ರಾಜ್ಯ

ಕೋವಿಡ್ ನಿಂದ ಮೃತಪಟ್ಟವರಿಗಾಗಿ ಪ್ರತ್ಯೇಕ ಸ್ಥಳ ನಿಗದಿ ಮಾಡಲು ಇಮ್ರಾನ್ ಕಳ್ಳಿಮನಿ ಒತ್ತಾಯ

ಧಾರವಾಡ prajakiran.com : ಕೋವಿಡ್ 19 ನಿಂದ ಮೃತಪಟ್ಟ ಮುಸ್ಲಿಂ ಸಮಾಜದ ಬಂಧುಗಳಿಗೆ ಧಾರವಾಡದಲ್ಲಿ ಪ್ರತ್ಯೇಕ ಸ್ಥಳ ನಿಗದಿ ಪಡಿಸಿ, ಅದರಲ್ಲಿಯೇ ಅವರ ಅಂತಿವಿಧಿವಿಧಾನ ನೆರವೇರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಹಾಗೂ ಇತ್ತಿಹಾದ್ ಗ್ರೂಪ್ ಸಂಚಾಲಕ ಇಮ್ರಾನ್ ಕಳ್ಳಿಮನಿ, ಹಿರಿಯ ಸದಸ್ಯರಾದ ರಿಯಾಜ್ ಕಿತ್ತೂರ, ವಕೀಲರಾದ ಮೂಸಾ ಖಾನ್ ಪಠಾಣ ಮನವಿ ಮಾಡಿದ್ದಾರೆ.

ಅವರು ಶನಿವಾರ ಧಾರವಾಡದ ಅಪರ್ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಧಾರವಾಡದ ಖಬರಸ್ಥಾನದಲ್ಲಿ ಈಗಾಗಲೇ ಸ್ಥಳದ ಅಭಾವವಿದ್ದು, ಅದರಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಹಲವು ವರ್ಷಗಳ ಹಿಂದೆಯೇ ಮುಸ್ಲಿಂ ಸಮಾಜದ ವತಿಯಿಂದ ಹೊಸದಾಗಿ ಖಬರಸ್ತಾನ ನಿರ್ಮಿಸಲು 10 ಎಕರೆ ಭೂಮಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.

ಈ ಸಂಬಂಧ ಸರಕಾರದ ಮಟ್ಟದಲ್ಲಿ ಹಾಗೂ ಧಾರವಾಡ ಜಿಲ್ಲಾಡಳಿತ ಕೂಡ ಸರಕಾತ್ಮಕವಾಗಿ ಸ್ಪಂದಿಸಿತ್ತು. ಆದರೆ ಅದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಿಲ್ಲ. ಹೀಗಾಗಿ ತಕ್ಷಣ ಈ ಹಿಂದೆ ನಿಗದಿಪಡಿಸಿದ್ದ ಸ್ಥಳವನ್ನು ಮುಸ್ಲಿಂ ಸಮಾಜಕ್ಕೆ ಹಂಚಿಕೆ ಮಾಡಿ ಅದರಲ್ಲಿಯೇ ಕೋವಿಡ್ 19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದರು.

ಈಗಾಗಲೇ ರಾಜ್ಯದ ರಾಜಧಾನಿ ಬೆಂಗಳೂರು, ಕಲಬುರಗಿ ಹಾಗೂ ಬಳ್ಳಾರಿಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸ್ಥಳ ನಿಗದಿ ಪಡಿಸಿ, ಅಲ್ಲಿಯೇ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

ಹೀಗಾಗಿ ಧಾರವಾಡದಲ್ಲಿ ಕೂಡ ಇಂತಹ ಕ್ರಮ ಕೈಗೊಳ್ಳುವ ಮೂಲಕ ಮುಸ್ಲಿಂ ಸಮಾಜದ ಬಾಂಧವರಿಗೆ ಸಹಾಯ ಹಸ್ತ ಚಾಚಬೇಕು. ಒಂದು ವೇಳೆ ತಕ್ಷಣಕ್ಕೆ ಭೂಮಿ ಹಂಚಿಕೆಮಾಡಲು ಸಾಧ್ಯವಾಗದಿದ್ದರೆ ಇದರಲ್ಲಿಯೇ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು. ಆ ಮೂಲಕ ಕೋವಿಡ್ ಸಮುದಾಯಕ್ಕೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇಮ್ರಾನ್ ಕಳ್ಳಿಮನಿ ಆಗ್ರಹಿಸಿದರು.

ಜೊತೆಗೆ ಧಾರವಾಡದ ಮುಸ್ಲಿಂ ಸಮಾಜದ ಯಾವುದೇ ವ್ಯಕ್ತಿ ಕೋವಿಡ್ ನಿಂದ ಮರಣವನ್ನಪ್ಪಿದ್ದರೆ, ಇದಕ್ಕಾಗಿಯೇ ಧಾರವಾಡದಲ್ಲಿ 10ರಿಂದ 15 ಜನರ ಒಂದು ತಂಡವನ್ನು ನೇಮಿಸಿ ಅವರ ಮೂಲಕ ಮುಸ್ಲಿಂ ಸಮುದಾಯದ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಡಬೇಕು ಎಂದು  ಮುಸ್ಲಿಂ ಸಮಾಜದ ಮುಖಂಡ ಹಾಗೂ ಇತ್ತಿಹಾದ್ ಗ್ರೂಪ್ ಸಂಚಾಲಕ ಇಮ್ರಾನ್ ಕಳ್ಳಿಮನಿ, ಹಿರಿಯ ಸದಸ್ಯರಾದ ರಿಯಾಜ್ ಕಿತ್ತೂರ, ವಕೀಲರಾದ ಮೂಸಾ ಖಾನ್ ಪಠಾಣ ಜಿಲ್ಲಾಡಳಿತಕ್ಕೆ  ಮನವರಿಕೆ ಮಾಡಿಕೊಟ್ಟರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *