅಭಿವೃದ್ಧಿ ಪರ್ವವನ್ನು ವೇಗಗೊಳಿಸುವ ಜವಾಬ್ದಾರಿ ನಮ್ಮ ಸರ್ಕಾರದ ಜವಾಬ್ದಾರಿ. ನಾವು ಮಾಡಿ ತೋರಿಸ್ತೀವಿ. ಜನವರಿ ವೇಳೆಗೆ ರಾಮನಗರಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಸಚಿವ ಮಂಕಾಳ ವೈದ್ಯ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಮತ್ತು ಪಕ್ಷದ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

*ಭಾಷಣದ ಹೈಲೈಟ್ಸ್*

*ಹಿಂದಿನ ಸರ್ಕಾರದ ಸಚಿವ ಅಶ್ವಥ್ ನಾರಾಯಣ್ ಜಿಲ್ಲೆಗೆ ಏಕೆ ಮೆಡಿಕಲ್ ಕಾಲೇಜು ಕೊಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತಗೊಂಡು ಹೋಗಿದ್ದು ಸಚಿವ ಸುಧಾಕರ್. ಇಬ್ಬರೂ ಬಿಜೆಪಿಯವರೇ. ಜಿಲ್ಲೆಗೆ ಅನ್ಯಾಯ ಆಗಿದ್ದು ಇದೇ ಬಿಜೆಪಿಯವರಿಂದ. ಇವರ ಜತೆ ಕೈ ಜೋಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ಇಬ್ಬರಿಗೂ ನೈತಿಕತೆ ಇಲ್ಲ*

*ರಾಮನಗರದಲ್ಲಿ, ಕನಕಪುರದಲ್ಲಿ ಎರಡೂ ಕಡೆ ಮೆಡಿಕಲ್ ಕಾಲೇಜು ಬೇಕು ಎಂದರೆ ಎರಡೂ ಕಡೆ ಮಾಡಲು ನಾವು ಸಿದ್ದ*

*ಬಾಯ್ತುಂಬ ಅಂಬಾನಿ-ಅದಾನಿ*

ನಾವು ಬಡವರ ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕುವ ಕಾರ್ಯಕ್ರಮಗಳನ್ನು ರೂಪಿಸಿದೆವು‌ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯವರು ಯಾರ ಜೇಬಿಗೆ ಹಣ ಹಾಕಿದರು ಗೊತ್ತಾ ಎಂದು ವೇದಿಕೆಯಿಂದಲೇ ಸಾರ್ವಜನಿಕರನ್ನು ಪ್ರಶ್ನಿಸಿದರು.
ಸಾರ್ವಜನಿಕರು ಅಂಬಾನಿ-ಅದಾನಿ ಎಂದು ಬಾಯ್ತುಂಬ ಕೂಗಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *