ರಾಜ್ಯ

ಧಾರವಾಡ ರೈತರ ಜಮೀನು ಅನ್ಯ ಉದ್ದೇಶಕ್ಕೆ ಬಳಕೆಗೆ ಅನ್ನದಾತರ ವಿರೋಧ

ಅನ್ಯ ಉದ್ದೇಶಕ್ಕೆ ಜಮೀನು ಬಳಕೆಗೆ ರೈತರ ವಿರೋಧ

ಧಾರವಾಡ prajakiran.com : ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಾಣದ ಸಲುವಾಗಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಅನ್ಯ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ತಾಲೂಕಿನ ನರೇಂದ್ರ ಗ್ರಾಮದ ರೈತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನರೇಂದ್ರ ಮತ್ತು ಮುಮ್ಮಿಗಟ್ಟಿ ಗ್ರಾಮದ ಹದ್ದಿನಲ್ಲಿ ಬರುವ ಜಮೀನುಗಳನ್ನು ೧೯೯೪-೯೫ ರಲ್ಲಿ ಕೆ.ಐ.ಎ.ಡಿ.ಬಿ.ಯು ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಾಣದ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಜಮೀನು ಸ್ವಾಧೀನದ ಸಂದರ್ಭದಲ್ಲಿ ಜಮೀನುಗಳ ಮಾಲಿಕರಾದ ರೈತರಿಗೆ ಪ್ರತಿ ಎಕರೆಗೆ ೮೫ ಸಾವಿರ ರೂಪಾಯಿಗಳನ್ನು ಮಾತ್ರ ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ.

ಆಗಿನ ಸಂದರ್ಭದಲ್ಲಿನ ಮಾರುಕಟ್ಟೆ ದರವನ್ನು ನ್ಯಾಯಯುತವಾಗಿ ಸರಕಾರ ಕೊಡಲಿಲ್ಲ. ಕೆ.ಐ.ಎ.ಡಿ.ಬಿ.ಯ ಇಂತಹ ಧೋರಣೆ ವಿರೋಧಿಸಿ ಕೆಲವು ರೈತರು ನ್ಯಾಯಾಲಯದ ಮೊರೆ ಕೂಡ ಹೋಗಿದ್ದು. ಆ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಅಲ್ಲದೇ, ಕೈಗಾರಿಕೆಯ ಬೆಳವಣಿಗೆಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಒದಗಿಸುವ ಭರವಸೆಯನ್ನು ಸಹ ಕೆ.ಐ.ಎ.ಡಿ.ಬಿ. ಅಧಿಕಾರಿಗಳು ನೀಡಿದ್ದರು.

ಆದರೆ. ಇದುವರೆಗೂ ಯಾವುದೇ ರೈತ ಕುಟುಂಬಕ್ಕೆ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸದೇ ಅನ್ಯಾಯ ಮಾಡಲಾಗಿದೆ.

ಆದಾಗ್ಯೂ ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ ಆಗಲಿ ಎಂದು ಹಲವಾರು ರೈತರು ತಮ್ಮ ಪೂರ್ವಜರಿಂದ ಬಂದ ಜಮೀನುಗಳನ್ನು ಕೊಟ್ಟು ತ್ಯಾಗ ಮಾಡಿದ್ದಾರೆ.

ಆದರೆ, ಇತ್ತೀಚೆಗೆ ಕೆ.ಐ.ಎ.ಡಿ.ಬಿ.ಯು ವಶಪಡಿಸಿಕೊಂಡ ಜಮೀನುಗಳನ್ನು ಸ್ವಾಧೀನದ ಸಂದರ್ಭದಲ್ಲಿ ನಮಗೆ ತಿಳಿಸಿದ್ದ ಉದ್ದೇಶ ಬಿಟ್ಟು ಅನ್ಯ ಉದ್ದೇಶಗಳಿಗೆ ಜಮೀನುಗಳನ್ನು ಕೊಡುತ್ತಿರುವುದು ಮಾಧ್ಯಮಗಳ ಮೂಲಕ ನಮಗೆ ಗೊತ್ತಾಗಿದೆ.

ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ೨೪೧ ಎಕರೆ ಜಮೀನಿನ ಪೈಕಿ ೧೩೦ ಎಕರೆ ಜಮೀನನ್ನು ಪ್ರಭಾವಿಗಳ ಐಷಾರಾಮಿ ಘಟಕಗಳಿಗೆ ಕೊಡುತ್ತಿರುವ ವಿಷಯ ಪತ್ರಿಕೆಗಳಲ್ಲಿ ವರದಿಯಾಗಿದೆ.

ಇದೇ ೧೩೦ ಎಕರೆ ಪೈಕಿ ಇತ್ತೀಚೆಗೆ ಖಾಸಗಿ ಒಡೆತನದ ಪ್ರಕಲ್ಪ ಹೊಟೇಲ್, ಪ್ರಕಲ್ಪ ಆಸ್ಪತ್ರೆ ಮತ್ತು ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಗಳಿಗೆ ಸುಮಾರು ೩೪ ಎಕರೆ ಪ್ರದೇಶವನ್ನು ಹಂಚಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಿದರೆ ಅನೇಕರಿಗೆ ಅನುಕೂಲ ಆಗುತ್ತಿತ್ತು. ಅದರೆ, ಜಮೀನು ಸ್ವ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ನಮಗೆ ತಿಳಿಸಿದ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಜಮೀನು ಪರಭಾರೆ ಮಾಡುತ್ತಿರುವುದು ಖಂಡನೀಯ.

ಸರಕಾರ/ ಕೆ.ಐ.ಎ.ಡಿ.ಬಿ.ಯ ಇಂತಹ ನಡೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಜಮೀನು ಸ್ವಾಧೀನ ಸಂದರ್ಭದಲ್ಲಿ ತಿಳಿಸಿದಂತೆ ಸದರಿ ಜಮೀನನಲ್ಲಿ ವಸತಿ ಬಡಾವಣೆ ನಿರ್ಮಿಸಬೇಕು.

ಅದರ ಹೊರತು ಅನ್ಯ ಉದ್ದೇಶಕ್ಕೆ ಬಳಸಸುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಒಂದು ವೇಳೆ ಬಡಾವಣೆ ನಿರ್ಮಿಸದಿದ್ದರೆ ಸ್ವ್ವಾಧೀನಪಡಿಸಿಕೊಂಡ ಜಮೀನುಗಳನ್ನು ರೈತರಿಗೆ ಮರಳಿ ಕೊಡಬೇಕು.

ಸರಕಾರ ಈ ಜಮೀನುಗಳಿಗೆ ಕೊಟ್ಟಿರುವ ಪರಿಹಾರದ ಮೊತ್ತವನ್ನು ಬಡ್ಡಿ ಸಮೇತ ಮರಳಿ ಭರ್ತಿ ಮಾಡಲಾಗುವುದು.ನಮ್ಮ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಎಲ್ಲ ರೈತರು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಯಿತು.

ಪರಪ್ಪ ವೆಂಕಟಾಪೂರ, ಪಿ.ವಿ.ಲಾಳಸಂಗಿ, ಈಶ್ವರ ಗಾಣಿಗೇರ, ಬಸವರಾಜ ವೆಂಕಟಾಪೂರ, ಮಹಾದೇವಪ್ಪ ಛಬ್ಬಿ, ಮಹಾವೀರ ಹೊಸಮನಿ, ಈರಪ್ಪ ತೇಗೂರ, ಬಸವರಾಜ ಹುಂಬೇರಿ, ಚಂದ್ರಶೇಖರ ಗಾಣಿಗೇರ, ರಾಮಣ್ಣ ವಾಲೀಕಾರ, ಸಂಗಪ್ಪ ಆಯಟ್ಟಿ, ಕರೆಪ್ಪ ವಾಲೀಕಾರ, ಮಲ್ಲವ್ವ ತಳವಾರ, ಅಶೋಕ ಹೊಸಮನಿ, ಭೀಮಪ್ಪ ಛಬ್ಬಿ, ಮಡಿವಾಳಪ್ಪ ಗಾಳಿ, ಮುದಕಪ್ಪ ಪಮ್ಮಣ್ಣವರ, ಕರೆವ್ವ ತಳವಾರ, ಬಸವರಾಜ ಗುಮ್ಮಗೋಳ, ಪುಂಡಲಿಕ ಹಡಪದ ಮತ್ತಿತರರು ಮನವಿ ಸಲ್ಲಿಸಿದರು.

ಇದಕ್ಕೂ ಮುಂಚೆ ರೈತರು ಜಮೀನಿನಲ್ಲಿ ಸಭೆ ನಡೆಸಿ,ಸರಕಾರದ ಧೋರಣೆಯನ್ನು ಖಂಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *