ರಾಜ್ಯ

ಜ.24 ರಿಂದ ಧಾರವಾಡ, ಹುಬ್ಬಳ್ಳಿ ತಾಲೂಕಿನಾದ್ಯಂತ ಶಾಲೆಗಳ ಪುನರ್ ಆರಂಭಿಸಲು ಆದೇಶ

ಧಾರವಾಡ prajakiran.com ಜ.22: ಸರ್ಕಾರದ ಪರಿಷಕೃತ ಆದೇಶದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ 3 ರಿಂದ 5 ಪಾಸಿಟಿವ್ ಪ್ರಕರಣಗಳು ಬಂದರೆ 3 ದಿನ, 6 ರಿಂದ 20 ಪಾಸಿಟಿವ್ ಪ್ರಕರಣಗಳು ಬಂದರೆ 5 ದಿನ, 20 ಕ್ಕಿಂತ ಹೆಚ್ಚು ಪ್ರಕರಣಗಳು ಬಂದರೆ 7 ದಿನ, ಹೀಗೆ ಪ್ರಕರಣಗಳು ದಾಖಲಾದರೆ ಶಾಲೆ, ಕಾಲೇಜನ್ನು ತಕ್ಷಣ ಕ್ಲಸ್ಟರ್ ಎಂದು ಪರಿಗಣಿಸಿ ಅಂತಹ ಶಾಲಾ, ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಎಂದು ಘೋಷಿಸಲು ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಳಿದಂತೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಪ್ರಾಂಶುಪಾಲರಿಗೆ ಸೂಚಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಜನೆವರಿ 12 ರಂದು ಧಾರವಾಡ ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲ್ಲೂಕಿನಾದಾದ್ಯಂತ 1 ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ದಿನಾಂಕ 13-01-2022 ರಿಂದ ಮುಂದಿನ ಆದೇಶವಾಗುವವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶಿಸಿರುವದನ್ನು ಹಿಂಪಡೆಯಲಾಗಿದೆ.

ಜನೆವರಿ 24 ರ ಸೋಮವಾರದಿಂದ ಶಾಲೆಗಳನ್ನು ಪುನರ್ ಆರಂಭಿಸಲು ಅವರು ನಿರ್ದೇಶಿಸಿದ್ದಾರೆ.

ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ರನ್ವಯ ಜಿಲ್ಲೆಯ ಎಲ್ಲ ರೀತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವ್ಯಾಪ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನಾಗಿ ನೇಮಿಸಿ ಆದೇಶಿಸಿದ್ದು, ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

*ಶಾಲಾ, ಕಾಲೇಜುಗಳ ಮುಖ್ಯಸ್ಥರು ಪಾಲಿಸಬೇಕಾದ ನಿಯಮಗಳು:*

• ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಮತ್ತು ಪುನರ್ ಆರಂಭಿಸುವ ಕುರಿತು ನಿಯಮಿತವಾಗಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು.
• ರಜೆ ಘೋಷಿಸಿದ ಅವಧಿಯಲ್ಲಿ ಶಾಲಾ, ಕಾಲೇಜು ಆವರಣವನ್ನು ಶ್ಯಾನಿಟೈಜ್ ಮಾಡಬೇಕು.
• ಸೋಂಕಿತ ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಗತಿ ಬಗ್ಗೆ ದಿನಂಪ್ರತಿ ವಿಚಾರಿಸುವುದು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು.
• ವಿದ್ಯಾರ್ಥಿಗಳಿಗೆ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ತಿಳುವಳಿಕೆಯನ್ನು ನೀಡುವುದು.
• ಸರ್ಕಾರದ ಮಾರ್ಗಸೂಚಿಗಳನ್ವಯ ಅರ್ಹ ವಿದ್ಯಾರ್ಥಿಗಳಿಗೆ ಲಸಿಕಾಕರಣ ಕುರಿತು ಕ್ರಮ ಕೈಕೊಳ್ಳುವುದು.
• ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಸೋಂಕಿತ ವಿದ್ಯಾರ್ಥಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಗಂಟಲು ದ್ರವ ತಪಾಸಣೆ ಕುರಿತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ವಹಿಸುವುದು.
• ರಜೆ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಪಾಸಿಟಿವ್ ಪ್ರಕರಣಗಳ ಮಾಹಿತಿಯನ್ನು ಪಡೆದು ರಜೆಯನ್ನು ಮುಂದುವರೆಸುವ ಬಗ್ಗೆ ಅಥವಾ ಶಾಲೆಯನ್ನು ಪುನರ್ ಆರಂಭಿಸುವ ಬಗ್ಗೆ ನೋಡಲ್ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ನೋಡೆಲ್ ಅಧಿಕಾರಿಗಳಿಗೆ ಈ ವಿಷಯದಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.

ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ, ಸಮನ್ವಯತೆಯೊಂದಿಗೆ ಅವರಿಗೆ ವಹಿಸಿಕೊಟ್ಟ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು.

ತಪ್ಪಿದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಸ್‍ನ್ 56ರನ್ನು ಆದೇಶದಲ್ಲಿ ಪುನರ್ ಉಚ್ಚರಿಸಿ, ಆದೇಶದಲ್ಲಿ ತಿಳಿಸಿದ್ದಾರೆ.

*ಶಾಲೆ ಒಂದು ಘಟಕವಾಗಿ ಪರಿಗಣನೆ:* ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಓಮೇಕ್ರಾನ್ ವೈರಾಣು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಜನೆವರಿ 11 ರಂದು ಮಾರ್ಗಸೂಚಿಗಳನ್ನು ಹೊರಡಿಸಿ ತಾಲೂಕನ್ನು ಒಂದು ಘಟಕವೆಂದು ಪರಿಗಣಿಸಿ ಶಾಲೆಗಳನ್ನು ಸ್ಥಗಿತಗೊಳ್ಳಿಸುವ ಅಥವಾ ನಡೆಸುವ ಬಗ್ಗೆ ತಿರ್ಮಾನಿಸಲು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದ ಆದೇಶವನ್ನು ಪರಿಷ್ಕರಿಸಿ, ಜನೆವರಿ 21 ರಂದು ಹೊಸ ಮಾರ್ಗಸೂಚಿಯನ್ನು ನೀಡಿದೆ.

ಅದರಂತೆ ಒಂದು ತಾಲೂಕನ್ನು ಘಟಕವೆಂದು ಪರಿಗಣಿಸಿರುವುದನ್ನು ಮಾರ್ಪಡಿಸಿ, ಪ್ರಾಥಮಿಕ ಮತ್ತು ಪ್ರೌಢ್ ಶಾಲೆಯನ್ನು ಘಟಕವೆಂದು ಪರಿಗಣಿಸಿ ಅಂತಹ ಶಾಲೆ, ಕಾಲೇಜುಗಳನ್ನು ಮಾತ್ರ ಮುಚ್ಚುವ ಅಥವಾ ನಡೆಸುವ ಬಗ್ಗೆ ನಿರ್ನಯ ತೆಗೆದುಕೊಳ್ಳುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟೀಕರಣ ಹೊರಡಿಸಿದ್ದಾರೆ.

*ಕೋವಿಡ್ ಕಾರಣದಿಂದ ಮುಚ್ಚಿರುವ ಶಾಲೆಗಳು:* ಈಗಾಗಲೇ ಕೋವಿಡ್ ಸೋಂಕಿತರ ಪ್ರಕರಣಗಳು ದಾಖಲಾಗಿರುವ ಶಾಲೆಗಳನ್ನು ಅಲ್ಲಿನ ಕೋವಿಡ್ ಸಂಖ್ಯೆಗಳಿಗೆ ಅನುಗುಣವಾಗಿ 3, 5 ಮತ್ತು 7 ದಿನಗಳ ವರೆಗೆ ಮುಚ್ಚಲಾಗುತ್ತದೆ. ಸೀಲ್‍ಡೌನ್ ಅವಧಿ ಮುಗಿದ ನಂತರ, ಶ್ಯಾನಿಟೈಜ್ ಮಾಡಿ ಸ್ವಚ್ಚಗೊಳಿಸಿ ಶಾಲೆಗಳನ್ನು ಮರು ಆರಂಭಿಸಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *