ರಾಜ್ಯ

ಧಾರವಾಡ : ಬಾಲ್ಯ ವಿವಾಹ ನಿಷೇಧ ಕಾಯ್ದೆ 2 ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಉಳಿದ 3 ಪ್ರಕರಣಗಳ ಆರೋಪಿಗಳು ವಶಕ್ಕೆ
ಜಿಲ್ಲಾಧಿಕಾರಿಗಳ ಸೂಚನೆ

ಧಾರವಾಡ prajakiran.com ನ.24:

ಜಿಲ್ಲೆಯಲ್ಲಿ ಕಳೆದ ಎಪ್ರೀಲ್‌ನಿಂದ ಇಲ್ಲಿಯವರೆಗೆ 10 ಬಾಲ್ಯ ಬಾಲ್ಯವಿವಾಹಗಳನ್ನು ತಡೆಯಲಾಗಿದೆ.

ಐದು ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 2 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ.

ಉಳಿದ 3 ಪ್ರಕರಣಗಳ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

ನವಲಗುಂದ ತಾಲೂಕಿನ ಶಿರೂರ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ 2020 ರ ಜೂನ್ 11 ರಂದು ನಡೆದ ವಿವಾಹ ಹಾಗೂ 2020 ರ ಅಕ್ಟೋಬರ್ 28 ರಂದು ಹುಬ್ಬಳ್ಳಿ ಹೊಸ ಗಬ್ಬೂರಿನ ಗಾಳಿ ದುರ್ಗಮ್ಮನ ದೇವಾಲಯದಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ನಡೆದಿತ್ತು.

ಇದರ ಮಾಹಿತಿ ಆಧರಿಸಿ ಕಳೆದ ಜುಲೈ 3 ರಂದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಉಳಿದ 3 ಪ್ರಕರಣಗಳಲ್ಲಿ ಎರಡು ನವಲಗುಂದ ಹಾಗೂ ಒಂದು ಹುಬ್ಬಳ್ಳಿ ಗ್ರಾಮೀಣ ವಿಭಾಗಕ್ಕೆ ಸಂಬಂಧಿಸಿವೆ.

ಈ ಪ್ರಕರಣಗಳ ಆರೋಪಿಗಳನ್ನೂ ಕೂಡ ತ್ವರಿತವಾಗಿ ಬಂಧಿಸಿ, ಬಾಲ್ಯ ವಿವಾಹ ಮಾಡಲು ಪ್ರಯತ್ನಿಸುವವರಿಗೆ ಗಂಭೀರ ಎಚ್ಚರಿಕೆ ಮೂಡಿಸಬೇಕು ಎಂದರು.

ರಕ್ಷಿಸಲ್ಪಟ್ಟ ಬಾಲಕಿಯರಿಗೆ 18 ವರ್ಷಗಳು ಪೂರ್ಣವಾಗುವವರೆಗೆ ಸರ್ಕಾರದ ಬಾಲಮಂದಿರಗಳಲ್ಲಿಯೇ ಪುನರ್ವಸತಿ ಕಲ್ಪಿಸಬೇಕು.

ಜಿಲ್ಲೆಯ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.

ದಿನದ 24 ಗಂಟೆಗಳ ಕಾಲವೂ ಅಲ್ಲಿ ಸಿಬ್ಬಂದಿ ಹಾಜರಿದ್ದು ಸೇವೆ ನೀಡಬೇಕು. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಕಟ್ಟಡದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಲಾಗಿದೆ.

ಬರುವ ಡಿಸೆಂಬರ್ 1 ರಿಂದ ಅಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯ ಪ್ರಾರಂಭಿಸಬೇಕು.
ಅಪೌಷ್ಠಿಕತೆ ನಿವಾರಣೆಗಾಗಿ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ‌ನಲ್ಲಿರುವ ಪೌಷ್ಠಿಕತೆ ಪುನರ್ವಸತಿ ಕೇಂದ್ರಗಳಿಗೆ ಮಕ್ಕಳು ಹಾಗೂ ತಾಯಂದಿರನ್ನು ದಾಖಲಿಸಿ, ಅವರ ಅಪೌಷ್ಠಿಕತೆ ನಿವಾರಿಸಬೇಕು.

ಜಿಲ್ಲೆಯ ಸಾಂತ್ವನ,ಸ್ವಾಧಾರ,ಸ್ನೇಹ,ಸಖಿ ಕೇಂದ್ರಗಳ ತಂಗುದಾಣಗಳಿಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಹಾಗೂ ನಿರ್ದಿಷ್ಟ ಪಡಿಸಿದ ವಿದ್ಯಾರ್ಹತೆ ಹೊಂದಿದ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.

ಪದವಿ,ಸ್ನಾತಕೋತ್ತರ ಪದವಿಗಳ ನೈಜತೆ ಪರಿಶೀಲಿಸಿದ ನಂತರವೇ ಆ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 4 ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳು ನೋಂದಾಯಿಸಲ್ಪಟ್ಟಿವೆ, ಅವುಗಳಲ್ಲಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ.ಎಲ್ಲ ವಸತಿನಿಲಯಗಳೂ ಕಾರ್ಯಾರಂಭಿಸಿ,ಜಿಲ್ಲೆಯ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಕಲ್ಪಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ ಮಾತನಾಡಿ, ಅಪೌಷ್ಠಿಕತೆ ನಿವಾರಣೆಗೆ ಮಕ್ಕಳು ಮತ್ತು ಹಾಲುಣಿಸುವ ತಾಯಂದಿರಿಗೆ , ಕಡ್ಡಾಯವಾಗಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ.

ಈ ಕಾರ್ಯದಲ್ಲಿ ಲೋಪಗಳಾದರೆ ಸಂಬಂಧಿಸಿದ ಅಧಿಕಾರಿ,ಸಿಬ್ಬಂದಿಯ ಮೇಲೆ ಕ್ರಮವಹಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಕಳೆದ ಎಪ್ರೀಲಿನಿಂದ ಇಲ್ಲಿಯವರೆಗೆ 180 ಪ್ರಕರಣಗಳನ್ನು ದಾಖಲಿಸಿಕೊಂಡು, 131 ಪ್ರಕರಣಗಳನ್ನು ಆಪ್ತ ಸಮಾಲೋಚನೆ ಮೂಲಕ ಇತ್ಯರ್ಥ ಪಡಿಸಲಾಗಿದೆ.ಉಳಿದ ಪ್ರಕರಣಗಳು ನ್ಯಾಯಾಲಯ ಮೂಲಕ ಇತ್ಯರ್ಥವಾಗಿವೆ ಎಂದರು.

ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗಿಲ್,ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*ಉದ್ಯೋಗಸ್ಥ ಮಹಿಳೆಯ ವಸತಿ ನಿಲಯ ಪ್ರವೇಶಕ್ಕೆ ಸೂಚನೆ*

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಾಲ್ಕು ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳಿವೆ, ಮಾಸಿಕ 35 ಸಾವಿರಕ್ಕಿಂತ ಕಡಿಮೆ ಆದಾಯವಿರುವ ಮಹಿಳೆಯರು ಇಲ್ಲಿ ವಸತಿ ಸೌಲಭ್ಯ ಪಡೆಯಬಹುದು.

ವಿದ್ಯಾಗಿರಿ ಜೆಎಸ್ ಎಸ್ ಸಂಸ್ಥೆ ಆವರಣ ಹಾಸ್ಟೇಲ್ ಮೊ.9880859813, ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದ ಆವರಣದ ಹಾಸ್ಟೇಲ್ ಮೊ.7259221775, ಹುಬ್ಬಳ್ಳಿ ಬೆಂಡಿಗೇರಿ ಓಣಿಯ ಮೂರು ಸಾವಿರ ಮಠ ಹಾಸ್ಟೇಲ್ ಮೊ.9448755471,9845527877, ಧಾರವಾಡ ಕರ್ನಾಟಕ ವಿ.ವಿ.ಆವರಣದ ಹಾಸ್ಟೆಲ್ ಮೊ.9448791137 ಸಂಪರ್ಕಿಸಿ ಪ್ರವೇಶ ಪಡೆಯಬಹುದು .

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *