ಬೆಂಗಳೂರು prajakiran.com : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ನೇರವಾಗಿ ಆರೋಪಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿ ಸಿಡಿ ಮಾಡಿದ್ದು ಕಾಂಗ್ರೆಸ್ ನವರೇ. ನಾನೂ ಕೂಡ ಕಾಂಗ್ರೆಸ್ ನಲ್ಲಿ 20 ವರ್ಷಗಳ ಕಾಲ ಇದ್ದೆ.
ಹೀಗಾಗಿ ಕಾಂಗ್ರೆಸ್ ನಾಯಕರು ಏನೆಲ್ಲಾ ಮಾಡುತ್ತಾರೆ ಎಂಬುದು ನನಗೂ ಗೊತ್ತು ಎಂದು ಗುಡುಗಿದ್ದಾರೆ.
ಇಂತಹ ಮನೆ ಹಾಳ ಕೆಲಸ ಮಾಡುವುದು ಅವರು ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.
ಸಿಡಿ ಕೇಸ್ ಅನ್ನು ಮೊದಲು ಸಿಬಿಐ ತನಿಖೆಗೆ ಒಪ್ಪಿಸಲಿ ಆಗ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ಕಾಂಗ್ರೆಸ್ ನವರಿಗೆ ರಾಜಕೀಯವಾಗಿ ತಾಕತ್ತಿದ್ದರೆ ರಮೇಶ್ ಜಾರಕಿಹೊಳಿ ವಿರುದ್ಧ ಅಥವಾ ನನ್ನ ವಿರುದ್ಧ ಸ್ಪರ್ಧಿಸಲಿ.
ಅದನ್ನು ಬಿಟ್ಟು ಈ ರೀತಿ ನಕಲಿ ಸಿಡಿ ಮಾಡಿ ಒಬ್ಬರ ತೇಜೋವಧೆ ಮಾಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಗುಡುಗಿದರು.