ಬೆಂಗಳೂರು prajakiran.com : ರಾಜ್ಯದ ರಾಜಧಾನಿಯಲ್ಲಿ ಕರೋನಾಅಟ್ಟಹಾಸ ಮುಂದುವರೆದಿದ್ದು, ಬೆಂಗಳೂರಿನ ಜನತೆ ಬದುಕುಳಿಯಬೇಕಾದರೆ ತಕ್ಷಣವೇ ಕನಿಷ್ಟ 20 ದಿನವಾದರೂ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಈ ಸಲಹೆ ನೀಡಿದ್ದಾರೆ.
ಕೆಲವೇ ಪ್ರದೇಶಗಳನ್ನು ಲಾಕ್ ಡೌನ್ ಅಥವಾ ಸೀಲ್ ಡೌನ್ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ತಕ್ಷಣವೇ ಲಾಕ್ ಡೌನ್ ಮಾಡಿ ಇಲ್ಲವಾದರೇ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯ ಹೊರತು ಆರ್ಥಿಕತೆಯಲ್ಲ ಎಂದು ಸಲಹೆ ನೀಡಿದ್ದಾರೆ.
ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡಬೇಕು.
ಚಾಲಕರು, ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ಧಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಬರೀ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು. ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ಯಾಕೇಜ್ ಘೋಷಣೆ ಮಾಡಿ, ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು ಎಂದು ರಾಜ್ಯ ಸರ್ಕಾರದ ಕೋವಿಡ್-19 ವಿಶೇಷ ಪ್ಯಾಕೇಜ್ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.