ಜಮ್ಮು ಮತ್ತು ಕಾಶ್ಮೀರ prajakiran.com : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಬಿಜೆಪಿ ಮುಖಂಡ ರಾಕೇಶ್ ಪಂಡಿತ್ರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಟ್ರಾಲ್ ಪಯೀನ್ ಪ್ರದೇಶದಲ್ಲಿ ಬುಧವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ನರು ಗಾಯಗೊಂಡಿದ್ದಾರೆ.
ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರಿ ಪಂಡಿತ್ ಮತ್ತು ಟ್ರಾಲ್ ಮುನ್ಸಿಪಲ್ ಕಮಿಟಿಯ ಕೌನ್ಸಿಲರ್ ಆಗಿರುವ ರಾಕೇಶ್ ಪಂಡಿತ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಪೊಲೀಸರು ಮತ್ತು ಸಿಆರ್ಪಿಎಫ್ ಪಡೆ ಗುಂಡಿನ ದಾಳಿ ನಡೆದ ಪ್ರದೇಶಕ್ಕೆ ಧಾವಿಸಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ.