ರಾಜ್ಯ

ಸ್ಮಶಾನ ಕಾರ್ಮಿಕರ ಸೇವೆ ಖಾಯಂ ಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸ್ಮಶಾನ ಕಾರ್ಮಿಕರು ಇನ್ನು ಸತ್ಯ ಹರಿಶ್ಚಂದ್ರ ಬಳಗ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ಪ್ರಜಾಕಿರಣ.ಕಾಮ್ ಜ. 11 :
ಪೌರಕಾರ್ಮಿಕರ ಮಾದರಿಯಲ್ಲಿ 130 ಸ್ಮಶಾನ ಕಾರ್ಮಿಕರಿಗೆ ನೇಮಕ ಮಾಡಿಕೊಂಡಿದ್ದು, ರಾಜ್ಯದ ಇತರ ಜಿಲ್ಲೆಗಳಲ್ಲಿರುವ 300 ಜನರ ಸ್ಮಶಾನ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ತಮ್ಮ ರೇಸ್ ಕೋರ್ಸ್ ರಸ್ತೆಯ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರೊಂದಿಗೆ ಬೆಳಗಿನ ಉಪಾಹಾರ ಸ್ವೀಕರಿಸಿದರು.

ತಮ್ಮ ಈ ಕ್ರಮದ ಹಿನ್ನೆಲೆಯನ್ನು ಕುರಿತು ವಿವರಿಸಿದ ಮುಖ್ಯಮಂತ್ರಿಯವರು, ‘ನಾನು ಒಂದು ಕಾರ್ಯಕ್ರಮಕ್ಕೆ ಹೋದಾಗ ಭೇಟಿಯಾದ ಸ್ಮಶಾನ ಕಾರ್ಮಿಕನ ಪರಿಸ್ಥಿತಿಯನ್ನು ತಿಳಿದುಕೊಂಡೆ. ಆಗಲೇ ಸ್ಮಶಾನ ಕಾರ್ಮಿಕರಿಗೆ ಏನಾದರೂ ಮಾಡಬೇಕೆಂದು ಅಧಿಕಾರಿಗಳ ಜೊತೆ ಚರ್ಚಿಸಿ, 130 ಜನರಿಗೆ ಪೌರ ಕಾರ್ಮಿಕರ ರೀತಿಯಲ್ಲಿ ನೇಮಕ ಮಾಡಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 300 ಜನ ಇದ್ದಾರೆ. ಅವರನ್ನೂ ಖಾಯಂ ಮಾಡುವ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

*ಸ್ಪಂದನಾಶೀಲ ಸರ್ಕಾರ*
ಇದುವರೆಗೂ ಇವರನ್ನು ಯಾರೂ ಗಮನಿಸಿಲ್ಲ. ವ್ಯವಸ್ಥೆಯೇ ಇವರನ್ನು ತಿರುಗಿ ನೋಡಿಲ್ಲ. ರಾಜ್ಯ ಆಳುವವರಾಗಲಿ, ಅಧಿಕಾರಿಗಳಾಗಲಿ ಇವರನ್ನು ಗಮನಿಸಿಯೂ ಇಲ್ಲ. ಇವರೂ ನಮ್ಮ ಬದುಕು ಇಷ್ಟೆ ಎಂದು ನಂಬಿಕೊಂಡು ಬಂದಿದ್ದಾರೆ. ಈ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವ ನಿರ್ಣಯ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಜನರಿಂದ ಆಯ್ಕೆಯಾಗುತ್ತೇವೆಯೋ ಅವರಿಗೆ ಸಂವೇದನಾಶೀಲವಾಗಿರಬೇಕೆಂಬ ಸರ್ಕಾರ ಬಂದರೆ, ಜನಪರ ಸರ್ಕಾರ ಇದ್ದಾಗ ಮಾತ್ರ ಈ ರೀತಿಯ ಆಲೋಚನೆ ಮಾಡಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ 30 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 40 ಸಾವಿರಕ್ಕಿಂತ ಹೆಚ್ಚು ಪೌರ ಕಾರ್ಮಿಕರ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹನ್ನೊಂದು ಸಾವಿರ ಜನ ಮೊದಲ ಹಂತದಲ್ಲಿ ಖಾಯಂ ಮಾಡಲಾಗಿದೆ. ಇನ್ನೂ 2 ಹಂತಗಳಲ್ಲಿ ಎಲ್ಲರನ್ನೂ ಖಾಯಂ ಗೊಳಿಸಲಾಗುವುದು.ಈ ಕ್ರಮ ಕೈಗೊಂಡಾಗ ಅನೇಕ ಕಾನೂನು ತೊಡಕುಗಳು ಬಂದವು.ಬಹಳ ಚರ್ಚೆಯೂ ಆಯಿತು. ಇಂಥ ನಿರ್ಣಯ ಮಾಡಿದಾಗ ಪರ, ವಿರೋಧ ಟೀಕೆ ಟಿಪ್ಪಣಿ ಇರುತ್ತದೆ. ಹೊಸ ಕಾನೂನು ರೂಪಿಸಿ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ನಗರದ ಹೊಲಸು ತೆಗೆದು ನಾಗರೀಕ ಬದುಕು ಬದುಕಲು ಅವರೇ ಕಾರಣ. ನಮ್ಮ ನಿರ್ಧಾರಗಳು ಮಾನವೀಯತೆಯಿಂದ ಇದ್ದಾಗ ಅಂತಿಮವಾಗಿ ಜಯ ಸಿಗುತ್ತದೆ ಎಂದರು.

*ಸಮಸ್ಯೆಗೆ ಪರಿಹಾರ ನೀಡುವ ಸರ್ಕಾರ*
ಬದ್ಧತೆ, ಬಡವರ ಬಗ್ಗೆ ಕಳಕಳಿ, ಅವರ ಸಮಸ್ಯೆಗೆ ಪರಿಹಾರ ನೀಡುವ ಸರ್ಕಾರ ನಮ್ಮದು.
ತಳಸಮುದಾಯಗಳ ವಿಚಾರದಲ್ಲಿ ಹತ್ತು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

*ಸತ್ತ ಮೇಲೆ ನಾವು ಭೂಮಿಗೆ ಸೇರಿದವರು*
ಸ್ಮಶಾನ ಕಾರ್ಮಿಕರು ನಮಗೆ ಮುಕ್ತಿ ನೀಡುವ ಕೆಲಸ ಮಾಡುತ್ತಾರೆ. ಬದುಕುವುದು ಎಷ್ಟು ಮುಖ್ಯವೋ. ನಮ್ಮ ಸಾವು ಹೇಗೆ ಅಂತಿಮಗೊಳ್ಳುತ್ತದೆ ಎನ್ನುವುದೂ ಅಷ್ಟೇ ಮುಖ್ಯ. ಬದುಕಿದ್ದಾಗ ಅಷ್ಟೇ ನಮ್ಮ ಭೂಮಿ ಎನ್ನುತ್ತೇವೆ. ಸತ್ತ ಮೇಲೇ ನಾವು ಭೂಮಿಗೆ ಸೇರಿದವರು ಎಂದರು.

*ಗೌರವ ನೀಡಬೇಕು*

ಇವರನ್ನು ಸತ್ಯ ಹರಿಶ್ಚಂದ್ರನ ಬಳಗ
ಎಂದು ಕರೆಯಬೇಕು. ಪೌರಕಾರ್ಮಿಕರನ್ನು ಪೌರ ನೌಕರರು ಎನ್ನಬೇಕು. ಅವರಿಗೆ ಗೌರವವನ್ನು ಸೂಚಿಸಬೇಕು. ಇನ್ನಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆರೋಗ್ಯ, ಶಿಕ್ಷಣಕ್ಕೆ ಸೌಲಭ್ಯಗಳು ದೊರೆಯಲಿದೆ ಎಂದರು.

*ಚಿತಾಗಾರಗಳ ಹೆಚ್ಚಳಕ್ಕೆ ಕ್ರಮ*
ಕೋವಿಡ್ ಸಂದರ್ಭದಲ್ಲಿ ಚಿತಾಗಾರಗಳ ಮುಂದೆ ಸರತಿ ಸಾಲು ನಿಂತದ್ದು ಕಂಡು ಅಂದಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿಗೆ ವಿದ್ಯುತ್ ಚಿತಾಗಾರವನ್ನು ಹೆಚ್ಚಿಸುವುದಾಗಿ ತಿಳಿಸಿದ್ದರು. ಈ ವರ್ಷದ ಬಜೆಟ್ ನಲ್ಲಿ ಚಿತಾಗಾರ ವ್ಯವಸ್ಥೆಯನ್ನು ಹೆಚ್ವಿಸಲು ಕ್ರಮ ಜರುಗಿಸಲಾಗುವುದು ಎಂದರು.

*ಸತ್ಯ ಹರಿಶ್ಚಂದ್ರನ ಪ್ರತಿಮೆಯ ಉಡುಗೊರೆ*
ಸ್ಮಶಾನ ಕಾರ್ಮಿಕರು ನೀಡಿದ ಸತ್ಯ ಹರಿಶ್ಚಂದ್ರನ ಪ್ರತಿಮೆಯನ್ನು ನೋಡಿ ಭಾವುಕರಾದ ಮುಖ್ಯಮಂತ್ರಿಗಳು, ನನಗೆ ಇದುವರೆಗೆ ಸಾಕಷ್ಟು ಫಲಕಗಳು ಬಂದಿವೆ.ಇದುವರೆಗೂ ಯಾರೂ ಸತ್ಯ ಹರಿಶ್ಚಂದ್ರ ನ ಪ್ರತಿಮೆ ನೀಡಿರಲಿಲ್ಲ. ಇದು ಮನಸಿಗೆ ಅತ್ಯಂತ ಹತ್ತಿರವಾದ ಸ್ಮರಣಿಕೆ. ನಾನು ಇದನ್ನು ನಾನು ಪ್ರತಿ ದಿನ ಪೂಜಿಸುವ ಸ್ಥಳದಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹಾಗೂ ಮತ್ತಿತರರು ಹಾಜರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *