ರಾಜ್ಯ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ

ಬೆಂಗಳೂರು ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರಕಟಿಸಿದ್ದಾರೆ.

ಅವರು ಬೆಂಗಳೂರಿನ ವೀರಶೈವ ಲಿಂಗಾಯತ ಭವನದಲ್ಲಿ ತಮ್ಮ ಬೆಂಬಲಿಗರು, ಹಿತೈಷಿಗಳ ಜೊತೆ ಸಭೆ ನಡೆಸಿದ ಬಳಿಕ ಈ ವಿಷಯ ಘೋಷಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯಲೇಬೇಕೆಂದು ಬೆಂಬಲಿಗರು ಒಕ್ಕೊರಲಿನಿಂದ ಒತ್ತಾಯಿಸಿದ ಪರಿಣಾಮ ಸ್ಪರ್ಧೆ ಮಾಡುವುದಾಗಿ ಸ್ವಾಮೀಜಿ ತಿಳಿಸಿದರು.

“ನೊಂದ ಜನರು ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.

ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು,

ಆದರೆ ಕುರುಬ ಸಮುದಾಯಕ್ಕೆ ಬಿಜೆಪಿ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ.

ಶೇಕಡಾ ೨ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೋಶಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಅಲ್ಲದೆ, ನಮ್ಮ ಲಿಂಗಾಯತ ಸಮುದಾಯವನ್ನು ತುಳಿದು ರಾಜಕಾರಣ ಮಾಡಿದ್ದಾರೆ.

ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಜೋಶಿ ಅವರೇ ಕಾರಣ ಎಂದು ಆರೋಪಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಂಬಂಧ ದಿಂಗಾಲೇಶ್ವರ ಸ್ವಾಮೀಜಿ ಈ ಹಿಂದೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿ ಭಕ್ತರ ಮತ್ತು ಹಲವು ಮಠಾದೀಶರ ಅಭಿಪ್ರಾಯ ಪಡೆದುಕೊಂಡಿದ್ದರು.

ಇಂದು ಬೆಂಗಳೂರಿನ ಹಳೇ ಬಳ್ಳಾರಿ ರಸ್ತೆಯ ವೀರಶೈವ ಲಿಂಗಾಯತ ಭವನದಲ್ಲಿ ಚಿಂತನ ಮಂಥನ ಸಭೆ ನಡೆಸಿದ ನಂತರ ದಿಂಗಾಲೇಶ್ವರ ಶ್ರೀ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ  ಸ್ಪರ್ಧೆ ಖಚಿತಪಡಿದಿದ್ದಾರೆ.

 ಕುರುಬ, ರೆಡ್ಡಿ, ಜಂಗಮ, ಅಂಬಿಗ ಹೀಗೆ ಬಹಳಷ್ಟು ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಮೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ಬಹುಜನರ ನೋವಿಗೆ ಕಾರಣವಾಗಿದೆ ಎಂದು ಹೇಳಿದರು.

ಒಂಭತ್ತು ಜನ ವೀರಶೈವ-ಲಿಂಗಾಯತರು ಸಂಸತ್ ಸದಸ್ಯರಾಗಿ
ಆಯ್ಕೆಯಾಗಿದ್ದರೂ ಒಬ್ಬರಿಗೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಯಾಕೆ ನೀಡಲಿಲ್ಲ?

ಹಿಂದಿನಿಂದಲೂ ಕೇವಲ ರಾಜ್ಯ ಸಚಿವ ಸ್ಥಾನವನ್ನು ಮಾತ್ರ ಯಾಕೆ ಕೊಟ್ಟುಕೊಂಡು ಬರಲಾಗುತ್ತಿದೆ? ಎಂದು ಗುಡುಗಿದರು.

ಬೆಂಗಳೂರು ದಕ್ಷಿಣದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಬಹುದಿತ್ತಲ್ಲ? ಅವರಿಗೆ ಯಾಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ, ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಿದ ಹಾಗೆ, ಬ್ರಾಹ್ಮಣರ ಪ್ರಾಬಲ್ಯಗಳಿರುವ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರಿಗೆ ಯಾಕೆ ಟಿಕೆಟ್ ಕೊಡೂವುದಿಲ್ಲ? ಎಂದು ಸವಾಲು ಎಸೆದಿದ್ದಾರೆ.

ವೀರಶೈವ ಲಿಂಗಾಯತರ ಹಾಗೂ ಇತರ ಸಮುದಾಯಗಳ ಮತಗಳು ಮಾತ್ರ ಬಿಜೆಪಿಗೆ ಬೇಕು. ಆದರೆ ಅಧಿಕಾರ ಇವರಲ್ಲೇ ಇರಬೇಕು. ಇತರ ಸಮುದಾಯದವರಿಗೆ ಎರಡು ಅಥವಾ ಮೂರು ಅವಧಿಗೆ ಮಾತ್ರ ಅವಕಾಶ.

ಆದರೆ ಇವರು ಐದನೇ ಅವಧಿಗೂ ಮುಂದುವರೆಯಬೇಕು ಎಂಬುದು ಯಾವ ಸೀಮೆಯ ಸಾಮಾಜಿಕ ನ್ಯಾಯ? ಎಂದು ನೇರವಾಗಿ ಛೇಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಜಕೀಯ ಪಕ್ಷಗಳು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ.

ಇದು ಮತದಾರರಿಗೆ ಮಾಡುವ ಮೋಸ. ಎರಡೂ ರಾಜಕೀಯ ಪಕ್ಷಗಳ ವಿರುದ್ಧ, ಸ್ವಾರ್ಥ ರಾಜಕಾರಣಿಗಳ ದುರಾಡಳಿತದ ವಿರುದ್ಧ ಸ್ವಾಭಿಮಾನಿಗಳು ಸಾರಿದ ಧರ್ಮಯುದ್ಧವಿದು ಎಂದು ದಿಂಗಾಲೇಶ್ವರ ಸ್ವಾಮೀಜಿ ತ‌ಮ್ಮ ನಿಲುವು ಪ್ರಕಟಿಸಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನು ತುಳಿಯುವಲ್ಲಿ ಪ್ರಹ್ಲಾದ ಜೋಶಿಯವರ ಪಾತ್ರ ಎದ್ದು ಕಾಣುತ್ತದೆ.
ಅದೇ ರೀತಿ ಹಾವೇರಿಯಲ್ಲಿ ಕೆ.ಎಸ್.ಈಶ್ವರಪ್ಪ ಪುತ್ರನಿಗೆ ಟಿಕೆಟ್ ತಪ್ಪಿಸಿದ್ದೂ ಇದೇ ಜೋಶಿ ಎಂದು ಆರೋಪಿಸಿದರು.

20 ವರ್ಷಗಳ ತಮ್ಮ ಅವಧಿಯಲ್ಲಿ ಜೋಶಿ ಸಾಧನೆ ಜೀರೋ. ಸಮಾಜಗಳನ್ನು, ನಾಯಕರನ್ನು ತುಳಿಯುವುದರಲ್ಲಿ ಮಾತ್ರ ಹೀರೋ ಎಂದು ದಿಂಗಾಲೇಶ್ವರ ಶ್ರೀ ವ್ಯಂಗ್ಯವಾಡಿದ್ದಾರೆ.

ಸುಳ್ಳು ಮಾಹಿತಿ ನೀಡಿ, ಕಲಘಟಗಿಯ ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ 120 ಮಠಾಧೀಶರನ್ನು ಕರೆಯಿಸಿ ಅವರ ತೇಜೋವಧೆ ನಡೆಸಲಾಯಿತು.

ಸ್ವಾರ್ಥಕ್ಕಾಗಿ ಇವರು ಮಠಗಳನ್ನು ರಾಜಕೀಯ ಕೇಂದ್ರಗಳನ್ನಾಗಿ ಮಾಡುತ್ತಿದ್ದಾರೆ. ಲಿಂಗಾಯತರು ಮತ್ತು ವೀರಶೈವರ ನಡುವೆ ಒಡಕು ಮೂಡಿಸಲು, ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೋಶಿ ಶಿಷ್ಯರು ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ ಲಿಂಗಾಯತ ವೀರಶೈವರು ಜಾಗೃತರಾಗಿದ್ದಾರೆ ಎಂಬುದು ಈ ಚುನಾವಣೆ ಫಲಿತಾಂಶದ ನಂತರ ಗೊತ್ತಾಗಲಿದೆ ಎಂದು ಶ್ರೀಗಳು ಹೇಳಿದರು.

ಲಿಂಗಾಯತರು ಮತ್ತು ಇತರ ಸಮಾಜದವರು ಸಾಯುಬಾರದು, ಬದುಕಬಾರದು ಎಂಬಂತೆ ಮಾಡಲಾಗಿದೆ. ಅದಕ್ಕಾಗಿ ತಾವು ಸ್ವಾಭಿಮಾನದ ಹೋರಾಟ ನಡೆಸುತ್ತಿರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ವಿವರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *