ರಾಜ್ಯ

ಮುಂದಿನ ಬಜೆಟ್ ನಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮ : ಸಿಎಂ

ಬೆಳಗಾವಿ ಪ್ರಜಾಕಿರಣ.ಕಾಮ್ ಡಿ. 28: ಮುಂದಿನ ಆಯವ್ಯಯದಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶ್ರೀ ಶಿವಯೋಗೇಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ರಜತ ಮಹೋತ್ಸವ ಹಾಗೂ ಯಾತ್ರಿ ನಿವಾಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ರೈತನ ಬದುಕು ಅನಿಶ್ಚಿತತೆ ಯಿಂದ ಕೂಡಿದೆ. ಅವನ ಬದುಕಿಗೆ ನಿಶ್ಚಿತ ತೆ ತಂದುಕೊಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಬಡ್ಡಿ ರಹಿತ ಸಾಲ, ಯಶಸ್ವಿನಿ ಯೋಜನೆ ಮರುಪ್ರಾರಂಭವಾಗಿದೆ.

ರೈತ ಶಕ್ತಿ, ಹಾಲು ಉತ್ಪಾದಕರಿಗೆ ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ. 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಇಷ್ಟೆಲ್ಲಾ ಇದ್ದರೂ ಅವರು ಸಂಕಷ್ಟದಲ್ಲಿದ್ದಾರೆ.

ರೈತರ ಮಕ್ಕಳ ವಿದ್ಯಾಭ್ಯಾಸದ ಭಾರವನ್ನು ಕಡಿಮೆ ಮಾಡಲು ನಾನು ಮುಖ್ಯಮಂತ್ರಿಯಾದ ಕೂಡಲೇ ರೈತ ವಿದ್ಯಾನಿಧಿ ಯೋಜನೆಯನ್ನು ಘೋಷಿಸಲಾಯಿತು ಎಂದರು.

*ಉತ್ತರ ಕರ್ನಾಟಕದ 5700 ಕೋಟಿ ರೂ.ಗಳ ಯೋಜನೆಗಳಿಗೆ ಮಂಜೂರಾತಿ*
ರೈತನ ಹೊಲಕ್ಕೆ ನೀರು ಕೊಡುವ ಅಗತ್ಯವಿದೆ. ಅದಕ್ಕಾಗಿ ನೀರಾವರಿಗೆ ಅತಿ ಹೆಚ್ಚು ಒತ್ತು ನೀಡಲಾಗಿದೆ.

ಮೊನ್ನೆ ನಡೆದ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದ 5700 ಕೋಟಿ ರೂ.ಗಳ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಅದರಲ್ಲಿ ಈ ಭಾಗದಲ್ಲಿ ಚನ್ನ ವೃಷಬೇಂದ್ರ ಏತ ನೀರಾವರಿಗೆ 520 ಕೋಟಿ ರೂ.ಗಳ ಅನುಮೋದನೆಯಾಗಿದ್ದು, 31 ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಇದರಲ್ಲಿ ಇಂಚಲವೂ ಸೇರಿದೆ. ಸ್ವಾಮೀಜಿಗಳ ಬೇಡಿಕೆಯೂ ಆಗಿತ್ತು ಎಂದರು.

*ಏತ ನೀರಾವರಿ ಯೋಜನೆಗಳು*
ಸತ್ತಿಗೆರೆ ಏತ ನೀರಾವರಿ ಯೋಜನೆ 530 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಸವದತ್ತಿ, ಕಿತ್ತೂರು , ಬೈಲಹೊಂಗಲ ಕ್ಕೆ ಯಜುರ್ವಿ ಕುಡಿಯುವ ನೀರಿನ ಯೋಜನೆ 386 ಕೋಟಿ ರೂ, ದೇವಗಾವ್ ಕುಡಿ ಯುವ ನೀರಿನ ಯೋಜನೆ, ಕಿತ್ತೂರು ಹಾಗೂ ಖಾನಾಪುರಕ್ಕೆ ಅನುಕೂಲವಾಗಲಿದೆ.

ಕಿತ್ತೂರು- ಖಾನಾಪುರ, ಕಿತ್ತೂರು- ಬೈಲಹೊಂಗಲ, ಮತ್ತು ಸವದತ್ತಿ ತಾಲ್ಲೂಕುಗಳಿಗೆ ಅನುಕೂಲ ವಾಗುವ ಯೋಜನೆ ಇದು. ಈ ಮೊತ್ತವನ್ನು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸುವ ಜವಾಬ್ದಾರಿ ಶಾಸಕರದ್ದು ಎಂದರು.

ಒಂದು ನಯಾ ಪೈಸೆಯೂ ಸೋರಿಹೋಗಬಾರದು. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ರೈತರ ಹೊಲಕ್ಕೆ ನೀರು ಮುಟ್ಟಬೇಕು ಎಂದರು.

*ಕರ್ನಾಟಕದಲ್ಲಿ ಮಠಗಳು ಶೈಕ್ಷಣಿಕ ಕ್ರಾಂತಿಯನ್ನು ಮಾಡಿವೆ*
ಶಾಲೆಯಿಂದ ಪ್ರಾರಂಭವಾಗಿ ಆಯುರ್ವೇದ ವೈದ್ಯಕೀಯ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆ ಬೆಳೆದಿದೆ.

ಸಾವಿರಾರು ವಿದ್ಯಾರ್ಥಿ ಗಳಿಗೆ ದಾರಿದೀಪ ವಾಗಿ ,ಸಮಾಜಕ್ಕೆ ಕಲ್ಯಾಣ, ಶೈಕ್ಷಣಿಕ ಅಭಿವೃದ್ಧಿಯ ಸೇವೆ ಅನನ್ಯ. ಕರ್ನಾಟಕದಲ್ಲಿ ಉತ್ತರದ ನಿಪ್ಪಾಣಿಯಿಂದ ಹಿಡಿದು ದಕ್ಷಿಣದ ಕೊಳ್ಳೇಗಾಲದವರೆಗೂ ಮಠಗಳ ಕೆಲಸ, ಅನ್ನ, ವಿದ್ಯಾ ದಾಸೋಹವನ್ನು ನೂರಾರು ವರ್ಷಗಳ ಕಾಲ ಮಾಡಿಕೊಂಡು ಬಂದಿವೆ.

ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಠಗಳು ಮಾಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಗ್ರಾಮ ಗಳಲ್ಲಿ ಶಾಲಾ ಕಾಲೇಜುಗಳನ್ನು ತೆಗೆಯುವುದು ಪುಣ್ಯದ ಕಾರ್ಯ.

ಗ್ರಾಮೀಣ ಪ್ರದೇಶದಲ್ಲಿ ಬಡತನವಿದೆ. ರೈತರ ಮಕ್ಕಳು ಪೂರ್ಣ ಪ್ರಮಾಣದಲ್ಲಿ ವಿದ್ಯಾಭ್ಯಾಸ ಮಾಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಒಟ್ಟು ನೀಡಿ ಶಿಕ್ಷಣ ಸಂಸ್ಥೆಗಳು ತೆರೆದಿರುವುದರಿಂದ ಊರಿನಲ್ಲಿಯೇ ಕಲಿಯುವಂತಾಗಿದೆ.

ಅನ್ನ, ವಿದ್ಯೆ ನೀಡಿ, ಮನುಷ್ಯನನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆ ನೀಡಿವೆ. ಇಂಚಲ ಮಠ ಮಾಡಿರುವ ಕಾರ್ಯ ಅತ್ಯಂತ ಅನುಕರಣೀಯ ಎಂದರು.

*ದುಡಿಮೆಯೇ ದೇವರು*
ದುಡಿಮೆಯೇ ದೇವರು ಎಂದು ನಂಬಿರುವ ಸರ್ಕಾರ ನಮ್ಮದು. ಅದಕ್ಕಾಗಿ ಈ ಯೋಜನೆಗಳು. ಮಂಜೂರಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆ ಸುಧಾರಿಸಿದರೆ ಕರ್ನಾಟಕದ ಆರ್ಥಿಕತೆ ಸುಧಾರಣೆ ಆಗುತ್ತದೆ. ನಾಡಿನ ಜನತೆ ಶ್ರೀಮಂತರಾಗಬೇಕು.

ಸ್ತ್ರೀ ಸಾಮರ್ಥ್ಯ ಯೋಜನೆ , ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಕಾಯಕ ಯೋಜನೆಗಳನ್ನು ಜಾರಿಗೆ ತಂದು, ದುಡಿಯುವ ಜನರ ನೆರವಿಗೆ ನಿಂತು ಸಬಲೀಕರಣ ಮಾಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊಡ್ಡ ಕ್ರಾಂತಿಯ ನ್ನು ಮಾಡಬೇಕೆಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.

ಉತ್ತರ ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ತರಲಾಗುವುದು. ಸಮಾಜದ ಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

*ಭಕ್ತನಾಗಿ ಬಂದಿದ್ದೇನೆ*
ಕಾರ್ಯಕ್ರಮದಲ್ಲಿ ಭಕ್ತನಾಗಿ ಭಾಗವಹಿಸಿದ್ದು, ಜಗದ್ಗುರುಗಳು ಶ್ರಮ ವಹಿಸಿ ಕಟ್ಟಿದ ಸಂಸ್ಥೆ ಎಲ್ಲರಿಗೂ ಪ್ರೇರಣೆ. ಉಪಕಾರ , ಪರೋಪಕಾರಗಳನ್ನು ನಿರಂತರವಾಗಿ ಮಾಡಿಕೊಂಡು ಬಂದವರು ಎಂದರು.

ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶ್ರೀ ಶಿವಾನಂದ ಭಾರತಿ ಸ್ವಾಮೀಜಿ , ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಶಾಸಕರಾದ ಮಹಾಂತೇಶ್ ದೊಡ್ಡ ಗೌಡರ್, ದುರ್ಯೋಧನ ಐಹೊಳೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದೆ ಮಂಗಳಾ ಅಂಗಡಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *