ರಾಜ್ಯ

ನೇರ ಪಾವತಿ ಪೌರಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ : ಅನುಷ್ಠಾನಕ್ಕೆ ಸಮಿತಿ ರಚನೆ

ಬೆಂಗಳೂರು prajakiran.com, ಜುಲೈ 1-

ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ.

ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಹಾಗೂ ಪೌರ ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಪೌರಕಾರ್ಮಿಕರಿಗೆ ಸಾಮಾಜಿಕವಾಗಿ ಗೌರವ, ಸೌಲಭ್ಯ ಹಾಗೂ ಸುರಕ್ಷತೆ ಅಗತ್ಯ ಎನ್ನುವುದು ಸರ್ಕಾರಕ್ಕೆ ಮನವರಿಕೆಯಾಗಿದೆ.

ಸರ್ಕಾರವು ಪೌರಕಾರ್ಮಿಕರ ಸಮಸ್ಯೆಗಳಿಗೆ ಮಾನವೀಯತೆಯಿಂದ ಸ್ಪಂದಿಸಲಿದೆ. ಈ ಉದ್ದೇಶದಿಂದಲೇ ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ ಘೋಷಿಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದರೊಂದಿಗೆ ಪೌರಕಾರ್ಮಿಕರ ನೇಮಕಾತಿ ಸರಳೀಕರಣಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗುವುದು ಹಾಗೂ ನೇಮಕಾತಿ ನೀತಿಯನ್ನೂ ಜಾರಿಗೆ ತರಲಾಗುವುದು.

ಈ ಸಂದರ್ಭದಲ್ಲಿ ಐ.ಪಿ.ಡಿ. ಸಾಲಪ್ಪ ವರದಿ, ಚಂದ್ರಶೇಖರ್ ಸಮಿತಿ ವರದಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಬೇರೆ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಮಾಹಿತಿಯನ್ನೂ ಪಡೆಯಲು ಸೂಚಿಸಿದರು.

ಇದರೊಂದಿಗೆ ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ಗೃಹಭಾಗ್ಯ ಯೋಜನೆ ಜಾರಿಗೊಳಿಸಲು ಹೊಸದಾಗಿ ಮಂಜೂರಾತಿ ನೀಡಲಾಗುವುದು.

ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ರೈತವಿದ್ಯಾನಿಧಿ ಮಾದರಿಯಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು. ಪೌರಕಾರ್ಮಿಕ ಮಹಿಳೆಯರಿಗೆ ಸರ್ಕಾರಿ ನೌಕರರಿಗೆ ನೀಡುವಂತೆ ಹೆರಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯ ಒದಗಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಒಂದು ಅಥವಾ ಎರಡು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಬಿ.ಎ. ಬಸವರಾಜ, ಮುನಿರತ್ನ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ, ಅಖಿಲ ಕರ್ನಾಟಕ ಪೌರಕಾರ್ಮಿಕರ ಮಹಾಸಭೆಯ ಅಧ್ಯಕ್ಷ ನಾರಾಯಣ ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *