ರಾಜ್ಯ

ಜಿಲ್ಲೆಯ 7 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ;

ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ ಪ್ರಜಾಕಿರಣ.ಕಾಮ್ :  ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿ, ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ಕಚೇರಿ ಸಭಾಂಗಣದಲ್ಲಿ ಸುದ್ಧಿಗೊಷ್ಠಿ ಜರುಗಿಸಿ, ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಪ್ರೀಲ್ 13 ರಂದು ಜಿಲ್ಲೆಯ ಏಳು ವಿಧಾನ ಸಭಾ ಮತ ಕ್ಷೇತ್ರಗಳಿಗೆ ಚುನಾವಣೆ ಜರುಗಿಸಲು ಅಧಿಸೂಚನೆ ಹೊರಡಿಸಲಾಗುತ್ತದೆ. ಎಪ್ರೀಲ್ 20ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಯು ಎಪ್ರೀಲ್ 21 ರಂದು ನಡೆಯಲಿದೆ. ಎಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ.

ಮತ್ತು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟದಲ್ಲಿ ಮತ ಏಣಿಕೆ ಜರುಗಲಿದೆ. ಒಟ್ಟಾರೆ ಮೇ 15 ರಂದು ಎಲ್ಲ ಚುನಾವಣಾ ಪ್ರಕ್ರೀಯೆಗಳು ಮುಕ್ತಾಯವಾಗಲಿವೆ ಎಂದು ಅವರು ಹೇಳಿದರು.

*ಮತದಾರರ ಸಂಖ್ಯೆ:* ಜಿಲ್ಲೆಯಲ್ಲಿ ಏಳು ವಿಧಾನಸಭಾ ಮತಕ್ಷೇತ್ರಗಳಿದ್ದು, ಒಟ್ಟು ಪುರುಷ 7,57,522, ಮಹಿಳಾ 7,49,807 ಹಾಗೂ ಇತರೆ 85 ಸೇರಿದಂತೆ ಒಟ್ಟು 15,07,414 ಮತದಾರರಿದ್ದಾರೆ.

*ನವಲಗುಂದ ವಿಧಾನಸಭಾ ಮತ ಕ್ಷೇತ್ರ-69 :* ಪುರುಷರು-1,03,964, ಮಹಿಳೆಯರು-1,01,407, ಇತರೆ-6. ಒಟ್ಟು ಮತದಾರರು- 2,05,377

*ಕುಂದಗೋಳ ವಿಧಾನಸಭಾ ಮತ ಕ್ಷೇತ್ರ-70:* ಪುರುಷರು – 95,015. ಮಹಿಳೆಯರು–89,927. ಇತರೆ-7. ಒಟ್ಟು ಮತದಾರರು-1,84,949

*ಧಾರವಾಡ ವಿಧಾನಸಭಾ ಮತ ಕ್ಷೇತ್ರ-71:* ಪುರುಷರು-1,06,190. ಮಹಿಳೆಯರು-1,05,142. ಇತರೆ-9. ಒಟ್ಟು ಮತದಾರರು– 2,11,341

*ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತ ಕ್ಷೇತ್ರ-72:* ಪುರುಷರು-1,03,226. ಮಹಿಳೆಯರು-1,04,199. ಇತರೆ-14. ಒಟ್ಟು ಮತದಾರರು-2,07,439

*ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತ ಕ್ಷೇತ್ರ 73:* ಪುರುಷರು-1,21,872. ಮಹಿಳೆಯರು-1,23,952. ಇತರೆ – 38. ಒಟ್ಟು ಮತದಾರರು–2,45,862

*ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತ ಕ್ಷೇತ್ರ-74:* ಪುರುಷರು-1,28,085. ಮಹಿಳೆಯರು-1,31,736. ಇತರೆ-4. ಒಟ್ಟು ಮತದಾರರು-2,59,825

*ಕಲಘಟಗಿ ವಿಧಾನಸಭಾ ಮತ ಕ್ಷೇತ್ರ-75:* ಪುರುಷರು-99170. ಮಹಿಳೆಯರು-93444. ಇತರೆ-7. ಒಟ್ಟು ಮತದಾರರು -1,92,621 ಇದ್ದಾರೆ.

*ಮತಗಟ್ಟೆಗಳ ಸಂಖ್ಯೆ:* ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ 944, ಗ್ರಾಮೀಣ ಪ್ರದೇಶಲ್ಲಿ 692 ಸೇರಿದಂತೆ ಒಟ್ಟು 1,636 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇವುಗಳ ಪೈಕಿ 216 ಸೂಕ್ಷ್ಮ ಮತಗಟೆಗಳನ್ನು ಮತ್ತು 162 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನದ ದಿನದಂದು ವಿಡಿಯೋಗ್ರಾಫಿ, ವೆಬ್‍ಕ್ಯಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯಮಾನುಸಾರ ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

*ಯುವ ಮತದಾರರು:* ಜಿಲ್ಲೆಯಲ್ಲಿ 2018ರ ವಿಧಾನ ಸಭಾ ಚುನಾವಣೆ ಸಮಯದಲ್ಲಿ 16,902 ಯುವ ಮತದಾರರಿದ್ದರು. ಪ್ರಸ್ತುತ 2023ರ ವಿಧಾನ ಸಭಾ ಚುನಾವಣೆಗೆ ಒಟ್ಟು 26,426 ಯುವ ಮತದಾರರಿದ್ದಾರೆ. 21,036 ವಿಶೇಷಚೇತನ ಮತದಾರರಿದ್ದಾರೆ. ಮತ್ತು 80 ವರ್ಷ ಹಾಗೂ ಮೇಲ್ಪಟ್ಟ ಸುಮಾರು 32,301 ಹಿರಿಯ ಮತದಾರರಿದ್ದಾರೆ.

*ಪ್ರಚಾರ ಸಾಮಗ್ರಿಗಳ ತೆರವು:* ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗುತ್ತಿದೆ.

ಇವತ್ತಿನ ವರೆಗೆ 6,174 ಗೊಡೆ ಬರಹ, 9,145 ಪೋಸ್ಟರ್‍ಗಳು, 3,231 ಬ್ಯಾನರಗಳು ಹಾಗೂ 2,563 ಇತರೆ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಚುನಾವಣಾ ಆಯೋಗದಿಂದ ತೆರವುಗೊಳ್ಳಿಸಲಾಗಿದೆ ಮತ್ತು ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಸಾರ್ವಜನಿಕ ಸ್ಥಳ ಅಂದಗೆಡಿಸಿದ್ದ ಸುಮಾರು 10,188 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳ್ಳಿಸಲಾಗಿದೆ.

ಚುನಾವಣಾ ನೀತಿ ಸಂಹಿತೆಯು ಇಂದಿನಿಂದ ಜಾರಿಯಾಗಿದ್ದು, ಅನುಮತಿ ಇಲ್ಲದೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ನಿಯಮ ಮೀರಿದವರ ವಿರುದ್ಧ ಭಾರತ ಚುನಾವಾಣಾ ಆಯೋಗದ ನಿರ್ದೇಶನದಂತೆ ಮತ್ತು ಜಾರಿಯಲ್ಲಿರುವ ವಿವಿಧ ಕಾನೂನುಗಳಡಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಅವರು ಹೇಳಿದರು.

*ಆಯುಧಗಳ ಠೇವಣಿಗೆ ಸೂಚನೆ:* ಜಿಲ್ಲೆಯಲ್ಲಿ 1,880 ಪರವಾಣಿಗೆ ಹೊಂದಿರುವ ಆಯುಧಗಳಿವೆ. ಈ ಆಯುಧಗಳನ್ನು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಒಳಪಡಿಸಬೇಕು ಮತ್ತು ಚುನಾವಣಾ ಪ್ರಕ್ರೀಯೇ ಸಂಪೂರ್ಣವಾಗಿ ಮುಗಿಯುವವರೆಗೆ ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

*ಹಣ, ವಸ್ತು, ಇತರೆ ಸಾಮಗ್ರಿಗಳ ವಶ:* ಸೂಕ್ತ ದಾಖಲೆ ಇಲ್ಲದೆ ಹೊಂದಿದ್ದ ಮತ್ತು ಚುನಾವಣಾ ಕಾರಣಕ್ಕೆ ಬಳಕೆಯಾಗುವ ಅನುಮಾನದಿಂದ ಕೆಲವು ಕಡೆ ಹಣ, ವಸ್ತು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 80,32,070 ರೂ.ಗಳ ಮೊತ್ತದ ಹಣ, ಸುಮಾರು 5,33,358 ರೂ.ಗಳ ಮೊತ್ತದ 1,061.75 ಲೀಟರ್ ಮಧ್ಯ, ಸುಮಾರು 78,100 ರೂ.ಗಳ ಮೊತ್ತದ 4.49 ಕೆ.ಜಿ ಡ್ರಗ್ಸ್, ರೂ.1,00,000 ಮೊತ್ತದ ಉಡುಗೊರೆಗಳು ಸುಮಾರು 25,12,400 ರೂ.ಗಳ ಮೊತ್ತದ ಸೀರೆಗಳು, ಸುಮಾರು 7,23,425 ರೂ.ಗಳ ಮೊತ್ತದ 4,185 ಕೆಜಿ ಹಾಲು ಮತ್ತು ಸುಮಾರು 6,15,000 ಮೊತ್ತದ 190 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

*ಏಳು ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ:*

*ನವಲಗುಂದ ವಿಧಾನಸಭಾ ಮತಕ್ಷೇತ್ರ-69:* ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ನವಲಗುಂದ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ವಿಶೇಷ ಭೂಸ್ವಾಧಿನ ಅಧಿಕಾರಿ ಎಸ್.ಎಸ್.ಸಂಪಗಾಂವಿ (ಮೋ. 9945810792) ಚುಣಾವಣಾಧಿಕಾರಿಯಾಗಿದ್ದಾರೆ.

*ಕುಂದಗೋಳ ವಿಧಾನಸಭಾ ಮತಕ್ಷೇತ್ರ-70:* ಕುಂದಗೋಳ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗಾನಾಯ್ಕ (ಮೋ. 9480864001) ಚುಣಾವಣಾಧಿಕಾರಿಯಾಗಿದ್ದಾರೆ.

*ಧಾರವಾಡ ವಿಧಾನಸಭಾ ಮತಕ್ಷೇತ್ರ-71:* ಧಾರವಾಡ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಉಪವಿಭಾಗಾಧಿಕಾರಿ ಅಶೋಕ ತೇಲಿ (ಮೋ. 8123295366) ಚುಣಾವಣಾಧಿಕಾರಿಯಾಗಿದ್ದಾರೆ.

*ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ-72:* ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ವಿನೋದ ಹೆಗ್ಗಳಗಿ (ಮೊ.ನಂ:9480415704) ಚುಣಾವಣಾಧಿಕಾರಿಯಾಗಿದ್ದಾರೆ.

*ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ-73:* ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ತೆರೆಯಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ.ಬಿ., (ಮೊ.ನಂ:9731008189) ಚುಣಾವಣಾಧಿಕಾರಿಯಾಗಿದ್ದಾರೆ.

*ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ-74:* ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯಲ್ಲಿ ತೆರೆಯಲಾಗಿದ್ದು, ಎನ್‍ಡಬ್ಲೂಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಭರತ ಎಸ್. (ಮೊ.ನಂ:7760991999) ಚುಣಾವಣಾಧಿಕಾರಿಯಾಗಿದ್ದಾರೆ.

*ಕಲಘಟಗಿ ವಿಧಾನಸಭಾ ಮತಕ್ಷೇತ್ರ-75:* ಕಲಘಟಗಿ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಶ್ರವಣ ನಾಯ್ಕ (ಮೊ.ನಂ:9606457902) ಚುಣಾವಣಾಧಿಕಾರಿಯಾಗಿದ್ದಾರೆ.

ಚುನಾವಣಾಧಿಕಾರಿಗಳು ವಿಧಾನ ಸಭಾ ಮತಕ್ಷೆತ್ರ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾಣಿಗೆ ಮುಂತಾದವುಗಳ ಅರ್ಜಿಗಳನ್ನು ಸು-ವಿಧಾ ತಂತ್ರಾಂಶದ ಮೂಲಕ ಸಲ್ಲಿಸಿದ್ದಲ್ಲಿ ಪರವಾನಿಗೆ ನೀಡುವ ಕುರಿತು ಕ್ರಮವಹಿಸಬೇಕು.

ಮತ್ತು ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕುರಿತು ಅರ್ಜಿಗಳಿದ್ದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

*ಮಾದರಿ ನೀತಿ ಸಂಹಿತೆ ಕುರಿತು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು:*

•ಸಾರ್ವಜನಿಕ ಅನುದಾನದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕುರಿತು ಹಾಗೂ ವಿವಿಧ ಚಟುವಟಿಕೆಗಳನ್ನು ಕೈಗೊಂಡಿರುವ ಕುರಿತು ಅಳವಡಿಸಲಾದ ಜಾಹೀರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವುದು.
•ಕಚೇರಿ ವೆಬ್‍ಸೈಟ್‍ನಲ್ಲಿನ ಎಲ್ಲ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ಮತ್ತು ರಾಜಕೀಯ ಕಾರ್ಯ ಚಟುವಟಿಕೆ ತೋರುವಂತಹ ಜಾಹೀರಾತು, ಮಾಹಿತಿಯನ್ನು ತೆಗೆದು ಹಾಕಲು ತಕ್ಷಣವೇ ತೆಗೆದು ಹಾಕುವುದು.
•ಈಗಾಗಲೇ ನಿಯೋಜನೆಗೊಂಡಿರುವ ಮಾದರಿ ನೀತಿ ಸಂಹಿತೆ ಹಾಗೂ ವೆಚ್ಚ ಪರಿಶೀಲನೆಗೆ ಸಂಬಂಧಿಸಿದಂತೆ ರಚಿಸಲಾದ ವಿವಿಧ ತಂಡಗಳು ತಕ್ಷಣವೇ ಕಾರ್ಯ ಪ್ರಾರಂಭಿಸಲು ಸೂಚಿಸಲಾಗಿದೆ. ಎಸ್.ಎಸ್.ಟಿ-24 ಚೆಕ್‍ಪೋಸ್ಟ್‍ಗಳು, ಎಫ್.ಎಸ್.ಟಿ-21 ತಂಡಗಳು, ವಿ.ಎಸ್.ಟಿ-21 ತಂಡಗಳು ವಿ.ವಿ.ಟಿ-21 ತಂಡಗಳು, ಎ.ಟಿ-7 ತಂಡಗಳನ್ನು ರಚಿಸಲಾಗಿದೆ.

•ಸರ್ಕಾರಿ, ಸಾರ್ವಜನಿಕ, ಖಾಸಗಿ ಸ್ವತ್ತುಗಳ ಮೇಲೆ ರಾಜಕೀಯ ಪಕ್ಷಗಳ ಪ್ರಚಾರ ಕುರಿತಾದ ಪೋಸ್ಟರ್ ಗಳನ್ನು ತಕ್ಷಣವೇ ತೆರವುಗೊಳಿಸುವುದು.
•ಎಲ್ಲ ನಾಮನಿರ್ದೇಶಿತ ಮತ್ತು ರಾಜಕೀಯ ವ್ಯಕ್ತಿಗಳಿಗೆ ನೀಡಿದ ವಾಹನಗಳನ್ನು ತಕ್ಷಣ ಹಿಂಪಡೆಯುವುದು.

•ಚುನಾವಣಾ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ಸ್ವೀಕೃತವಾಗುವ ದೂರುಗಳ ನಿರ್ವಹಣೆ ಕುರಿತು ವಿಧಾನಸಭಾ ಕ್ಷೇತ್ರವಾರು 24*7 ಮಾದರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

•ಸಹಾಯವಾಣಿ 1950 ಮತ್ತು ಸಿ-ವಿಜಿಲ್ ತಂತ್ರಾಂಶದ ಮುಖಾಂತರ ಚುನಾವಣಾ ಸಂಬಂಧಿ ದೂರು ಸಲ್ಲಿಸಿದಲ್ಲಿ ತಕ್ಷಣವೇ ಕ್ರಮವಹಿಸಲಾಗುವುದು.

•ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರನ್ನು ಎಂ.ಸಿ.ಎಂ.ಸಿ ತಂಡದ ಕಾರ್ಯವನ್ನು ನಿರ್ವಹಿಸಲು ನೇಮಿಸಿದ್ದು, ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.

ಈಗಾಗಲೇ ನಿಯೋಜನೆಗೊಂಡಿರುವ ಕಂಟ್ರೋಲ್ ರೂಂ. ತಂಡದವರು ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.

•ರಾಜಕೀಯ ಉದ್ದೇಶಕ್ಕಾಗಿ ಧಾರ್ಮಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

*ಮತದಾನಯಂತ್ರಗಳ ವಿವರ:* ಜಿಲ್ಲೆಗೆ ಒಟ್ಟು 2,310 ಕಂಟ್ರೋಲ್ ಯೂನಿಟ್ (ಸಿ.ಯು), 3,295 ಬ್ಯಾಲೆಟ್ ಯೂನಿಟ್ (ಬಿ.ಯು) ಮತ್ತು 2,497 ವಿವಿ ಪ್ಯಾಟ್ ವಿದ್ಯುನ್ಮಾ ಮತಯಂತ್ರಗಳು ಹಂಚಿಗೆಯಾಗಿವೆ.

*ಪಿಆರ್‍ಓ, ಎಪಿಆರ್‍ಓ ನೇಮಕ:* ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಚುನಾವಣಾ ಕರ್ತವ್ಯ ನಿರ್ವಾಹಿಸಲು 1,963 ಪಿಆರ್‍ಓ, 1,963 ಎಪಿಆರ್‍ಓ, 3,926 ಪಿಓಗಳು ಹಾಗೂ 632 ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ.

ಮಾಧ್ಯಮ ಉಸ್ತುವಾರಿ ಕೇಂದ್ರಕ್ಕೆ ಮೇಲ್ವಿಚಾರಣೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಮತ್ತು ದೂರು ನಿರ್ವಹಣಾ ತಂಡ(1950)ವನ್ನು ರಚಿಸಿ, ಬಿಆರ್‍ಟಿಎಸ್ ವಿಶೇಷ ಭೂಸ್ವಾಧಿನ ಅಧಿಕಾರಿ ಗೀತಾ ಹೊನ್ನಕೇರಿ ಅವರನ್ನು ನೇಮಿಸಲಾಗಿದೆ. ಈ ಎರಡು ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ.

ಸಾರ್ವಜನಿಕರು ಅಥವಾ ಯಾರೇ ಆಗಲಿ ಚುನಾವಣಾ ಸಂಬಂಧಿತ ದೂರುಗಳಿದ್ದಲ್ಲಿ ಸು-ವಿಧಾ ತಂತ್ರಾಂಶ ಅಥವಾ 1950 ಸಹಾಯವಾಣಿ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಸ್ವೀಪ್ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು ಮಾತನಾಡಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 625 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಲಾಗುವುದು.

ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ಮತದಾರರ ಜಾಗೃತಿ ಕ್ಲಬ್‍ಗಳು ಈಗಾಗಲೇ ಜಿಲ್ಲೆಯಾದ್ಯಾಂತ ಮತದಾನದ ಮಹತ್ವ ಮತ್ತು ಮತದಾರನ ಹಕ್ಕುಗಳ ಕುರಿತು, ಭಾರತದ ಚುನಾವಣಾ ಆಯೋಗ, ಭಾರತದ ಪ್ರಜಾಪ್ರಭುತ್ವದ ಮಹತ್ವ ಕುರಿತು ತಿಳುವಳಿಕೆ ಮೂಡಿಸಲು ಜಾಥಾ, ಕಾರ್ಯಾಗಾರ, ಚಿತ್ರಕಲೆ ಸ್ಫರ್ಧೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮತದಾನದವರೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದೆಂದು ಅವರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಮಾತನಾಡಿ, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 24 ಚಕ್‍ಪೋಸ್ಟ್‍ಗಳನ್ನು ತೆರೆಯಲಾಗುತ್ತಿದೆ.

ಪ್ರತಿ ಚಕ್‍ಪೋಸ್ಟ್‍ದಲ್ಲಿ ಪೊಲೀಸ್, ಕಂದಾಯ, ಅರಣ್ಯ ಮತ್ತು ವಾಣಿಜ್ಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಿಶೇಷವಾದ ಏಳು ಪೊಲೀಸ್ ಚಕ್‍ಪೋಸ್ಟ್‍ಗಳನ್ನು ಮತ್ತು ನಗರ ವ್ಯಾಪ್ತಿಯಲ್ಲಿ ಎಂಟು ಮೋಬೈಲ್ ಚಕ್‍ಪೊಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

ಚಕ್‍ಪೊಸ್ಟ್‍ಗಳಿಗೆ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ವ್ಯಾಪ್ತಿಯ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳೊಂದಿಗೆ ಜಂಟಿಯಾಗಿ ಭೇಟಿ ನೀಡಿ ಮತದಾರರಿಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ಜರುಗುವ ಕುರಿತು ತಿಳುವಳಿಕೆ ನೀಡಿ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡಲು ತಿಳುವಳಿಕೆ ಮೂಡಿಸಲಾಗುವುದೆಂದು  ಹೇಳಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *