ರಾಜ್ಯ

ಧಾರವಾಡದ ಮುರುಘಾಮಠದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಮೃತ್ಯುಂಜಯ-ಮಹಾಂತ ಪ್ರಶಸ್ತಿ

ವಿದ್ಯಾರ್ಥಿ ನಿಲಯಗಳನ್ನು ಮರು ನಿರ್ಮಾಣಕ್ಕೆ ಅನುದಾನ : ಮುಖ್ಯ ಮಂತ್ರಿಗಳ ಭರವಸೆ

ಧಾರವಾಡ ಪ್ರಜಾಕಿರಣ.ಕಾಮ್, ಜ. 25: ಧಾರವಾಡದ ಮುರುಘಾ ಮಠದ ಅಭಿವೃದ್ಧಿಗಾಗಿ ಈ ವರ್ಷ ಈಗಾಗಲೇ 3 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇಲ್ಲಿನ ವಿದ್ಯಾರ್ಥಿ ನಿಲಯಗಳನ್ನು ಮರು ನಿರ್ಮಾಣ ಮಾಡಬೇಕಿದೆ. ಅದಕ್ಕೂ ಅಗತ್ಯ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಧಾರವಾಡದ ಮುರುಘಾ ಮಠದಲ್ಲಿ ಇಂದು ಶ್ರೀ ಮೃತ್ಯುಂಜಯ- ಮಹಾಂತ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಪಶುಪತಿಹಾಳ ಮಠಕ್ಕೆ ಒಂದು ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನ ಮಾಡಲಾಗಿದೆ ಎಂದರು.

*ಮಠ ಖ್ಯಾತಿ ವಿಸ್ತರಿಸಬೇಕು*
ದೇವರು ಹಾಗೂ ಗುರುಗಳಲ್ಲಿ‌ ನಾವು ಕರಗಬೇಕು. ಕರಗಿ ಲೀನನಾದರೆ ಗುರುವಿನ ಹಾಗೂ ದೇವರ ಆಶೀರ್ವಾದ ಸಿಗುತ್ತದೆ. ಮಹಾಂತಪ್ಪನವರ ಪ್ರೇರಣೆ ಸದಾ ಇರಬೇಕು. ಈ ಮಠ ಖ್ಯಾತಿ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕು.

125 ವರ್ಷಗಳ ಸೇವೆಯ ನಂತರ ಇಡೀ ಭಾರತದಲ್ಲಿ ಪ್ರಖ್ಯಾತಪಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

*ಸಮ ಸಮಾಜ ನಿರ್ಮಾಣ*

ಈ ದೇಶದಲ್ಲಿ ಜಾತಿ ಮತಗಳ ಸಂಘರ್ಷವಿದೆ. ಬೇಕಾಗಿರುವುದು ಸಮನ್ವಯ. ಎಲ್ಲಾ ಧರ್ಮಗಳು ಮಾನವನ ಒಳಿತಿಗಾಗಿವೆ.

ಕೆಲವರು ಧರ್ಮದ ಹೆಸರಿನಲ್ಲಿ ಅನಾಚಾರ, ಭಯೋತ್ಪಾದನೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಧರ್ಮ ಅದಕ್ಕೆ ಅವಕಾಶ ನೀಡುವುದಿಲ್ಲ.

ಎಲ್ಲ ಜಾತಿ ಮತಗಳು ಒಂದೆ ಎಂದು ಭಾವಿಸಿದರೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.‌ ಈ ನಿಟ್ಟಿನಲ್ಲಿ ಬಸವಣ್ಣನವರು ಅಸಮಾನತೆಯನ್ನು, ಮೂಢನಂಬಿಕೆ ಯನ್ನು ದೂರ ಮಾಡಿದರು.

ಸಮಾನತೆಯ ಸಮಾಜ ನಿರ್ಮಾಣ ಮಾಡಲು ಹೋರಾಟ ಮಾಡಿದರು. ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುತ್ತೇವೆ.ಅಂದರೆ ಇನ್ನೂ ಅಸಮಾನತೆ, ಮೂಢನಂಬಿಕೆ ಇದೆ ಎಂದು ಅರ್ಥ.

ಅವರ ಆದರ್ಶಗಳ‌ ಬಗ್ಗೆ ಚಿಂತನೆ ಮಾಡಬೇಕಿದೆ.ಆಗ ಮಾತ್ರ ಬಸವಣ್ಣ ಅವರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಸಣ್ಣ ವಯಸ್ಸಿನಿಂದಲೂ ಈ ಮಠದೊಂದಿಗೆ ಭಕ್ತಿ ಭಾವದ ಸಂಬಂಧವಿದೆ. ನನಗೆ ಪ್ರೇರಣಾ ಸ್ಥಳ ಎಂದರು.

*ಅನ್ನ, ನೀರು ಆಶ್ರಯ, ನೀಡುವ ಹಿರಿಯರ ಸಂಸ್ಕೃತಿ*
ಉತ್ತರ ಕರ್ನಾಟಕದ ಜನರದ್ದು ಯಾವಾಗಲೂ ಸದ್ಭಾವ ಮಾತ್ರವಲ್ಲದೆ ದಾನ ಮಾಡುವ ದೊಡ್ಡ ಮನಸ್ಸಿನ ಜನ. ನೇರ ನುಡಿ, ಸಹೃದಯಿ, ಪರೋಪಕಾರಿ ಗುಣವುಳ್ಳವರು. ಬಂದವರಿಗೆ ಅನ್ನ, ನೀರು ಆಶ್ರಯ, ನೀಡುವುದು ಈ ಭಾಗದ ಹಿರಿಯರ ಸಂಸ್ಕೃತಿ.

ಈ ದೇಶಕ್ಕೆ ದೊಡ್ಡ ಚರಿತ್ರೆ ಇದೆ. ನಮಗೆ ಬೇಕಾಗಿರುವುದು ಚಾರಿತ್ರ್ಯ. ಕರ್ನಾಟಕದಲ್ಲಿ ಚಾರಿತ್ಯ ಆಧಾರಿತ ಬದುಕು ನಡೆಸಲು ನಮ್ಮ ವೀರಶೈವ ಲಿಂಗಾಯತ ಮಠಗಳು ನೂರಾರು ವರ್ಷಗಳಿಂದ ಬಸವಣ್ಣನವರ ವಿಚಾರಗಳನ್ನು ಮನದಾಳದಲ್ಲಿ ಬಿತ್ತಿ, ಮಠಗಳ ನೇತೃತ್ವದಲ್ಲಿ ಸಮಾಜ ಸುಧಾರಣೆ ಮಾಡುವ ಕೆಲಸವನ್ನು, ಶೈಕ್ಷಣಿಕ ಭರಿತ ಸಮಾಜ ನಿರ್ಮಾಣ ದ ಕೆಲಸ ಇಂದು ನಮಗೆ ಚಾರಿತ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ದೇಶ ಕಟ್ಟಡ , ರಸ್ತೆಗಳಿಂದ ದೇಶವಾಗುವುದಿಲ್ಲ.

ಪ್ರತಿಯೊಬ್ಬ ನಾಗರಿಕನೂ ಚಾರಿತ್ರ್ಯವಂತ‌, ದುಡಿಮೆಯಿಂದ ಕೆಲಸ ಮಾಡಿದರೆ ದೇಶ ಮಹಾನ್ ದೇಶವಾಗುತ್ತದೆ. ಅದು ಇಂದಿನ ಅವಶ್ಯಕತೆ ಎಂದರು.

*ಮುರುಘಾ ಮಠದಿಂದ ದಾಸೋಹದ ಪರಿಕಲ್ಪನೆ*
ಧಾರವಾಡ ಮುರುಘಾ ಮಠಕ್ಕೆ ದೊಡ್ಡ ಇತಿಹಾಸ ಇದೆ. ಇಡೀ ಉತ್ತರ ಕರ್ನಾಟಕಕ್ಕೆ ಅನ್ನ, ಜ್ಞಾನ, ಆಶ್ರಯ ಕೊಡುವ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲಿ ಬಹಳ ದೊಡ್ಡ ಕ್ರಾಂತಿಯನ್ನು ಮಾಡಿದೆ.

ಮುರುಘಾ ರಾಜೇಂದ್ರ ಅವರ ಪರಂಪರೆಯ ಈ ಈ ಮಠ ಭಕ್ತಿ ಪ್ರಧಾನವಾದುದು. ಇಲ್ಲಿ ದಾಸೊಹ, ವಿದ್ಯಾರ್ಥಿ ನಿಲಯ, ಧಾರ್ಮಿಕ, ಶೈಕ್ಷಣಿಕ,ಮುಂತಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರಲ್ಲಿ ಸದ್ವಿಚಾರ,ಸದ್ಭಾವನೆ, ಸತ್ಚಾರಿತ್ಯವನ್ನು ಮೂಡಿಸುವ ಕೆಲಸ ಮಾಡಿದೆ. ಅನ್ನ ದಾಸೋಹ, ಜ್ಞಾನ ದಾಸೋಹದ ಪರಿಕಲ್ಪನೆ ಕರ್ನಾಟಕದಲ್ಲಿ ಬಂದಿದ್ದೇ ಮುರುಘಾ ಮಠದಿಂದ.
ಆ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಿರಲಿಲ್ಲ, ಹಾಸ್ಟೆಲ್ ಗಳಿರಲಿಲ್ಲ.

ಗ್ರಾಮೀಣ ಮಕ್ಕಳು ಇಲ್ಲಿಗೆ ಬಂದು ಕಲಿಯುವ ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಪ್ರಜ್ಞೆಯನ್ನು ಎತ್ತಿಹಿಡಿದು, ಸಾಮಾಜಿಕ ಪರಿಕಲ್ಪನೆಯಿಂದ ಮೃತ್ಯುಂಜಯ ಅಪ್ಪಗಳು ಮಾಡಿದ್ದು ಸಾಮಾಜಿಕ ಕ್ರಾಂತಿಯಾಗಿ ಪರಿಣಮಿಸಿದೆ.

ಆಗಿನಿಂದಲೂ ಪ್ರಾರಂಭವಾದ ಅನ್ನ ಮತ್ತು ಜ್ಞಾನ ದಾಸೋಹ 125 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಮೃತ್ಯುಂಜಯಪ್ಪನವರ ತಪ್ಪಸ್ಸಿನ ಫಲವಿದು ಎಂದರು.

*ಪ್ರೇರಣೆ ಪಡೆಯಬೇಕು*
ಯಾವುದಾದರೂ ವಿಚಾರ ಸದ್ವಿಚಾರದಿಂದ ಮಾಡಿದರೆ ಅದು ಯಾವತ್ತೂ ಕೆಟ್ಡದಾಗುವುದಿಲ್ಲ. ಮೃತ್ಯುಂಜಯ ಅಪ್ಪಗಳ ಆದರ್ಶ ನಮಗೆ ಈಗಲೂ ಪ್ರೇರಣೆ.ಅವರು ನಮ್ಮ ನಡುವೆ ಇಲ್ಲದಿದ್ದರೂ ನಮಗೆ ಅವರ ವಿಚಾರಗಳು , ತತ್ವಗಳು ನೆನಪಿಟ್ಟುಕೊಂಡು ಪ್ರೇರಣೆ ಪಡೆಯಬೇಕು ಎಂದರು.

*ಉತ್ತಮ ಸಮಾಜ ನಿರ್ಮಾಣ*
ಸ್ವಾಮಿ ‌ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ.ಸಾವಿನ ನಂತರವೂ ಬದುಕುವವನು ಸಾಧಕ ಎಂದು ಹೇಳಿದ್ದರು. ಇಂದಿಗೂ ಮೃತ್ಯುಂಜಯ ಪ್ಪನವರು ನಮ್ಮ ನಡುವೆ ಬದುಕಿದ್ದಾರೆ, ಪ್ರೇರಣಾ ಶಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ಭಾವನೆಯಿಂದ ನಡೆದುಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.

*ಮಠದ ನಿಜವಾದ ಆಸ್ತಿ ಸದ್ಭಕ್ತರು*
ಧಾರವಾಡದ ಜನರು ವಿಭಿನ್ನ. ಇಡೀ ಸಮಾಜ ಭಕ್ತಿ ಶ್ರದ್ಧೆ ಹಾಗೂ ಸಾತ್ವಿಕತೆಯಿಂದ ಕೂಡಿದೆ. ಇಂಥ ಗುಣಗಳನ್ನು ಬೇರೆಯಲ್ಲಿಯೂ ಕಾಣುವುದಿಲ್ಲ.

ಧಾರವಾಡದ ಜನರ ಗುಣ ಅತ್ಯಂತ ವಿಶೇಷ. ಸರಳ ಸಜ್ಜನಿಕೆಯ ಬದುಕು ನಡೆಸುತ್ತಿದ್ದಾರೆ. ಮಠದ ನಿಜವಾದ ಆಸ್ತಿ ಸದ್ಭಕ್ತರು. ಮಠದ ಬಗ್ಗೆ ಭಕ್ತರಿಗೆ ಗೌರವ ಇರಬೇಕು. ಮಠಕ್ಕೂ ಭಕ್ತರ ಬಗ್ಗೆ ಕಾಳಜಿ‌ ಇರಬೇಕು.

ನಾನು ಇಲ್ಲಿ ಸಿಎಂ ಆಗಿ ಬಂದಿಲ್ಲ. ಮಠದ ಭಕ್ತನಾಗಿ ಬಂದಿದ್ದೇನೆ ನನ್ನ ಜವಾಬ್ದಾರಿ ಹೆಚ್ಚಿದೆ. ನಾಡಿನ ಸಮಗ್ರ ಅಭಿವೃದ್ದಿಗೆ ನಾನು ಶ್ರಮಿಸುತ್ತೇನೆ. ಎಲ್ಲರಿಗೂ ನ್ಯಾಯ ನೀಡುವ , ಸಮಗ್ರ ಅಭಿವೃದ್ಧಿಯ ಕೆಲಸ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮುರಘಾಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಮಲ್ಲಿಮಾರ್ಜುನ ಸ್ವಾಮೀಜಿ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ, ಶ್ರೀ ಗುರುಮಹಾಂತ ಸ್ವಾಮೀಜಿ , ಶಿವಲೀಲಾ ವಿನಯ ಕುಲಕರ್ಣಿ , ಶಾಸಕ ಅರವಿಂದ ಬೆಲ್ಲದ ಮೊದಲಾದವರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *