ಧಾರವಾಡ : ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹೊರವಲಯದ ಬಳಿ ಬುಧವಾರ ಸಂಭವಿಸಿದೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರೇವಣಸಿದ್ದಯ್ಯ ಕುಮಾರ ಇಚ್ಚಂಗಿ (೪೫), ರೇವಣಸಿದ್ದಯ್ಯ ಅವರ ಪತ್ನಿ ವಿಜಯಾ ಇಚ್ಚಂಗಿ (೩೫) ಹಾಗೂ ನಾಗರಾಜ ಕುಮಾರ ಇಚ್ಚಂಗಿ (೪೦) ಎಂದು ಗುರುತಿಸಲಾಗಿದೆ.
ಮೃತರು ಸವದತ್ತಿಯಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಕಾರು ವೇಗವಾಗಿ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ಸಿಗದೆ ಎದುರಿನ ವಾಹನವೊಂದನ್ನು ಓವರ್ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಕಬ್ಬು ತುಂಬಿಕೊಂಡು ಸವದತ್ತಿಯತ್ತ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.