ರಾಜ್ಯ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎದುರು ನೂರಾರು ರೈತರ ಪ್ರತಿಭಟನೆ

ಧಾರವಾಡ prajakiran.com : ಭೂಮಿ ಕಳೆದುಕೊಂಡ ರೈತ ಕುಟುಂಬಕ್ಕೆ ಖಾಯಂ ಉದ್ಯೋಗ ಕೊಡುವಂತೆ ಆಗ್ರಹಿಸಿ ಕರ್ನಾಟಕ ಭೂಮಿ ಕಳೆದುಕೊಂಡ ರೈತರ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ತಮ್ಮ ಪೂರ್ವಜರಿಂದ ಬಂದ ಬೆಲೆ ಬಾಳುವ ಜಮೀನುಗಳನ್ನು ಸರಕಾರ ನಿಗದಿಪಡಿಸಿದ ಬೆಲೆಗೆ ನೀಡಿರುವ ರೈತರು ತ್ಯಾಗ ಮಾಡಿದ್ದಾರೆ.

ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ನಂತರ ವಂಚಿಸಲಾಗಿದೆ.

ಇದರಿಂದ ರೈತರು ಬೀದಿಗೆ ಬೀಳುವಂತಾಗಿದೆ. ಸರಕಾರ ಮತ್ತು ಆಡಳಿತ ಮಂಡಳಿ ಕೂಡಲೇ ಈ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಕೊರವರ ಎಚ್ಚರಿಸಿದರು.

೧೯೪೬ ರಿಂದ ಇಲ್ಲಿಯವರೆಗೂ ತಾಲೂಕಿನ ನರೇಂದ್ರ, ಎತ್ತಿನಗುಡ್ಡ ಮತ್ತು ಮುಮ್ಮಿಗಟ್ಟಿ ಗ್ರಾಮದ ರೈತರು ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕೆ, ಕೃಷಿ ವಿಶ್ವವಿದ್ಯಾಲಯ ಇನ್ನಿತರ ಉದ್ದೇಶಗಳಿಗೆ ನೀಡಿದ್ದಾರೆ.

ಭೂಸ್ವಾಧೀನದ ಸಂದರ್ಭದಲ್ಲಿ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಒದಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು.

ಆದರೆ. ಇದುವರೆಗೂ ಯಾವುದೇ ರೈತ ಕುಟುಂಬಕ್ಕೆ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸದೇ ಅನ್ಯಾಯ ಮಾಡಲಾಗಿದೆ.

ಆದಾಗ್ಯೂ ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ ಆಗಲಿ ಎಂದು ಭೂಮಿ ನೀಡಿದ್ದಾರೆ. ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡದೆ ವಂಚಿಸಿದ್ದು ಒಂದು ಕಡೆಯಾದರೆ, ಕೃಷಿ ವಿಶ್ವವಿದ್ಯಾಲಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅವ್ಯವಹಾರ ಎಸಗಲಾಗಿದೆ.

ಆದಾಗ್ಯೂ ಕೃವಿವಿ ಕುಲಪತಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ.

ಆದ್ದರಿಂದ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿ ಕುಟುಂಬಕ್ಕೆ ಉದ್ಯೋಗ ಒದಗಿಸುವ ಮೂಲಕ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು, ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೃವಿವಿ ಆಡಳಿತ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ ಮತ್ತು ಅಧಿಕಾರಿಗಳು ಇದ್ದರು.

ಕರ್ನಾಟಕ ಭೂಮಿ ಕಳೆದುಕೊಂಡ ರೈತರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರೆಪ್ಪ ವಾಲೀಕಾರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಾಣಿಗೇರ, ಖಜಾಂಚಿ ಈರಪ್ಪ ತೇಗೂರ, ಮಡಿವಾಳಪ್ಪ ಗಾಳಿ, ಸೋಮಯ್ಯ ಪೂಜಾರ, ರಾಮಣ್ಣ ವಾಲೀಕಾರ, ಮಹಾದೇವ ಹೊಸಕೇರಿ, ಮಲ್ಲವ್ವ ತಳವಾರ, ದುಂಡಪ್ಪ ಗುಮ್ಮಗೋಳ ಮತ್ತಿತರರು ಮನವಿ ಸಲ್ಲಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *