ರಾಜ್ಯ

ಕೋವಿಡ್ ಸೋಂಕಿತರ ಅಸಹಾಯಕತೆ ದುರುಪಯೋಗ ಬೇಡ ಎಂದ ಸಚಿವ ಶೆಟ್ಟರ್

ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ಬರದಂತೆ ಕರ್ತವ್ಯ ನಿರ್ವಹಿಸಿ :
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ

ಧಾರವಾಡ prajakiran.com : ಕೋವಿಡ್-19 ರ ಸೋಂಕು ಹೆಚ್ಚಾಗುತ್ತಿದ್ದಂತೆ ಬಹಳಷ್ಟು ಜನ ತೊಂದರೆಗಳಿಗೆ ಸಿಲುಕಿದ್ದಾರೆ. ಕೆಲವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿ ವೆಚ್ಚ ಭರಿಸಲು ಕಷ್ಟಪಡುತ್ತಿದ್ದಾರೆ.

ಅಂತಹವರ ನೆರವಿಗಾಗಿ ಸರ್ಕಾರವು ಉಚಿತ ಚಿಕಿತ್ಸೆ ಹಾಗೂ ಇತರ ಅನೇಕ ಕ್ರಮಗಳನ್ನು ಕೈಗೊಂಡಿದೆ.

ಆದರೆ ಆಸ್ಪತ್ರೆಗಳು ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಮೊತ್ತ ಪಾವತಿಸುವಂತೆ ಕೋವಿಡ್ ಸೋಂಕಿತರ ಹಾಗೂ ಅವರ ಕುಟುಂಬದವರಿಗೆ ಒತ್ತಡ ಹೇರಿ, ಈ ಅಸಹಾಯಕತೆಯ ದುರುಪಯೋಗ ಮಾಡಿಕೊಂಡು ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ತರಬಾರದು ಮತ್ತು ಸರ್ಕಾರವು ಕೋವಿಡ್ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಂಡ ನಿರ್ಧಾರಗಳಿಗೆ ಸಹಕರಿಸಬೇಕೆಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ಅವರು ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೇಮಕಗೊಂಡಿರುವ ನೋಡೆಲ್ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಕೋವಿಡ್ ಸೋಂಕು ಹೆಚ್ಚುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಮಿತ್ರರು ಬಡವರಿಗೆ, ಅಸಹಾಯಕರಿಗೆ ನೆರವಾಗಿ ವೃತ್ತಿ ನಿರ್ವಹಿಸಬೇಕು.

ಸರ್ಕಾರವು ಕೈಗೊಂಡಿರುವ ಕ್ರಮಗಳಿಗೆ ಸಹಕಾರ ನೀಡಿ, ವೃತ್ತಿಗೌರವ ಹೆಚ್ಚಿಸಬೇಕು ಎಂದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಕೈಜೋಡಿಸಿದಾಗ ಮಾತ್ರ ಉತ್ತಮ ರೀತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನವಿದೆ. ಆ ನಂಬಿಕೆಯನ್ನು ಆಪತ್ಕಾಲದಲ್ಲಿ ನೆರವಾಗುವ ಮೂಲಕ ಎಲ್ಲ ವೈದ್ಯರು, ಆಸ್ಪತ್ರೆಗಳು ಉಳಿಸಿಕೊಳ್ಳಬೇಕು.

ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಸಹಕಾರ ನೀಡಲು ಸರ್ಕಾರವು ಜಿಲ್ಲಾಡಳಿತದ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ.

ಆಸ್ಪತ್ರೆಗಳು ಬಯಸಿದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತನ್ನು ನೀಡಲು ಸಿದ್ಧರಿದ್ದೇವೆ. 

ಎಲ್ಲರೂ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮ ವಹಿಸಲು ಪರಸ್ಪರ ಸಹಕಾರದಿಂದ ಕೈಜೋಡಿಸಬೇಕೆಂದು ಸಚಿವರು ಹೇಳಿದರು.

ಧಾರವಾಡ ಜಿಲ್ಲೆಯ ಕೆಲವು ಆಸ್ಪತ್ರೆಗಳು ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳದೇ ತಿರಸ್ಕರಿಸುತ್ತಿರುವುದು ಹಾಗೂ ದಾಖಲಾತಿ ಮಾಡಿಕೊಳ್ಳುವಲ್ಲಿ ನಿಧಾನಗತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಲು ಮೊದಲ ಹಂತದಲ್ಲಿ ಪರಸ್ಪರ ಚರ್ಚೆ, ಮನವಿ ಮಾಡಲಾಗಿದೆ ಎಂದು ಹೇಳಿದರು.

ಅದಾಗ್ಯೂ ಖಾಸಗಿ ಆಸ್ಪತ್ರೆಗಳ ಸ್ಪಂಧನೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿದ್ದಲ್ಲಿ ಜಿಲ್ಲಾಡಳಿತವು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸಚಿವರು ಎಚ್ಚರಿಸಿದರು.

*ಸೋಂಕಿತರ ಚಿಕಿತ್ಸೆಗೆ ಬೆಡ್, ಐಸಿಯು ಬೆಡ್ ಇಲ್ಲ ಅನ್ನುವಂತಿಲ್ಲ*:

ಪ್ರತಿದಿನ ಆಯಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್, ಐಸಿಯು ಬೆಡ್, ವೆಂಟಿಲೇಟರ್‍ಗಳ ಮಾಹಿತಿಯನ್ನು ನೋಡಲ್ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡುತ್ತಾರೆ.

ಮುಂದೆ ಯಾವುದೇ ಕೋವಿಡ್ ಸೋಂಕಿತರನ್ನು ರೆಫರಲ್ ಮೂಲಕ ಸರ್ಕಾರವು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದಾಗ ಆ ಆಸ್ಪತ್ರೆಯವರು ಬೆಡ್, ಐಸಿಯು ಬೆಡ್ ಇಲ್ಲ ಎನ್ನುವಂತಿಲ್ಲ. 

ಒಂದು ವೇಳೆ ಸುಳ್ಳು ಹೇಳಿದರೆ ಆ ಆಸ್ಪತ್ರೆಯ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *