ಅಂತಾರಾಷ್ಟ್ರೀಯ

ಅನಂತಕುಮಾರ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಿ

*ಸಂವಿಧಾನ ಬದಲಾವಣೆಯ ಮಾತನಾಡಿರುವ ಅನಂತ ಕುಮಾರ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು.*

*ಹೆಗಡೆಯವರ ಹೇಳಿಕೆ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಬಿಜೆಪಿ ಪಕ್ಷಕ್ಕೆ ಇದ್ದಂತಿದೆ.*

*ಹೆಗಡೆಯವರ ಅಭಿಪ್ರಾಯಕ್ಕೆ ಪ್ರಧಾನಿಗಳ ಒಪ್ಪಿಗೆ ಇಲ್ಲದಿದ್ದರೆ ಅವರನ್ನು ಪಕ್ಷದಿಂದ ವಜಾ ಮಾಡಲಿ – ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು* 

ಬೆಂಗಳೂರು ಪ್ರಜಾಕಿರಣ.ಕಾಮ್ : ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು” ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ ಅದು ಭಾರತೀಯ ಜನತಾ ಪಕ್ಷದ ಗುಪ್ತ ಅಜೆಂಡಾದ ಭಾಗವೇ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ.

ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಎಂದು ಕುಟುಕಿದ್ದಾರೆ.

ಹೆಗಡೆಯವರ ಈ ಹೇಳಿಕೆಯನ್ನು ಗಮನಿಸಿದರೆ
ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಅವರ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ ಎಂದು ತಿರುಗೇಟು ನೀಡಿದ್ದಾರೆ.

ಸಂವಿಧಾನದ ವಿರುದ್ಧ ಅನಂತಕುಮಾರ ಹೆಗಡೆಯವರು ಮಾತನಾಡಿರುವುದು ಇದೇ ಮೊದಲ ಬಾರಿ ಅಲ್ಲ. “ಸಂವಿಧಾನವನ್ನು ಬದಲಾಯಿಸಬೇಕು.

ಬದಲಾಯಿಸುವುದೇ ನಮ್ಮ ಉದ್ದೇಶ” ಎಂದೆಲ್ಲಾ ಆಗಾಗ ಅವರು ವಿಷಕಾರುತ್ತಲೇ ಇದ್ದಾರೆ.

ಇಲ್ಲಿಯ ವರೆಗೆ ಬಿಜೆಪಿ ವರಿಷ್ಠರು ಅವರಿಗೆ ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತಾ ಬಂದಿರುವುದನ್ನು ನೋಡಿದರೆ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ಅವರಿಗೆ ಇದೆ ಎನ್ನುವುದು ಸ್ಪಷ್ಟ.

ಹೆಗಡೆ ಅಭಿಪ್ರಾಯವನ್ನು ಮೋದಿಯವರು ಒಪ್ಪದೆ ಇದ್ದರೆ ಅವರನ್ನು ಮೊದಲು ಪಕ್ಷದಿಂದ ಕಿತ್ತುಹಾಕಬೇಕು. ಅವರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಹೆಗಡೆ ಅಭಿಪ್ರಾಯಕ್ಕೆ ಪ್ರಧಾನಿಯವರ ಸಹಮತ ಇದೆ ಎಂದರ್ಥ.

ಸಾರ್ವಜನಿಕ ಭಾಷಣಗಳಲ್ಲಿ ಸಂವಿಧಾನದ ಮೇಲೆ ಬದ್ಧತೆಯನ್ನು ಸಾರುವ ಮೋದಿ ಅವರ ಮಾತುಗಳು ಬರೀ ಓಳು ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಅನಂತಕುಮಾರ ಹೆಗಡೆಯಂತಹ ಸಂಸದನೊಬ್ಬ ಈ ರೀತಿ ನಿರ್ಭೀತಿಯಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಲು ಸಾಧ್ಯ ಇಲ್ಲ.

ಸಂವಿಧಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅನಂತ್ ಕುಮಾರ್ ಹೆಗಡೆ, ಅದೇ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡಿತ ಶಿಕ್ಷಾರ್ಹ ಅಪರಾಧ.

ಇದನ್ನು ಲೋಕಸಭಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಹೆಗಡೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *