ಅಂತಾರಾಷ್ಟ್ರೀಯ

ಮುಖ್ಯಮಂತ್ರಿ ಭೇಟಿ ಮಾಡಿದ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಡೊಮಿನಿಕ್ ಪೆರೊಟ್ವೆಟ್

*ಸೈಬರ್ ಸುರಕ್ಷತಾ ನೀತಿ ಹಾಗೂ ಶ್ರೇಷ್ಠತಾ ಕೇಂದ್ರಗಳ ಬಗ್ಗೆ ಉತ್ಸುಕತೆ*

ಬೆಂಗಳೂರು prajakiran.com , ಜುಲೈ 29: ಆಸ್ಟೇಲಿಯಾ ದೇಶದ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಡೊಮಿನಿಕ್ ಪೆರೊಟ್ವೆಟ್ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿತು.

ಆಸ್ಟ್ರೀಲಿಯಾ ಸರ್ಕಾರವು ಇಂಡಿಯಾ ಆರ್ಥಿಕ ಕಾರ್ಯತಂತ್ರಕ್ಕಾಗಿ 280 ಮಿಲಿಯನ್ ಡಾಲರ್ ಗಳ ಅನುದಾನವನ್ನು ಒದಗಿಸಿದೆ. ಭಾರತದೊಂದಿಗೆ ಆರ್ಥಿಕ ಪಾಲುದಾರಿಕೆಯನ್ನು ವೃದ್ಧಿಸಲು ಈ ಕಾರ್ಯತಂತ್ರ ಸಹಕಾರಿಯಾಗಲಿದೆ ಎಂದು ಡೊಮಿನಿಕ್ ಪೆರೊಟ್ವೆಟ್ ತಿಳಿಸಿದರು.

ಕರ್ನಾಟಕದಲ್ಲಿ ಸೈಬರ್ ಸುರಕ್ಷತಾ ನೀತಿ ಹಾಗೂ ಶ್ರೇಷ್ಠತಾ ಕೇಂದ್ರಗಳ ಬಗ್ಗೆ ಉತ್ಸುಕತೆ ತೋರಿದ ಅವರು ಆಸ್ಟ್ರೇಲಿಯಾ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಆಸ್ಟ್ರೇಲಿಯಾ ಸತತವಾಗಿ ನಾಲ್ಕು ವರ್ಷಗಳೂ ಭಾಗಿಯಾಗಿದೆ. ಈ ವರ್ಷವೂ ಭಾಗವಹಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಗತ್ತಿನ ವಿವಿಧ ದೇಶಗಳ ಮುಖ್ಯಸ್ಥರು ಹಿಂದೆ ನವದೆಹಲಿಗೆ ಭೇಟಿ ನೀಡುತ್ತಿದ್ದರು.

ಆದರೆ ಈಗ ಅವರೆಲ್ಲರೂ ಬೆಂಗಳೂರಿಗೆ ಇನ್‍ಫೋಸಿಸ್ ಹಾಗೂ ವಿಪ್ರೋ ಮುಂತಾದ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ಜ್ಞಾನವೇ ಶಕ್ತಿ ಎನ್ನುವುದು ಈ ಮೂಲಕ ನಿರೂಪಿತವಾಗಿದೆ.

ಕರ್ನಾಟಕ ರಾಜ್ಯ ಆರ್ ಅಂಡ್ ಡಿ, ಜೆನಿಟಿಕ್ಸ್, ಏರೋಸ್ಪೇಸ್, ಶಿಕ್ಷಣ ಆರೋಗ್ಯ, ನಾವೀನ್ಯತೆ, ಎಲೆಕ್ಟ್ರಿಕ್ ವೆಹಿಕಲ್, ಮುಂತಾದ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು ಹೂಡಿಕೆಗಳಿಗೆ ಪ್ರಶಸ್ತ ಸ್ಥಳ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಣೆ ಕಾಣುತ್ತಿದ್ದು, ರಸ್ತೆ ಸಂಪರ್ಕಗಳು ಉತ್ತಮಗೊಂಡಿವೆ. ಶಾಲೆ, ಆರೋಗ್ಯ ಹಾಗೂ ಡಿಜಿಟಲ್ ಸಂಪರ್ಕಗಳನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸುಧಾರಿಸಲು ನಮ್ಮ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಧ್ಯೆ ಅಸಮಾನತೆ ಇದ್ದು, ಅದರ ನಿವಾರಣೆಗೆ ಸರ್ಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ನಮ್ಮ ಗುರಿ ಎಂದರು.

ಕರ್ನಾಟಕ ಸಂಪದ್ಭರಿತ ರಾಜ್ಯವಾಗಿದ್ದು, ಹತ್ತು ಕೃಷಿ ಹವಾಮಾನ ವಲಯಗಳನ್ನು ಹೊಂದಿದೆ. ಇಲ್ಲಿನ ಜನ ಉದ್ಯಮಶೀಲರಾಗಿದ್ದಾರೆ ಎಂದರು.

ಬೆಂಗಳೂರಿನಲ್ಲಿರಬಹುದಾದ ಸವಾಲುಗಳ ಬಗ್ಗೆ ಡೊಮಿನಿಕ್ ಪೆರೊಟ್ವೆಟ್ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬೆಂಗಳೂರಿನ ವಾಹನಗಳ ಸಂಖ್ಯೆ ಹಾಗೂ ಸಂಚಾರ ದಟ್ಟಣೆ ಸವಾಲುಗಳಾಗಿವೆ.

ಸಂಚಾರ ದಟ್ಟಣೆಯನ್ನು ನಿವಾರಿಸಲು ಸಬ್ ಅರ್ಬನ್ ರೈಲು ಹಾಗೂ ಮೆಟ್ರೋ ಯೋಜನೆಗಳು ಸಹಕಾರಿಯಾಗಿವೆ ಎಂದರು.

ನಿಯೋಗದಲ್ಲಿ ಆಸ್ಟ್ರೀಲಿಯಾ ಕೌನ್ಸಲ್ ಜನರಲ್ ಸಾರಾ ಕಿಲ್ರ್ಯೂ, ಮೈಕಲ್ ಕೌಟ್ಸ್ ಟ್ರಾಟ್ಟರ್, ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *