ರಾಜ್ಯ

ಬಿ ಆರ್ ಟಿಎಸ್ ನಿಂದ ಬಲಾಢ್ಯರ ರಕ್ಷಣೆ, ಅಮಾಯಕರಿಗೆ ಹಿಂಸಿಸುವ ಕೆಲಸ

ಧಾರವಾಡ prajakiran.com : ಧಾರವಾಡದ ಗಾಂಧಿನಗರದಿಂದ ಜುಬ್ಲಿ ಸರ್ಕಲ್‌ವರೆಗೆ ಬಿಆರ್‌ಟಿಎಸ್ ಮಿಶ್ರಪಥಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದಲ್ಲಿನ ಕಟ್ಟಡಗಳನ್ನು ತೆರವುಗೊಳಿಸಲು ಹೊರಟಿರುವ ಸಂಸ್ಥೆಯ ಕಾರ್ಯಕ್ಕೆ ನಮ್ಮ ವಿರೋಧವಿದೆ ಎಂದು ರವಿ ಗಾವ್ಕಂರ್ ಹೇಳಿದರು.

ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಇದೇ ದಿ.೧೫.೩.೨೦೨೨ ರಿಂದ ಇಲ್ಲಿನ ಗಾಂಧಿನಗರದಿಂದ ಜುಬ್ಲಿ ಸರ್ಕಲ್‌ವರೆಗಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಲಾಗಿದೆ ಎಂದು ಪೋಲಿಸರ ನೆರವಿನೊಂದಿಗೆ ತೆರವುಗೊಳಿಸಲು ಬಿಆರ್‌ಟಿಎಸ್ ಸಿದ್ಧವಾಗಿದೆ.

ಗಾಂಧಿನಗರದಿಂದ ಜುಬ್ಲಿ ಸರ್ಕಲ್‌ವರೆಗಿನ ರಸ್ತೆಯ ಬದಿಯಲ್ಲಿರುವ ಕೆಲವು ಜನರಿಗೆ ಮಾತ್ರ ಪಾದಚಾರಿ ಮಾರ್ಗದಲ್ಲಿನ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ನೋಟೀಸು ನೀಡಲಾಗಿದೆ.

ಈ ಮೂಲಕ ಬಲಾಢ್ಯರನ್ನು ರಕ್ಷಿಸುವ ಹಾಗೂ ಅಮಾಯಕರನ್ನು ಹಿಂಸಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್ ಯೋಜನೆಗಾಗಿ ಸ್ವಾಧೀನ ಪಡಿಸಿಕೊಂಡ ಎರಡೂ ಬದಿಗಳಲ್ಲಿನ ಬಹುತೇಕ ಮನೆ/ ವಾಣಿಜ್ಯ ಕಟ್ಟಡ/ನಿವೇಶನಗಳು ಉಪಯೋಗಕ್ಕೆ ಬಾರದಂತಾಗಿವೆ.

ವಶಪಡಿಸಿಕೊಂಡ ಜಾಗೆಗೆ ಪ್ರಸಕ್ತ ಮಾರುಕಟ್ಟೆಯಲ್ಲಿನ ದರ ನಿಗದಿಪಡಿಸದೇ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಯಡಿ ಜಾಗೆ ಕಳೆದುಕೊಂಡ ಬಹುತೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಯೋಜನೆಯ ರಸ್ತೆಯಲ್ಲಿ ಖಾಸಗಿ ವಾಹನಗಳು ಮಾತ್ರವಲ್ಲದೇ ಬಿಆರ್‌ಟಿಎಸ್ ಸಂಸ್ಥೆಯ ಬಸ್‌ಗಳ ಸುಗಮ ಸಂಚಾರಕ್ಕೂ ಸುಲಭ ಮಾರ್ಗ ಇಲ್ಲದಂತಾಗಿದೆ.

ನೀರಿನ ಹರಿವಿಗೆ ಸೂಕ್ತ ಮಾರ್ಗಗಳಿಲ್ಲದ ಪರಿಣಾಮ ಮಳೆಗಾಲದಲ್ಲಿ ಬಿಆರ್‌ಟಿಎಸ್ ಮಾರ್ಗ ಸೇರಿದಂತೆ ಇಡೀ ರಸ್ತೆಯಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿ ಅಡಚಣಿ ಉಂಟಾಗುತ್ತಿದೆ.

ನಿರ್ಮಿಸಿರುವ ಪ್ಲೈ ಓವರ್‌ಗಳ ಕಾಮಗಾರಿ ಸರಿಯಾಗಿಲ್ಲ. ಇದರಿಂದ ವಾಹನ ಸವಾರರು/ ಪ್ರಯಾಣಿಕರು ಭೀತಿಯಲ್ಲಿಯೇ ಸಂಚರಿಸಬೇಕಾದ ಸಂದಿಗ್ಧತೆ ನಿರ್ಮಾಣವಾಗಿದೆ.

ಕೆಲವು ಕಡೆಗಳಲ್ಲಿ ಸಾರ್ವಜನಿಕರು ರಸ್ತೆ ದಾಟಲು ಅವಕಾಶ ಇಲ್ಲದ ಕಾರಣ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿವೆ.

ಒಟ್ಟಾರೆಯಾಗಿ ಹುಬ್ಬಳ್ಳಿ-ಧಾರವಾಡ ಮಧ್ಯೆದ ಈ ಬಿಆರ್‌ಟಿಎಸ್ ಯೋಜನೆಯ ಅವೈಜ್ಞಾನಿಕ ಕ್ರಮಗಳಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಆಗಿದೆ ಎಂದು ಕಿಡಿಕಾರಿದರು.

ಯೋಜನೆಯಡಿ ಈಗಾಗಲೇ ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಧಾರವಾಡ ಜ್ಯುಬಿಲಿ ಸರ್ಕಲ್‌ವರೆಗೆ ರಸ್ತೆ ಅಗಲೀಕಣ ಮತ್ತು ಅಭಿವೃದ್ಧಿ (ನಗರ ವ್ಯಾಪ್ತಿಯಲ್ಲಿ ೩೫ ಮೀ. ಅಗಲ, ಉಪನಗರ ವ್ಯಾಪ್ತಿಯಲ್ಲಿ ೪೪ ಮೀ. ಅಗಲ) ಕಾರ್ಯ ಅನುಷ್ಠಾನಗೊಳಿಸಲಾಗಿದೆ ಎಂದು ಬಿ.ಆರ್.ಟಿ.ಎಸ್ ಹೇಳಿದೆ.

ಆದರೆ, ಈ ರಸ್ತೆಯ ಅಳತೆಯು ಪಾದಚಾರಿ ಮಾರ್ಗವನ್ನು ಒಳಗೊಂಡಿದೆಯೋ ಇಲ್ಲವೋ ಎಂಬುದನ್ನು ಇದುವರೆಗೂ ಸ್ಪಷ್ಟಪಡಿಸಿಲ್ಲ.

ಈಗ್ಗೆ ೫ ವರ್ಷಗಳ ಹಿಂದೆ ಸಂಸ್ಥೆಯು ರಸ್ತೆ ನಿರ್ಮಾಣ ಪೂರ್ಣಗೊಳಿಸಿದ ನಂತರ ಪಾದಚಾರಿ ಮಾರ್ಗವನ್ನು ನಿರ್ಮಿಸಿತು.

ತದನಂತರ ಜಾಗೆಯ ಮಾಲಿಕರಾದ ನಾವು ಸಂಸ್ಥೆಯ ಅಧಿಕಾರಿಗಳ ಗಮನಕ್ಕೂ ತಂದು, ಪಾದಚಾರಿ ಮಾರ್ಗವನ್ನು ಬಿಟ್ಟು ನಮ್ಮ ಜಾಗೆಯಲ್ಲಿ ನಮ್ಮ ಕಟ್ಟಡ/ಮನೆ/ನಿವೇಶನಗಳನ್ನು ಅಪಾರ ಪ್ರಮಾಣದ ಹಣ ಖರ್ಚು ಮಾಡಿ ನವೀಕರಿಸಿಕೊಂಡಿದ್ದೇವೆ.

ಆದರೆ, ಈಗ ಸಂಸ್ಥೆಯು ರಸ್ತೆಯ ಅಗಲೀಕರಣದ ಅಳತೆಯನ್ನೇ ತಿರುಚಿ, ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಲಾಗಿದೆ ಎಂದು ತೆರವುಗೊಳಿಸಲು ಹೊರಟಿದೆ ಎಂದರು.

ಯೋಜನೆಯ ಅನುಷ್ಠಾನದ ಪೂರ್ವದಲ್ಲಿ ಸ್ಪಷ್ಟತೆ ಇಲ್ಲದ ಸಂಸ್ಥೆಯ ಅಧಿಕಾರಿಗಳು ಈಗ ಪಾದಚಾರಿ ಮಾರ್ಗವನ್ನು ತೆರವುಗೊಳಿಸಲು ಮುಂದಾಗಿರುವುದು ಏಕೆ ? ಎಂದು ಪ್ರಶ್ನಿಸಿದರು.

ರಸ್ತೆ ಮತ್ತು ಪಾದಾಚಾರಿ ಮಾರ್ಗದ ಅಳತೆಯ ವಿಷಯದಲ್ಲಿ ಸಾರ್ವಜನಿಕರಿಗೆ ಸಂಪೂರ್ಣ ಅರಿವಿದೆ. ಆದರೆ ಸಂಸ್ಥೆಯ ಅಧಿಕಾರಿಗಳು ಕಾಲಕಾಲಕ್ಕೆ ಕೆಲವು ತಪ್ಪು ತೀರ್ಮಾನಗಳನ್ನು ಕೈಕೊಂಡು ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ನಾವು ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಇದುವರೆಗೂ ಸಹಕಾರ ನೀಡುತ್ತ ಬಂದಿದ್ದೇವೆ. ಆದ್ದರಿಂದ, ಸಂಸ್ಥೆಯವರು ಇನ್ನೊಮ್ಮೆ ಸರಿಯಾಗಿ ಮೋಜಣೀ ಮಾಡಿಸಿ ರಸ್ತೆ ಮತ್ತು ಪಾದಚಾರಿ ಮಾರ್ಗದ ಅಳತೆಯನ್ನು ನಿಗದಿಪಡಿಸಬೇಕು.

ಜೊತೆಗೆ ಸಂಸ್ಥೆಯ ಅಧಿಕಾರಿಗಳು ಈ ವಿಷಯದಲ್ಲಿ ಅವಸರ ಮಾಡದೇ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಲೋಚನೆ ನಡೆಸಿ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು.

ಗಾಂಧಿನಗರದಿಂದ ಜ್ಯುಬಿಲಿ ಸರ್ಕಲ್‌ವರೆಗೆ ಒಟ್ಟು ೯೭ (ಮನೆ/ ವಾಣಿಜ್ಯ ಕಟ್ಟಡ/ನಿವೇಶನಗಳ ಮಾಲಿಕರು) ಜನರು ಜಾಗೆ ಸ್ವಾಧೀನದಿಂದ ಬಹಳಷ್ಟು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದೇವೆ.

ಮನೆಗಳಿಗೆ ಹೋಗಲು ಸರಿಯಾದ ದಾರಿ ಇಲ್ಲದಂತಾಗಿ ಜೀವನ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ನಮಗೆ ಆಗುತ್ತಿರುವ ತೊಂದರೆಗಳನ್ನು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ.

ನಮಗೆ ಆಗುತ್ತಿರುವ ಅನ್ಯಾಯ ಮತ್ತೇ ಮುಂದುವರೆದರೆ ನಾವು ಮಾನ್ಯ ಪ್ರಧಾನ ಮಂತ್ರಿಗಳ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅನಿಲ ಮಂಜನಬೈಲ್, ಚಂದ್ರಶೇಖರ ಪುರಾಣಿಕ ರವಿಕುಮಾರ ರಾವ್

ಬಿ.ಎಂ.ವೆಂಕಟೇಶ ಅಶ್ವಿನ ಕೊಪ್ಪಿಕರ
ಹೇಮಾ ಮುದರಡ್ಡಿ ವಾದಿರಾಜ್ ರಾವ್ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *