ರಾಜ್ಯ

ಧಾರವಾಡದ 4 ಕಾರ್ಖಾನೆಗಳ ಉತ್ಪಾದನೆ ನಿಷೇಧ ; 75 ಕಾರ್ಖಾನೆಗಳಿಗೆ ಕಾರಣ ಕೇಳಿ ನೋಟಿಸ್

ಕೈಗಾರಿಕಾ ವಸಾಹತು ಮತ್ತು ಪ್ರದೇಶಗಳ 2180 ಕೈಗಾರಿಕೆಗಳ ಸಮೀಕ್ಷೆ

75 ಕಾರ್ಖಾನೆಗಳಿಗೆ ಕಾರಣ ಕೇಳಿ ನೋಟಿಸ್; 22 ಕೈಗಾರಿಕೆಗಳ ಕಾನೂನು ಉಲ್ಲಂಘನೆಗಾಗಿ ಕಠಿಣ ಕ್ರಮ : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ prajakiran. com ಆ.17 : ಕಳೆದ ಜುಲೈ 23 ರಂದು ಹುಬ್ಬಳ್ಳಿ ನಗರ ಹೊರ ವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಮೆ: ಐಸಿ ಪ್ಲೇಮ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡಿದ್ದ 06 ಜನ ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಗಾಯಾಳುಗಳಾಗಿರುವ 2 ಜನ ಕಾರ್ಮಿಕರಲ್ಲಿ ಒಬ್ಬರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇನ್ನೊರ್ವ ಕಾರ್ಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆಗಸ್ಟ್ 12 ರಂದು ತುರ್ತು ಸಭೆ ಜರುಗಿಸಿ, ಧಾರವಾಡ ಮತ್ತು ಹುಬ್ಬಳ್ಳಿ ಶಹರದಲ್ಲಿ ಅಭಿವೃದ್ಧಿಗೊಂಡ ಕೈಗಾರಿಕಾ ವಸಾಹತು ಮತ್ತು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತಗೊಂಡ ಕೈಗಾರಿಕೆಗಳು, ಅಂಗಡಿ ಮತ್ತು ಎಸ್ಟ್ಯಾಬ್ಲಿಷ್‍ಮೆಂಟಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರನ್ನು ನೊಡಲ್ ಅಧಿಕಾರಿಯಾಗಿ ನೇಮಿಸಿ ಅವರ ನೇತ್ರತ್ವದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದರು.

ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಕಂದಾಯ, ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಒಟ್ಟು 10 ತಂಡಗಳನ್ನು ರಚಿಸಿ ಸಮೀಕ್ಷೆಯನ್ನು ಜುಲೈ 27 ರಿಂದ ನಡೆಸಲಾಗಿತ್ತು.

ಜಿಲ್ಲೆಯಲ್ಲಿ ಒಟ್ಟು 10 ಕೈಗಾರಿಕಾ ವಸಾಹತು ಮತ್ತು 6 ಕೈಗಾರಿಕಾ ಪ್ರದೇಶಗಳಿದ್ದು, ಒಟ್ಟು 2180 ಕೈಗಾರಿಕಾ ಘಟಕಗಳ ಸಮೀಕ್ಷೆಯನ್ನು ಆಗಸ್ಟ್ 6 ರಂದು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಸಮೀಕ್ಷೆ ಮಾಡಿದ ಕೈಗಾರಿಕೆ, ಅಂಗಡಿ ಮತ್ತು ಎಸ್ಟ್ಯಾಬ್ಲಿಷ್‍ಮೆಂಟಗಳಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾನೂನುಗಳನ್ವಯ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಿಗೆ ಪಡೆಯದ 647 ಘಟಕಗಳು, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಅನ್ವಯ ಪರವಾನಿಗೆ ಪಡೆಯದ 75 ಘಟಕಗಳು, ಕಾರ್ಮಿಕ ಇಲಾಖೆಯ ಪರವಾನಿಗೆ ಪಡೆಯದ 978, ಇ.ಎಸ್.ಐ ನೀಡದಿರುವ 15 ಕಾರ್ಖಾನೆಗಳು, ಭವಷ್ಯ ನಿಧಿ ನೀಡದ 2 ಕಾರ್ಖಾನೆಗಳು, ವಿದ್ಯುತ್ ಇಲಾಖೆಯ ಪರವಾನಿಗೆ ಪಡೆಯದ 101 ಕಾರ್ಖಾನೆಗಳು, ಕೆ.ಐ.ಎ.ಡಿ.ಬಿ ನ ಬೈಲಾ ಉಲ್ಲಂಘನೆಯ 278 ಘಟಕಗಳು ಹಾಗೂ ಕೆ.ಎಸ್.ಎಸ್.ಐ.ಡಿ.ಸಿ ನಿಯಮ ಉಲ್ಲಂಘಿಸಿದ 106 ಕೈಗಾರಿಕಾ ಘಟಕಗಳನ್ನು ಗುರುತಿಸಲಾಗಿದೆ.

ಇವುಗಳಲ್ಲಿ 4 ಕಾರ್ಖಾನೆಗಳಿಗೆ ಉತ್ಪಾದನಾ ನಿಷೇಧ ಆದೇಶ ಮತ್ತು 75 ಕಾರ್ಖಾನೆಗಳಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇದರಲ್ಲಿ ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡದ ಒಟ್ಟು 22 ಘಟಕಗಳಿಗೆ ಕಾನೂನು ಉಲ್ಲಂಘನೆಗಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯದೆ, ಉಲ್ಲಂಘಿಸಿದ ಕೈಗಾರಿಕಾ ಘಟಕಗಳಿಗೆ ಮೂರು ದಿನಗಳೊಳಗಾಗಿ ಇಲಾಖೆಯ ನಿಯಮಾವಳಿ ಪ್ರಕಾರ ನೋಟಿಸ್ ಜಾರಿ ಮಾಡುವಂತೆ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಆದೇಶಿಸಿದರು.

ಹಾಗೂ ಎಲ್ಲಾ ಕೈಗಾರಿಕಾ ಘಟಕಗಳಿಗೆ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಘಟಕಗಳ ಮೇಲೆ ಕಾನೂನು ರಿತ್ಯ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಕಂದಾಯ, ಪೊಲೀಸ್ ಮತ್ತು ಅಗ್ನಿ ಶಾಮಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *