ರಾಜ್ಯ

ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಸ್ಥಾಪನೆ

ಕಬ್ಬು, ಗೋವಿನ ಜೋಳ, ಭತ್ತ ಬೆಳೆಯುವ ರೈತರಿಗೆ ಆರ್ಥಿಕ ಸಬಲತೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ prajakiran.com , ಫೆ. 13 :

ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಸ್ಥಾಪನೆ, ಕಬ್ಬು, ಗೋವಿನ ಜೋಳ, ಭತ್ತ ಬೆಳೆಯುವ ರೈತರ ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಡಿಸ್ಟಲರಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರೈತರ ಉತ್ಪಾದಿಸುವ ಬೆಳೆಗಳು ಸಂಸ್ಕರಣೆ ನಂತರ ಮೌಲ್ಯ ವೃದ್ಧಿಯಾದಾಗ ಮಾತ್ರ ರೈತನಿಗೆ ಒಳ್ಳೆಯ ಬೆಲೆ ಸಿಗುತ್ತದೆ.

ಕೋಣನಕೆರೆಯಿಂದ ತಡಸವರೆಗೂ ಸುಮಾರು 15000 ಕಬ್ಬು ಬೆಳೆಯ ಪ್ರದೇಶ ನಿರ್ಮಾಣವಾಗಿದ್ದು, ರೈತರ ಕಬ್ಬು ಬೆಳೆಗೆ ಉತ್ತಮ ಬೆಲೆ ಸಿಕ್ಕು, ಅವರ ಬದುಕೂ ಕೂಡ ಆರ್ಥಿಕ ಸಬಲತೆ ಕಾಣಲು ವಿಐಎನ್ಪಿ ಸಕ್ಕರೆ ಕಾರ್ಖಾನೆಯಿಂದ ಸಹಕಾರ ನೀಡಲಿರುವ ಭರವಸೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

*ಎಥನಾಲ್ ನೀತಿ :*
ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆ, ಆರ್ಥಿಕ ಚಟುವಟಿಕೆ, ರೈತರ ಹಿತರಕ್ಷಣೆಯ ಗುರಿಯನ್ನಿರಿಸಿಕೊಂಡು ಎಥನಾಲ್ ನೀತಿಯನ್ನು ರೂಪಿಸಿದೆ.

ಕರ್ನಾಟಕ ಎಥನಾಲ್ ಪಾಲಿಸಿಯಿಂದ ಹೆಚ್ಚಿನ ಲಾಭ ಪಡೆಯುವ ಹಾದಿಯಲ್ಲಿದ್ದು, ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ಘಟಕವನ್ನು ಸ್ಥಾಪಿಸಲಾಗಿದೆ.

ಕಾರ್ಖಾನೆಯಲ್ಲಿ ಕಬ್ಬು,ಗೋವಿನ ಜೋಳ, ಭತ್ತದಿಂದಲೂ ಎಥನಾಲ್ ತಯಾರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

*ಸ್ಥಳೀಯರಿಗೆ ಉದ್ಯೋಗಾವಕಾಶ:*
ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯಯುವಕರಿಗೆ ಉದ್ಯೋಗವಕಾಶ ದೊರೆಯುವಂತಾಗಬೇಕು.

ಕಾರ್ಖಾನೆಯು ಸ್ಥಳೀಯ ಜನರಿಗೆ, ರೈತರಿಗೆ ಹಾಗೂ ಯುವಕರಿಗೆ ಲಾಭವನ್ನುಂಟುಮಾಡಲಿ ಎಂದು ಶುಭ ಹಾರೈಸಿದರು.

*ಶಿಗ್ಗಾಂವಿ ಕ್ಷೇತ್ರದ ಸಮಗ್ರ ಅಭಿವೃದ್ಧಿ :*
ಶಿಗ್ಗಾಂವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಮೂಲಭೂತ ಸೌಕರ್ಯ,ಕೈಗಾರಿಕೆಗಳ ಅಭಿವೃದ್ಧಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇಲ್ಲಿ ಗಾರ್ಮೆಂಟ್ಸ್, ಟೆಕ್ಸ್ ಟೈಲ್ ಕಾರ್ಖಾನೆ ಬರಲಿದೆ. ಬೆಂಗಳೂರು ನಗರಕ್ಕೇ ಮೀಸಲಾಗಿರುವ ಕೆಲವೊಂದು ಕಾರ್ಖಾನೆಗಳನ್ನು ಉತ್ತರ ಕರ್ನಾಟಕಕ್ಕೆ ತರುವ ಚಿಂತನೆಯಿಂದ ‘ಬಿಯಾಂಡ್ ಬೆಂಗಳೂರು’ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯುವಕರ ಭವಿಷ್ಯ ಉಜ್ವಲವಾಗಿ ಸ್ವಾಭಿಮಾನದಿಂದ ಬದುಕಲು ಈ ಎಲ್ಲಾ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದೆ.

ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವರದಾ ನದಿಯಿಂದ ಕೋಣನಕೆರೆ,ತಡಸದವರೆಗೂ ನೀರು ಹರಿಸಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗಿದೆ. ಸವಣೂರು, ಬ್ಯಾಡಗಿ, ಹಾನಗಲ್ ನಲ್ಲಿ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

*ಕೆಎಂಎಫ್ ಘಟಕ :*
ಹಾವೇರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿರುವುದರಿಂದ ಪ್ರತ್ಯೇಕ ಕೆಎಂಎಫ್ ಘಟಕದ ಬೇಡಿಕೆ ಇತ್ತು.

ರೈತರು, ಕಾರ್ಮಿಕರು, ದುಡಿಯುವ ವರ್ಗಗಳ ಬದುಕು ಹಸನಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಕೆಎಂಎಫ್ ಘಟಕ ಸ್ಥಾಪನೆಗೆ 30 ಕೋಟಿ ರೂ. ಮಂಜೂರು ಮಾಡಲಾಗಿದ್ದು, 20 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶಾಸಕ ನೆಹರೂ ಓಲೇಕಾರ್, ಸಕ್ಕರೆ ಕಾರ್ಖಾನೆ ಮುಖ್ಯಸ್ಥ ವಿವೇಕ ಹೆಬ್ಬಾರ, ಮತ್ತು ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *