ಯಾದಗಿರಿ prajakiran.com : ಉಪಹಾರದಲ್ಲಿ ಹಾವಿನ ಮರಿ ಪತ್ತೆಯಾಗಿದ್ದ ಉಪ್ಪಿಟ್ಟು ಸೇವಿಸಿದ್ದ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆ ಸೇರಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ ಉಪಹಾರವಾಗಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸಿದ್ದರು
ಆ ಉಪಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆಯಾದ ನಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇನ್ನು ಹೆಚ್ಚು ಆತಂಕಗೊಂಡಿದ್ದಾರೆ.
ಅಸ್ವಸ್ಥಗೊಂಡ 52 ವಿದ್ಯಾರ್ಥಿಗಳಿಗೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಹಣಮಂತರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ